Tuesday, March 19, 2013

ಮತದಾನದ ಬಗ್ಗೆ ಜಾಗೃತಿ ಮೂಡಿಸಲು 'ಸ್ವೀಪ್' ಸಮಿತಿ ಸಭೆ

ಮಂಗಳೂರು,ಮಾರ್ಚ್.19 :- ಶೇಕಡವಾರು ಮತದಾನದ ಪ್ರಮಾಣ ಹೆಚ್ಚಿಸಲು ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಅರ್ಹ ಮತದಾರರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಲು 'ಮತದಾರರ ಶಿಕ್ಷಣ, ಜಾಗೃತಿ ಮತ್ತು ಸಮರ್ಪಕ ಪಾಲ್ಗೊಳ್ಳುವಿಕೆ' ಕುರಿತು ಬಹುಮಾಧ್ಯಮ ಪ್ರಚಾರಾಂದೋಲನ ಆರಂಭಿಸುವ ಕುರಿತು ಜಿಲ್ಲಾಧಿಕಾರಿ  ಎನ್ ಪ್ರಕಾಶ್ ಅವರ ಅಧ್ಯಕ್ಷತೆಯಲ್ಲಿ ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಯಿತು.
'ನಿಮ್ಮ ಮತ ನಿಮ್ಮ ಹಕ್ಕು'
'ನಿಮ್ಮ ಮತ ನಿಮ್ಮ ಹಕ್ಕು' ಸುಭದ್ರ ಪ್ರಜಾಪ್ರಭುತ್ವಕ್ಕಾಗಿ ಸರ್ವರ ಪಾಲ್ಗೊಳ್ಳುವಿಕೆ ಎಂಬ ಧ್ಯೇಯದೊಂದಿಗೆ 1.1.13 ರಂದು 18 ವರ್ಷ ತುಂಬಿದವರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸುವ ಕುರಿತು ಮಾಹಿತಿ ನೀಡುವ ಯೋಜನೆ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಪ್ರಥಮ ಹಂತದ ಜಾಗೃತಿ ಕಾರ್ಯಕ್ರಮದಲ್ಲಿ ಮತದಾರರ ಹೆಸರನ್ನು ನೋಂದಾಯಿಸುವ ಬಗ್ಗೆ ಎಲ್ಲರಿಗೂ ಮಾಹಿತಿ ನೀಡುವುದು. ಎರಡನೇ ಹಂತದಲ್ಲಿ ಮತದಾನದಿಂದಾಗುವ ಪ್ರಯೋಜನಗಳ ಬಗ್ಗೆ ಮತದಾರರಿಗೆ ಮಾಹಿತಿ ನೀಡುವುದು. ಮೂರನೇ ಹಂತದಲ್ಲಿ ನಿರ್ಭೀತ ಮತದಾನಕ್ಕೆ ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಜನರಿಗೆ ತಲುಪಿಸುವ ಮೂರು ಹಂತದ ಪ್ರಚಾರ ಕಾರ್ಯಕ್ರಮ ಹಮ್ಮಿಕೊಳ್ಳಲು ಸಭೆ ನಿರ್ಧರಿಸಿತು. ಇದಕ್ಕಾಗಿ ಸಂವಹನದ ವಿವಿಧ ಮಾದರಿಗಳ ಮುಖಾಂತರ ಟಾರ್ಗೆಟ್ ಗ್ರೂಪ್ ತಲುಪುವ ಕುರಿತು ಸಭೆ ಚರ್ಚಿಸಿತು.
ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮತ್ತು ಮಹಾನಗರಪಾಲಿಕೆಯಲ್ಲಿ ಫಾರ್ಮ್ ನಂಬರ್ 6 ಪಡೆಯಲು ಪ್ರತ್ಯೇಕ ಕೌಂಟರ್ ಗಳನ್ನು ಆರಂಭಿಸುವುದಾಗಿಯೂ ಹಾಗೂ ಮಾಹಿತಿ ಫಲಕಗಳು ಮತ್ತು ಜಾಥಾ ಮೂಲಕ ಮಾಹಿತಿಯನ್ನು ನೀಡಲು ಕ್ರಮಕೈಗೊಳ್ಳುವುದಾಗಿ ಪಾಲಿಕೆ ಆಯುಕ್ತರಾದ ಡಾ ಹರೀಶ್ ಹೇಳಿದರು. ಸ್ವೀಪ್ ಯೋಜನೆಯ ಸದುದ್ದೇಶಗಳನ್ನು ಸಭೆಗೆ ವಿವರಿಸಿದ ಅವರು, ಮತದಾರರ ಜಾಗೃತಿ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಪ್ರತಿಯೊಬ್ಬರೂ ಪರಿಣಾಮಕಾರಿಯಾಗಿ ತೊಡಗಿಕೊಳ್ಳಬೇಕು; ಇದು ಭಾರತ ಚುನಾವಣಾ ಆಯೋಗದ ನಿರ್ದೇಶನ ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಶ್ರೀ ಕೆ ಎ ದಯಾನಂದ ಅವರು ಮಾತನಾಡಿ, ಈ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿರುವ ಬೂತು ಮಟ್ಟದ ಅಧಿಕಾರಿ, ಗ್ರಾಮಲೆಕ್ಕಿಗರು, ಕಂದಾಯ ನಿರೀಕ್ಷಕರು, ತಹಸೀಲ್ದಾರರು, ಕಂದಾಯಾಧಿಕಾರಿ, ಮಹಾನಗರಪಾಲಿಕೆ, ಸಹಾಯಕ ಕಮಿಷನರ್ ಅವರಿಗೆ ಅಗತ್ಯ ಹಾಗೂ ಪೂರಕ ಪ್ರೇರಣಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ನಿರ್ಲಕ್ಷ್ಯ ವಹಿಸಿದರೆ ಅಮಾನತು ಮಾಡಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ನೀಡಿದರು.
ಸ್ವೀಪ್ ಸಮಿತಿಯ ಅಧ್ಯಕ್ಷರು ಸಿಇಒ ಜಿಲ್ಲಾಪಂಚಾಯತ್, ಆಯುಕ್ತರು ಮಹಾನಗರಪಾಲಿಕೆ, ಜಿಲ್ಲಾ ವಾರ್ತಾಧಿಕಾರಿ, ಉಪನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ, ಮಂಗಳೂರು. ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ, ಜಿಲ್ಲಾ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖಾಧಿಕಾರಿ, ಉಪನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ,ಉಪನಿರ್ದೇಶಕರು ಪದವಿಪೂರ್ವ ಶಿಕ್ಷಣ ಮಂಡಳಿ, ಜಂಟಿ ನಿರ್ದೇಶಕರು ಜಿಲ್ಲಾ ಕೈಗಾರಿಕಾ ಕೇಂದ್ರ, ಜಿಲ್ಲಾಯುವಜನಸೇವಾ ಮತ್ತು ಕ್ರೀಡಾಧಿಕಾರಿ ಮಂಗಳಾ ಸ್ಟೇಡಿಯಂ, ಜಿಲ್ಲಾ ಸಮನ್ವಯಾಧಿಕಾರಿ ರಾಷ್ಟ್ರೀಯ ಸೇವಾ ಯೋಜನೆ (ಎನ್ ಎಸ್ ಎಸ್). ಮುಖ್ಯಾಧಿಕಾರಿಗಳು ಪುರಸಭೆ ಮೂಡಬಿದ್ರೆ, ಉಳ್ಳಾಲ, ಬಂಟ್ವಾಳ ಮತ್ತು ಪುತ್ತೂರು, ಮುಖ್ಯಾಧಿಕಾರಿ ಪಟ್ಟಣ ಪಂಚಾಯಿತಿ ಬೆಳ್ತಂಗಡಿ ಮತ್ತು ಸುಳ್ಯ ಇವರುಗಳಿರುತ್ತಾರೆ.
ಇಂದು ನಡೆದ ಸಭೆಗೆ ಗೈರು ಹಾಜರಾದ ಅಧಿಕಾರಿಗಳಿಗೆ ಚುನಾವಣೆ ಜರೂರು ಕರ್ತವ್ಯದಡಿ ನೋಟೀಸು ನೀಡಲೂ ಜಿಲ್ಲಾಧಿಕಾರಿಗಳು ಸೂಚಿಸಿದರು.