Tuesday, October 30, 2012

ಸಕಾಲ ವ್ಯಾಪ್ತಿಗೆ 267 ಸೇವೆ: ನಾಲ್ಕು ಜಿಲ್ಲೆಗಳು ಪೈಲೆಟ್ ಯೋಜನೆಯಡಿ

ಮಂಗಳೂರು, ಅಕ್ಟೋಬರ್. 30 : ನವೆಂಬರ್ ಎರಡರಿಂದ 'ಸಕಾಲ' ವ್ಯಾಪ್ತಿಗೆ ಹೊಸ 116 ಸೇವೆಗಳನ್ನು ಸೇರ್ಪಡೆಗೊಳಿಸಲಾಗಿದ್ದು, ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ನವೆಂಬರ್ ಎರಡರಿಂದ ಈ ಸೇವೆಗಳು ಪೈಲಟ್ ಯೋಜನೆಯಡಿ ಕಾರ್ಯಾನುಷ್ಠಾನಗೊಳ್ಳಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪಗೌಡ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿ, ಧಾರವಾಡದಲ್ಲಿ, ಚಿತ್ರದುರ್ಗದಲ್ಲಿ, ಬೀದರ್ ನ ಔರಾದ್ ನಲ್ಲಿ ಹೊಸ ಸೇವೆಗಳು ಪೈಲಟ್ ಯೋಜನೆಯಡಿ ಅನುಷ್ಠಾನಗೊಳ್ಳಲಿದೆ. ಪಶುಸಂಗೋಪನೆ, ಮೀನುಗಾರಿಕೆ, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ, ಪ್ರಾಚ್ಯವಸ್ತು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಾರ್ತಾ ಇಲಾಖೆ, ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ, ಒಳಾಡಳಿತ ಇಲಾಖೆ, ಬೃಹತ್ ಬೆಂಗಳೂರು ಮಹಾನಗರಪಾಲಿಕೆ, ಕೊಳಚೆ ಅಭಿವೃದ್ಧಿ ಮಂಡಳಿ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಸೇವೆಗಳು ಸಕಾಲ ಸೇವೆಯಡಿ ಸೇರ್ಪಡೆಗೊಂಡಿವೆ.
ಮಾರ್ಚ್ ನಲ್ಲಿ ಜಿಲ್ಲೆಯ ಪುತ್ತೂರಿನಿಂದ ಜಾರಿಯಾದ ಸ'ಕಾಲ ಯೋಜನೆಯಡಿ 151 ಸೇವೆಗಳನ್ನು ನೀಡಲಾಗುತ್ತಿದ್ದು, ಈಗ 116 ಸೇವೆಗಳನ್ನು ಹೊಸದಾಗಿ ಸೇರ್ಪಡೆಗೊಳಿಸಲಾಗಿದೆ. ಇದರಿಂದಾಗಿ ಒಟ್ಟು 267 ಸೇವೆಗಳು ಸಕಾಲ ಕಾಯಿದೆಯಡಿ ಸೇರ್ಪಡೆಗೊಂಡು ಜನರಿಗೆ ಅನುಕೂಲವಾಗಲಿದೆ. ಈ ಬಾರಿಯೂ ನೂತನ ಸೇವೆಗಳಿಗೆ ಜಿಲ್ಲೆಯಲ್ಲಿ ಪೈಲೆಟ್ ಪ್ರಾಜೆಕ್ಟ್ ನಡಿ ಪುತ್ತೂರನ್ನು ಆರಿಸಲಾಗಿದೆ.
ಅಕ್ಟೋಬರ್ 30ರವರೆಗೆ ಸಕಾಲ ಕಾಯಿದೆಯಡಿ ಜಿಲ್ಲೆಯಲ್ಲಿ 4,8,412 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, 3.90,085 ಅರ್ಜಿಗಳನ್ನು ವಿಲೇ ಮಾಡಲಾಗಿದೆ. 18,361 ಅರ್ಜಿಗಳನ್ನು ತಿರಸ್ಕರಿಸಲಾಗಿದೆ.

ಸಕಾಲ ಯೋಜನೆಗೆ  ಜಿಲ್ಲೆಯ ನೋಡಲ್ ಅಧಿಕಾರಿಯಾಗಿರುವ ಅಪರ ಜಿಲ್ಲಾಧಿಕಾರಿ ದಯಾನಂದ್ ಅವರು ಮಾಹಿತಿ ನೀಡಿ ಪುತ್ತೂರು ತಾಲೂಕಿನಲ್ಲಿ ತ್ವರಿತವಾಗಿ ಸಕಾಲ ಕಾಯಿದೆಯಡಿ ಬರುವ ಅರ್ಜಿಗಳನ್ನು ವಿಲೇ ಮಾಡಲಾಗುತ್ತಿದೆ ಎಂದರು. ಮೆಸ್ಕಾಂ ಮತ್ತು ಸಮಾಜ ಕಲ್ಯಾಣ ಇಲಾಖೆಯನ್ನು ಸಕಾಲ ಸೇವಾ ವ್ಯಾಪ್ತಿಗೆ ಸೇರಿಸುವ ಸಂಬಂಧ ನಿರ್ಧಾರ ಶೀಘ್ರದಲ್ಲೇ ಪ್ರಕಟವಾಗಬಹುದು ಎಂದೂ ಅವರು ಹೇಳಿದರು.