Friday, October 19, 2012

ರಾಜ್ಯೋತ್ಸವ ಪೂರ್ವಭಾವಿ ಸಭೆ

ಮಂಗಳೂರು, ಅಕ್ಟೋಬರ್. 19 :- ನವೆಂಬರ್ 1 ರಂದು ವಿಜೃಂಭಣೆಯಿಂದ, ಅರ್ಥಪೂರ್ಣವಾಗಿ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವವನ್ನು ಆಚರಿಸಲು ಅಕ್ಟೋಬರ್ 18 ರಂದು ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪಗೌಡ ಅವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆಯನ್ನು ಆಯೋಜಿಸಲಾಗಿತ್ತು.
ಸಭೆಯನ್ನು ನಿರ್ವಹಿಸಿದ ಅಪರ ಜಿಲ್ಲಾಧಿಕಾರಿ ದಯಾನಂದ ಕೆ ಎ ಅವರು, ಎಲ್ಲ ಇಲಾಖೆಗಳ ಅಧಿಕಾರಿಗಳಿಗೆ ನಿಗದಿತ ಹೊಣೆಗಾರಿಕೆಯನ್ನು ವಹಿಸಿದರಲ್ಲದೆ, ನಿಗದಿತ ಸಮಯ 7.45ಕ್ಕೆ ಜ್ಯೋತಿ ವೃತ್ತದಿಂದ ನೆಹರು ಮೈದಾನಕ್ಕೆ ಮೆರವಣಿಗೆ ಹೊರಡಬೇಕೆಂದರು. ಕಳೆದ ವರ್ಷ ವಿವಿಧ ಇಲಾಖೆಗಳ ಸಹಕಾರ ಹಾಗೂ ಸಮನ್ವಯದಿಂದ ಅತ್ಯಾಕರ್ಷಕ ಮೆರವಣಿಗೆ ರೂಪುತಳೆದಿದ್ದು, ಈ ಬಾರಿಯೂ ಮಹಾನಗರಪಾಲಿಕೆ, ಜಿಲ್ಲಾ ಪಂಚಾಯತ್, ಆರೋಗ್ಯ, ಅರಣ್ಯ ಇಲಾಖೆ, ಶಿಕ್ಷಣ ಇಲಾಖೆ, ಕೆ ಎಸ್ ಆರ್ ಟಿಸಿ ಪ್ರವಾಸೋದ್ಯಮ ಇಲಾಖೆಗಳ ಸಹಕಾರ ಬೇಕೆಂದು ಹೇಳಿದರು. ಈ ಸಂಬಂಧ ಪೂರಕ ನೆರವನ್ನು ಒದಗಿಸಲು ಜಿಲ್ಲಾಡಳಿತ ಬದ್ಧವಾಗಿದ್ದು, ಎಲ್ಲರೂ ಆಸಕ್ತಿಯಿಂದ ಮೆರವಣಿಗೆಯನ್ನು ಯಶಸ್ಸು ಗೊಳಿಸಬೇಕೆಂದು ಕೋರಿದರು.
7.45ಕ್ಕೆ ಮೆರವಣಿಗೆ ಜ್ಯೋತಿ ವೃತ್ತದಿಂದ ಆರಂಭಗೊಂಡು 8.45ಕ್ಕೆ ನೆಹರು ಮೈದಾನ ತಲುಪುವುದು. 8.50ರಿಂದ ಶಾಲಾ ಮಕ್ಕಳಿಂದ ಕನ್ನಡ ನಾಡಗೀತೆಗಳು, 9 ಗಂಟೆಗೆ ಧ್ವಜಾರೋಹಣ, 9 ಗಂಟೆಗೆ ರಾಜ್ಯೋತ್ಸವ ಸಂದೇಶ, ಪಥಸಂಚಲನ ಹಾಗೂ ಸಾಧಕರಿಗೆ ಸನ್ಮಾನ ಮತ್ತು ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಅಪರಾಹ್ನ 3 ಗಂಟೆಗೆ ಪೊಲೀಸು ಬ್ಯಾಂಡಿನೊಂದಿಗೆ ಕಾರ್ಯಕ್ರಮ ಪುರಭವನದಲ್ಲಿ ಆರಂಭಗೊಳ್ಳಲಿದ್ದು, 6.30ಕ್ಕೆ ಮುಕ್ತಾಯಗೊಳ್ಳಲಿದೆ. ರಾಜ್ಯೋತ್ಸವ ಆಚರಣೆಯಲ್ಲಿ ಯಾವುದೇ ಚ್ಯುತಿ ಬಾರದಿರಲು ವಿವಿಧ ಇಲಾಖಾಧಿಕಾರಿಗಳ ಅಧ್ಯಕ್ಷತೆಯಲ್ಲಿ  ಉಪಸಮಿತಿ ರಚಿಸಲಾಯಿತು.
ಇದೇ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ಲಾಸ್ಟಿಕ್ ಮುಕ್ತ ಗೊಳಿಸುವ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಮಂಗಳಾ ಕ್ರೀಡಾಂಗಣದಿಂದ ವಿವಿಧ ಶಾಲಾ, ಕಾಲೇಜು ಹಾಗೂ ಸರ್ಕಾರೇತರ ಸಂಘ ಸಂಸ್ಥೆಗಳ ಸಹಕಾರದಿಂದ ಅರಿವು ಜಾಥಾ ಆಯೋಜಿಸಲು ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕರಾದ ಸುರೇಶ್ ಕುಮಾರ್ ಅವರಿಗೆ ಜಿಲ್ಲಾಧಿಕಾರಿಗಳು ಹೊಣೆ ವಹಿಸಿದರು. 
ಸಭೆಯಲ್ಲಿ ಮಹಾನಗರಪಾಲಿಕೆ ಆಯುಕ್ತರಾದ ಡಾ ಹರೀಶ್ ಕುಮಾರ್, ವಿದ್ಯಾಂಗ ಉಪನಿರ್ದೇಶಕರಾದ ಮೋಸೆಸ್ ಜಯಶೇಖರ್, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರ, ಕನ್ನಡ ಸಂಸ್ಕೃತಿ ಇಲಾಖೆ ಅಧಿಕಾರಿ ಮಂಗಳಾ ವೆಂ. ನಾಯಕ್, ತಹಸೀಲ್ದಾರ್ ರವಿಚಂದ್ರ ನಾಯಕ್ ಅವರು ಉಪಸ್ಥಿತರಿದ್ದರು.