Thursday, October 11, 2012

ನ. 1 ರಿಂದ ಮಂಗಳೂರು ತಾಲೂಕಿನಲ್ಲಿ ಪ್ಲಾಸ್ಟಿಕ್ ನಿಷೇಧ: ಜಿಲ್ಲಾಧಿಕಾರಿ

ಮಂಗಳೂರು, ಅಕ್ಟೋಬರ್. 11:ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ಲಾಸ್ಟಿಕ್ ಹಾವಳಿಯಿಂದ ಮುಕ್ತಗೊಳಿಸುವ ನಿಟ್ಟಿನಲ್ಲಿ ಹಂತಹಂತವಾಗಿ ಪ್ಲಾಸ್ಟಿಕ್ ನಿಷೇಧ ಜಾರಿ ಮಾಡಲು ಜಿಲ್ಲಾಡಳಿತ ನಿರ್ಧರಿಸಿದೆ. ಪ್ರಾಯೋಗಿಕವಾಗಿ ಮೂಡಬಿದ್ರೆಯಲ್ಲಿ ಜಾರಿಗೆ ತಂದ ಪ್ಲಾಸ್ಟಿಕ್ ನಿಷೇಧ, ಮುಂದಿನ ಹಂತವಾಗಿ ನವೆಂಬರ್ 1ರಿಂದ ಮಂಗಳೂರು ನಗರ ಹಾಗೂ ತಾಲೂಕಿನಲ್ಲಿ ಜಾರಿಗೆ ಬರಲಿದೆ ಎಂದು ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪಗೌಡ ಅವರು ಹೇಳಿದ್ದಾರೆ.
ಇಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ವಿವಿಧ ಸಂಘಟನೆಗಳು ಹಾಗೂ ಅಧಿಕಾರಿಗಳ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಜಿಲ್ಲೆಯ ಪ್ರಜ್ಞಾವಂತ ಜನರ ಸಹಕಾರ ಪ್ಲಾಸ್ಟಿಕ್ ಹಾವಳಿಯನ್ನು ನಿಷೇಧಿಸಲು ಅಗತ್ಯವಿದ್ದು, ಸರ್ಕಾರದ ಆದೇಶ, ಯೋಜನೆಗಳ ಯಶಸ್ವಿಗೆ ಜನರ ಸಹಕಾರಬೇಕೆಂದು ಭಿನ್ನವಿಸಿದ್ದಾರೆ.
ಸಭೆಯಲ್ಲಿ ಪ್ಲಾಸ್ಟಿಕ್ ನಿಯಂತ್ರಣದ ಕುರಿತು ಜಾಗೃತಿ ಮೂಡಿಸಿದ ಸಂಘಸಂಸ್ಥೆಗಳು ಮತ್ತು ಪ್ಲಾಸ್ಟಿಕ್ ಬಳಕೆದಾರರು, ಉತ್ಪಾದಕರು ಹಾಗೂ ಕೆನರಾ ಚೇಂಬರ್ಸ್ ನವರು ಈ ಸಂಬಂಧ ನೀಡಿದ ಸಲಹೆಗಳನ್ನು ಆಲಿಸಿದ ಬಳಿಕ ಹಂತ ಹಂತವಾಗಿ ಪ್ಲಾಸ್ಟಿಕ್ ನಿಷೇಧವನ್ನು ಜಾರಿಗೆ ತರಲಾಗುವುದು ಎಂದರು.
ಈಗಾಗಲೇ 40ಮೈಕ್ರಾನ್ ಗಿಂತ ಕಡಿಮೆ ಇರುವ ಪ್ಲಾಸ್ಟಿಕ್ ಕೈಬಳಕೆ ಚೀಲಗಳನ್ನು ನಿಷೇಧಿಸಲಾಗಿದೆ. ಪಾಲಿಕೆ ನಿರಂತರವಾಗಿ ಇಂತಹ ಉತ್ಪಾದಕರ ವಿರುದ್ಧ ದಾಳಿ ನಡೆಸಿ ದಂಡ ಕಟ್ಟಿಸಿಕೊಂಡಿದೆಯಲ್ಲದೆ, ಬಿಗಿ ಕಾನೂನು ಕ್ರಮಗಳನ್ನು ಕೈಗೊಂಡಿದೆ.  ನಗರದ ಹಲವು ಕಾಲೇಜುಗಳು,ಸಂಘಸಂಸ್ಥೆಗಳ ಸಹಕಾರದಿಂದ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ನಿಷೇಧದ ಬಗ್ಗೆ ಕ್ರಮಕೈಗೊಳ್ಳುವಂತೆ ಹಲವು ಬಾರಿ ಸೂಚನೆ ನೀಡಿದ್ದಾರೆ.
ಆದರೆ ಜಿಲ್ಲಾಡಳಿತ ನಿಷೇಧ ಆದೇಶ ಜಾರಿಗೆ ತರುವ ಮೊದಲು ಸಾಧಕ ಬಾಧಕಗಳನ್ನು ಗಂಭೀರವಾಗಿ ಅಧ್ಯಯನ ಮಾಡಿ ಕ್ರಮಕೈಗೊಳ್ಳಲು ನಿರ್ಧರಿಸಿದೆ. ಪ್ರಥಮ ಹಂತವಾಗಿ ನವೆಂಬರ್ ಒಂದರಿಂದ ಮಂಗಳೂರು ತಾಲೂಕಿನಲ್ಲಿ ಪ್ಲಾಸ್ಟಿಕ್ ನಿಷೇಧಿಸಲು ಜಿಲ್ಲಾಡಳಿತ ತೀರ್ಮಾನಿಸಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಪ್ಲಾಸ್ಟಿಕ್ ಉತ್ಪಾದಿಸುವ 60 ಕೈಗಾರಿಕೆಗಳು ಸ್ಥಳೀಯವಾಗಿದ್ದು, ಪ್ಲಾಸ್ಟಿಕ್ ಗೆ ಪರ್ಯಾಯ ರೂಪಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು. ಸ್ತ್ರೀ ಶಕ್ತಿ ಸಂಘಗಳು, ಸ್ವಸಹಾಯ ಸಂಘಗಳು ಬಟ್ಟೆ ಚೀಲ ಉತ್ಪಾದಿಸಲು ಮುಂದೆ ಬಂದರೆ ಅವರಿಗೆ ಸಬ್ಸಿಡಿ ನೀಡಲಾಗುವುದು. ಜನರಿಗೆ ಹೊರೆಯಾಗದ ರೀತಿಯಲ್ಲಿ ಮಾರುಕಟ್ಟೆಗೆ ಚೀಲಗಳನ್ನು ವಿತರಿಸಲು ಚಿಂತನೆ ನಡೆಸುವುದಾಗಿ ನುಡಿದರು.
ಪ್ಲಾಸ್ಟಿಕ್ ತ್ಯಾಜ್ಯ ವಿಲೇವಾರಿಗೂ ಸಮರ್ಪಕ ವ್ಯವಸ್ಥೆಯಾಗಬೇಕೆಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು. ಜನರ ಸಹಕಾರ ಹಾಗೂ ಪ್ಲಾಸ್ಟಿಕನ್ನುಬೇಕಾಬಿಟ್ಟಿಯಾಗಿ ಬಳಸುವ ಮನಸ್ಥಿತಿ ಬದಲಾದರೆ ಸಮಸ್ಯೆಯ ಸ್ವರೂಪ ನಗಣ್ಯವಾಗಲಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು. ಜಿಲ್ಲೆಯ ಸುಶಿಕ್ಷಿತ ಜನರು ಪ್ಲಾಸ್ಟಿಕ್ ಬಳಸುವ ಸಂದರ್ಭ ಜಿಲ್ಲಾಡಳಿತದ ಕೋರಿಕೆಯನ್ನು ಒಪ್ಪುವರೆಂಬ ವಿಶ್ವಾಸ ವ್ಯಕ್ತಪಡಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಡಾ ಕೆ ಎನ್ ವಿಜಯಪ್ರಕಾಶ್ ಮತ್ತು ಮಹಾನಗರ ಪಾಲಿಕೆ ಆಯುಕ್ತ ಡಾ ಹರೀಶ್ ಕುಮಾರ್, ಮಾಲಿನ್ಯ ನಿಯಂತ್ರಣಾಧಿಕಾರಿ ಲಕ್ಷ್ಮಣ್ ಉಪಸ್ಥಿತರಿದ್ದರು. ಜಿಲ್ಲಾಧಿಕಾರಿಗಳು ತಮ್ಮ ಅವಧಿಯಲ್ಲಿ ಚಿಕ್ಕಮಗಳೂರಿನಲ್ಲಿ ಪ್ಲಾಸ್ಟಿಕ್ ನಿಷೇಧದ ಅನುಭವವನ್ನು ಸಭೆಗೆ ತಿಳಿಸಿದರು. ಮೂಡಬಿದರೆ ಪುರಸಭೆ ಅಧಿಕಾರಿಗಳು ಮೂಡಬಿದ್ರೆಯಲ್ಲಿ ಪ್ಲಾಸ್ಟಿಕ್ ನಿಷೇಧ ಅನುಷ್ಠಾನಕ್ಕೆ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.