Wednesday, October 10, 2012

'ಕಾರಂತರ ಬಹುತ್ವದೆಡೆಗಿನ ಒಲವು ನಮಗೆ ಮಾದರಿ'

ಮಂಗಳೂರು, ಅಕ್ಟೋಬರ್. 10 : ಇಂದು ನಮ್ಮ ತಜ್ಞತೆ ಅತ್ಯಂತ ಸಣ್ಣ ವಿಭಾಗಕ್ಕೆ ಸೀಮಿತವಾಗಿದೆ; ಅರಿವಿನ ವ್ಯಾಪಕತೆಯನ್ನು ನಾವಿಂದು ಕನಿಷ್ಠಗೊಳಿಸುತ್ತಿದ್ದು, ಜಗತ್ತನ್ನು ಚಿಕ್ಕದಾಗಿಸಿಕೊಂಡಿದ್ದೇವೆ. ಕಾರಂತರ ಬದುಕು, ಬರಹಗಳು ಅವರ ಬಹುತ್ವದೆಡೆಗಿನ ಒಲವಿನಿಂದಾಗಿ ಪ್ರಸಕ್ತವಾಗಿವೆ ಎಂದು ಮಂಗಳೂರು ವಿಶ್ವವಿದ್ಯಾನಿಲಯ ಡಾ. ಶಿವರಾಮ ಕಾರಂತ ಅಧ್ಯಯನ ಪೀಠದ ನಿರ್ದೇಶಕರಾದ ಡಾ. ಸಬೀಹಾ ಭೂಮಿ ಗೌಡ ಹೇಳಿದರು.
    ಡಾ. ಶಿವ ರಾಮ ಕಾರಂ ತರ ಜನ್ಮ ದಿನಾ ಚರಣೆ ಸಂಬಂ ಧ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂ ರಿನ ಬಾಲ ವನ ದಲ್ಲಿ ಕನ್ನಡ ಸಂಸ್ಕೃತಿ ಇಲಾಖೆ, ಡಾ ಶಿವ ರಾಮ ಕಾರಂತ ಬಾಲ ವನ ಸಮಿತಿ ಆಯೋ ಜಿಸಿದ್ದ 'ಬಾಲ ವನ ಹಬ್ಬ' ಕಾರ್ಯ ಕ್ರಮ ದಲ್ಲಿ ಡಾ ಶಿವ ರಾಮ ಕಾರಂ ತರ ಸಾಹಿತ್ಯ ಲೋಕ ರಾಜ್ಯ ಮಟ್ಟದ ವಿಚಾರ ಗೋಷ್ಠಿ ಅಧ್ಯ ಕ್ಷತೆ ವಹಿಸಿ ಮಾತ ನಾಡುತ್ತಿದ್ದರು.
ಕಾರಂತರ ಕೃತಿಗಳನ್ನು ಸಮಕಾಲೀನ ಪಠ್ಯವನ್ನಾಗಿಸುವುದರಿಂದ ವರ್ತಮಾನದ ಹಲವು ಪ್ರಶ್ನೆಗಳಿಗೆ ಉತ್ತರ ಸಿಗಲಿದೆ. ಬದುಕನ್ನು ಮುಖಾಮುಖಿಯಾಗಿಸಿ ಸಮಸ್ಯೆಗಳಿಗೆ ಬೆನ್ನು ಮಾಡದೆ ಎದುರಿಸುವ ಸಾಮಥ್ರ್ಯವನ್ನು ನೀಡುತ್ತದೆ. ಬದುಕಿದಂತೆ ಬರೆದ ದಿಟ್ಟ ವ್ಯಕ್ತಿತ್ವ ಅವರದ್ದು ಎಂದರು. ಪರಿಪೂರ್ಣತೆಯ ಹುಡುಕಾಟವನ್ನು ತಮ್ಮ 90ರ ಇಳಿ ವಯಸ್ಸಿನಲ್ಲೂ ಕಿಂಚಿತ್ತೂ ಬೇಸರಿಸದೆ ನಡೆಸಿ ಬೆಳಕು ತೋರಿದ ಜೀವ ಅವರದ್ದು. ಇನ್ನು ಕಾರಂತರ ಸಾಂಸ್ಕೃತಿಕ ಬದುಕು ಕ್ರಿಯಾಶೀಲ ಬದುಕಿಗೆ ಅತ್ಯುತ್ತಮ ಮಾದರಿ ಎಂದರು.
'ಡಾ ಶಿವರಾಮ ಕಾರಂತರ ಕೃತಿಗಳಲ್ಲಿ ಸಾಮಾಜಿಕ ತುಡಿತಗಳು' ಗೋಷ್ಠಿಯನ್ನು ನಡೆಸಿಕೊಟ್ಟ ಮೈಸೂರು ಬಿಳಿಕೆರೆಯ ಸಕರ್ಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರಾದ ಡಾ ಗಣೇಶ್ ಚಿಕ್ಕಮಗಳೂರು ಅವರು ಮಾತನಾಡಿ  ಹೆಣ್ಣಿನ ಚೈತನ್ಯ ಶೀಲ ವ್ಯಕ್ತಿತ್ವವನ್ನ್ಗು ತಮ್ಮ ಕಾದಂಬರಿಗಳಲ್ಲಿ ಚಿತ್ರಿಸಿದ ಕಾರಂತರು, ಅವರ ಗಾಢ ಜೀವನ ಶ್ರದ್ಧೆಯನ್ನು ಎಳೆಎಳೆಯಾಗಿ ಬಿಡಿಸಿಟ್ಟರು. ಜೀವನ ಮೌಲ್ಯವಿರದವರು ಹುಸಿ ಬದುಕು ಬಾಳುತ್ತಾರೆ ಹಾಗೂ ಇವರು ಅಪಾಯಕಾರಿಗಳು ಎಂಬುದು ಕಾರಂತರ ಬೆಟ್ಟದ ಜೀವ ಕಾದಂಬರಿ ಪ್ರತಿಪಾದಿಸುತ್ತದೆ ಎಂದರು. ಕಾರಂತರಿಂದ ಮಾತ್ರ ಪುತ್ತೂರಿನ ಬಾಲವನದಲ್ಲಿ ಕುಳಿತು ಕನ್ನಡದ ಕಿಟಕಿಯ ಮೂಲಕ ಜಗತ್ತನ್ನೇ ನೋಡಲು ಸಾಧ್ಯ. ಅವರ ಸಾಂಸ್ಕೃತಿಕ ಒಲವುಗಳು ಅವರನ್ನು ಸದಾ ಕಾಲ ಸ್ಮರಣೀಯರನ್ನಾಗಿಸುತ್ತದೆ ಎಂದರು.
'ಡಾ ಶಿವರಾಮ ಕಾರಂತರ ಸಾಂಸ್ಕೃತಿಕ ಒಲವುಗಳು' ಕುರಿತು ಎಂ ಡಿ ಸುದರ್ಶನ ಅವರು ಪ್ರಬಂಧ ಮಂಡಿಸಿದರು. ಡಾ ವರದರಾಜ ಚಂದ್ರಗಿರಿ ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ತು ಉಪಸ್ಥಿತರಿದ್ದರು. ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷರಾ ಪ್ರೊ. ಎಂ ಎಲ್ ಸಾಮಗ ಕಾರ್ಯಕ್ರಮ  ಉದ್ಘಾಟಿಸಿದರು. ಡಾ ರಾಜೇಶ್ ಬೆಜ್ಜಂಗಳ ನಿರ್ವಹಿಸಿದರು. ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಯೋಜಿಸುವ ಹೊಣೆ ಹೊತ್ತ ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತರು ಹಾಗೂ ಬಾಲವನ ಸಮಿತಿ ಅಧ್ಯಕ್ಷರೂ  ಪ್ರಸನ್ನ ಉಪಸ್ಥಿತರಿದ್ದರು.
ಸಮಾರಂಭದ ಅಂಗಳದಲ್ಲಿ  ಮೋಹನ ಸೋನ ಮತ್ತು ತಂಡದವರ ಮಾರ್ಗದರ್ಶನದಲ್ಲಿ ಸುಮಾರು 22 ಮಕ್ಕಳ ಕಲಾ ಪ್ರದರ್ಶನ ಆಸಕ್ತರ ಮನ ಸೂರೆಗೊಂಡಿತು. ಪ್ರಾಕೃತಿಕ ಬಣ್ಣವನ್ನು ಮಕ್ಕಳು ಸ್ವತ: ತಯಾರಿಸಿ ತಮ್ಮ ಕಲಾಕೃತಿಗಳನ್ನು ರಚಿಸಿದ್ದು ಎಲ್ಲರ ಪ್ರಶಂಸೆಗೆ ಪಾತ್ರವಾಯಿತು. ಅಪರಾಹ್ನ ಬೆಟ್ಟದ ಜೀವ ಚಲನಚಿತ್ರ ವೀಕ್ಷಣೆ ಮತ್ತು ನಿರ್ದೇಶಕ ಪಿ ಶೇಷಾದ್ರಿ ಅವರೊಂದಿಗೆ ಸಂವಾದ ಹಾಗೂ ಬಾಲವನ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಸಾಂಸ್ಕೃತಿಕ ರಸಸಂಜೆಯನ್ನು ಆಯೋಜಿಸಲಾಗಿತ್ತು.