Sunday, March 3, 2013

ಅನುಮತಿ ಇಲ್ಲದೇ ಚುನಾವಣಾ ಜಾಹಿರಾತು,ಮಾಧ್ಯಮ ಸಮಿತಿಯಿಂದ ಚುನಾವಣಾ ಆಯೋಗಕ್ಕೆ ದೂರು

ಮಂಗಳೂರು, ಮಾರ್ಚ್.03 : ಜಿಲ್ಲಾ ಮಾಧ್ಯಮ ಸಮಿತಿಯ ಅನುಮತಿ ಇಲ್ಲದೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಜಾಹೀರಾತುಗಳು ಮಾಧ್ಯಮಗಳಲ್ಲಿ ಪ್ರಕಟಗೊಳ್ಳುತ್ತಿದ್ದು, ಮಾಧ್ಯಮ ಸಮಿತಿ ಗಮನಿಸಿದೆಯಲ್ಲದೆ; ಈ ಬಗ್ಗೆ ಮೌಖಿಕ ದೂರುಗಳು ಬಂದ ಹಿನ್ನಲೆಯಲ್ಲಿ ಅಕ್ರಮ ಜಾಹೀರಾತುಗಳ ಬಗ್ಗೆ ದೂರನ್ನು ಚುನಾವಣಾ ಆಯೋಗಕ್ಕೆ ನೀಡಲಾಗುವುದು ಎಂದು ಸಮಿತಿಯ ಸಂಚಾಲಕರು ತಿಳಿಸಿದ್ದಾರೆ.
ಇದೇ ರೀತಿ ಚುನಾವಣಾ ತರಬೇತಿಗೆ ಹಾಜರಾಗದ ಮತಗಟ್ಟೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಅಪರ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಅಧಿಕಾರಿಗಳು ಚುನಾವಣಾ ಕರ್ತವ್ಯದಲ್ಲಿ ನಿರ್ಲಕ್ಷ್ಯ ವಹಿಸುವುದನ್ನು ಸಹಿಸಲಾಗದು ಎಂದು ಅವರು ಸ್ಪಷ್ಟ ಪಡಿಸಿದ್ದಾರೆ.
ತಮ್ಮ ಖರ್ಚು ವೆಚ್ಚಗಳ ವಿವರ ನೀಡದವರ ಉಮೇದುವಾರಿಕೆ ವಜಾ: ಚು.ಆಯೋಗ ಎಚ್ಚರಿಕೆ
    ದಿನಾಂಕ 02-03-2013 ಹಾಗೂ 05-03-2013 ರಂದು ಮಂಗಳೂರು ಮಹಾನಗರಪಾಲಿಕೆಯ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಚುನಾವಣೆಗೆ ಸಂಬಂಧಿಸಿದಂತೆ ಖರ್ಚು ವೆಚ್ಚ ವಿವರಗಳನ್ನು ಮಂಗಳೂರು ಮಹಾನಗರಪಾಲಿಕೆಯ ಮುಖ್ಯ ಲೆಕ್ಕಾಧಿಕಾರಿ ಹಾಗೂ ಚುನಾವಣಾ ಲೆಕ್ಕ ಪರಿಶೋಧಕರಿಗೆ ಸಲ್ಲಿಸಲು ಸೂಚಿಸಲಾಗಿತ್ತು. ಆದರೆ ಈ ದಿನದವರೆಗೆ ಕೇವಲ ಶೇ 40 ರಷ್ಟು ಚುನಾವಣಾ ಅಭ್ಯರ್ಥಿಗಳು ಮಾತ್ರ ಚುನಾವಣೆಗೆ ಸಂಬಂಧಿಸಿದಂತೆ ತಮ್ಮ ಖರ್ಚು ವೆಚ್ಚ ವಿವರಗಳನ್ನು ನೀಡಿದ್ದು ಬಾಕಿ ಅಭ್ಯರ್ಥಿಗಳು ಯಾವುದೇ ಪ್ರತಿಕ್ರಿಯೆ ನೀಡದಿರುವುದು ಕಂಡು ಬಂದಿರುತ್ತದೆ. ಈ ಬಗ್ಗೆ ಚುನಾವಣಾ ಆಯೋಗದ ವೀಕ್ಷಕರು ತಮ್ಮ ತೀವ್ರವಾದ ಅಸಮಧಾನವನ್ನು ವ್ಯಕ್ತಪಡಿಸಿರುತ್ತಾರೆ. ಲೆಕ್ಕ ಪತ್ರವನ್ನು ಸಲ್ಲಿಸದ ಅಭ್ಯರ್ಥಿಗಳು ಸದ್ರಿ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ತಮ್ಮ ಖರ್ಚು ವೆಚ್ಚಗಳ ವಿವರವನ್ನು ನೀಡಬೇಕಾಗಿರುತ್ತದೆ, ಇಲ್ಲವಾದಲ್ಲಿ ಅಂತಹವರ ಉಮೇದುವಾರಿಕೆಯನ್ನು ವಜಾಗೊಳಿಸಲು ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ಮಹಾನಗರಪಾಲಿಕೆಯ ಮುಖ್ಯ ಲೆಕ್ಕಾಧಿಕಾರಿ ಹಾಗೂ ಚುನಾವಣಾ ಲೆಕ್ಕ ಪರಿಶೋಧಕರು ತಿಳಿಸಿದ್ದಾರೆ.