Friday, March 15, 2013

ಚುನಾವಣೆ ಪೂರ್ವ ಸಿದ್ದತೆ: ವಿಡಿಯೋ ಕಾನ್ಫರೆನ್ಸ್

ಮಂಗಳೂರು, ಮಾರ್ಚ್.15:- ಮತದಾರರ ಪಟ್ಟಿಯಿಂದ ಅರ್ಹರ ಹೆಸರು ಬಿಟ್ಟು ಹೋಗದಂತೆ ಹೆಚ್ಚಿನ ಮುತುವರ್ಜಿ ವಹಿಸಿ;ಮತದಾರರ ಗುರುತು ಚೀಟಿ (ಎಪಿಕ್ ಕಾರ್ಡ್) ಪರ್ಸೆಂಟೇಜ್ ನಲ್ಲಿ ಪ್ರಗತಿ ದಾಖಲಿಸಿ ಎಂದು ಮುಖ್ಯ ಚುನಾವಣಾಧಿಕಾರಿಗಳಾದ  ಅನಿಲ್ ಕುಮಾರ್ ಝಾ ಸೂಚಿಸಿದರು.
             ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಚುನಾವಣಾ ಪ್ರಕ್ರಿಯೆ ಪ್ರಗತಿ ಪರಿಶೀಲಿಸಿದ ಅವರು, ಚುನಾವಣೆಗೆ ಸನ್ನದ್ಧರಾಗಿ ಎಂದು ಜಿಲ್ಲಾಧಿಕಾರಿಗಳಿಗೆ ಹೇಳಿದರು. ಈಗಾಗಲೇ ಮುಗಿದಿರುವ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಹಿನ್ನಲೆಯನ್ನು ಗಮನದಲ್ಲಿರಿಸಿ, ಅಲ್ಲಿ ಸಂಭವಿಸಿದ ಲೋಪಗಳು ಮರುಕಳಿಸದಂತೆ, ಮತದಾರರ ಹೆಸರು ಕೈಬಿಟ್ಟು ಹೋಗದಂತೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸುವ ಕೆಲಸವಾಗಬೇಕು. ಜಿಲ್ಲಾಧಿಕಾರಿಗಳು ಈ ಪ್ರಕ್ರಿಯೆಯನ್ನು ಖುದ್ದಾಗಿ ಗಮನಿಸಬೇಕು; ವೋಟರ್ ಸ್ಲಿಪ್ ಗಳನ್ನು ಚುನಾವಣಾ ಕಚೇರಿಯ ಈ ಬಾರಿ ವಿತರಿಸಲಿದೆ. ಯಾವುದೇ ಕ್ಷಣದಲ್ಲಿ ಚುನಾವಣೆ ಘೋಷಣೆಯಾಗಲಿದ್ದು, ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಪ್ರದೇಶಗಳ ಪಟ್ಟಿಯನ್ನು ಸಿದ್ಧವಾಗಿರಿಸಿ ಎಂದು ಹೇಳಿದರು.
ಪೊಲೀಸ್ ಇಲಾಖೆಯು ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕು; ಮುಕ್ತ ಹಾಗೂ ನ್ಯಾಯಯುತ ಚುನಾವಣೆಗೆ ವಾತಾವರಣ ನಿರ್ಮಿಸುವ ಹೊಣೆ ಇಲಾಖೆಯ ಮೇಲಿದೆ ಎಂದರು. ಸದಾಚಾರ ಸಂಹಿತೆ ಪಾಲನೆ, ಖರ್ಚು ವೆಚ್ಚದ ವಿವರ, ರಿಟರ್ನಿಂಗ್ ಆಫೀಸರ್ ಗಳ ನೇಮಕ ಕುರಿತ ಹೊಣೆಯನ್ನು ವಿಶೇಷ ಅಧಿಕಾರಿ ಪಂಕಜ್ ಕುಮಾರ್ ಪಾಂಡೆ ಅವರು ನೋಡಿಕೊಳ್ಳಲಿದ್ದು, ಇಲಾಖೆಗೆ ಪ್ರತ್ಯೇಕ ಚುನಾವಣಾ ವೀಕ್ಷಕರು ಆಗಮಿಸಿ ಪರಿಶೀಲನೆ ನಡೆಸಲಿರುವರು.
ಮತದಾರರ ಜಾಗೃತಿ ಮತ್ತು ಪಾಲ್ಗೊಳ್ಳುವಿಕೆ ಯೋಜನೆ
(sveep- systematic Voters Education and Electoral Participation Plan) ಗೆ ಚುನಾವಣಾ ಆಯೋಗ ಹೆಚ್ಚಿನ ಒತ್ತು ನೀಡಿದ್ದು, 'ಸುಭದ್ರ ಪ್ರಜಾಪ್ರಭುತ್ವಕ್ಕಾಗಿ ಸರ್ವರ ಪಾಲ್ಗೊಳ್ಳುವಿಕೆ' ಅನುಷ್ಠಾನಕ್ಕೆ ಬರಬೇಕಿದ್ದು ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿ ಜಾರಿಗೆ ಬರಲಿದೆ. ಸಮಿತಿಯು ಮತದಾನ ಪ್ರಕ್ರಿಯೆಯಲ್ಲಿ ಸರ್ವರೂ ಪಾಲ್ಗೊಳ್ಳುವಂತೆ ಮಾಡಲು ಮಾಧ್ಯಮ ಹಾಗೂ ವಿವಿಧ ಸಂವಹನ ಮಾದರಿಗಳ ಸಹಕಾರದಿಂದ ಮತದಾನದ ಅಗತ್ಯದ ಬಗ್ಗೆ ಜಾಗೃತಿ ಮೂಡಿಸಲಿದೆ.
ಚುನಾವಣಾ ತಯಾರಿಗೆ ಪೊಲೀಸ್ ಇಲಾಖೆಯ ಅಗತ್ಯಗಳ ಬಗ್ಗೆ ಪೊಲೀಸ್ ಕಮಿಷನರ್ ಮನಿಷ್ ಕರ್ಬೀಕರ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಗೋಯಲ್ ಅವರು ಮುಖ್ಯ ಚುನಾವಣಾಧಿಕಾರಿಗಳ ಗಮನಸೆಳೆದರು. ಜಿಲ್ಲಾಧಿಕಾರಿ  ಎನ್ ಪ್ರಕಾಶ್ ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚುನಾವಣಾ ಸಂಬಂಧಿ ಪ್ರಕ್ರಿಯೆಗಳ ಸಮಗ್ರ ಮಾಹಿತಿಯನ್ನು ಮುಖ್ಯ ಚುನಾವಣಾಧಿಕಾರಿಗಳಿಗೆ ನೀಡಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ ಕೆ ಎನ್ ವಿಜಯಪ್ರಕಾಶ್, ಪಾಲಿಕೆ ಆಯುಕ್ತರಾದ ಡಾ ಹರೀಶ್ ಅವರು ಉಪಸ್ಥಿತರಿದ್ದರು.