Wednesday, October 31, 2012

ದ.ಕ ದಲ್ಲಿ ಪ್ಲಾಸ್ಟಿಕ್ ನಿಷೇಧಕ್ಕೆ ಮುಹೂರ್ತ ನಿಗದಿ

ಮಂಗಳೂರು,ಅಕ್ಟೋಬರ್.31:ರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ಪ್ಲಾಸ್ಟಿಕ್ ಮುಕ್ತ ಮಂಗಳೂರಿಗಾಗಿ ಜಿಲ್ಲಾಡಳಿತ ಸಂಕಲ್ಪ ಮಾಡಲಿದೆ. ವಿಶೇಷವಾಗಿ ಮಂಗಳೂರು ಮತ್ತು ಜಿಲ್ಲೆಯ ಇತರ ನಗರಗಳಲ್ಲಿ ನ.1ರಿಂದ ಪ್ಲಾಸ್ಟಿಕ್ ನಿಷೇಧಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎನ್.ಎಸ್.ಚನ್ನಪ್ಪ ಗೌಡ ತಿಳಿಸಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಎಲ್ಲಾ ರೀತಿಯ ಪ್ಲಾಸ್ಟಿಕ್ ಉತ್ಪಾದನೆ, ಬಳಕೆಯನ್ನು ನಿಷೇಧಿಸಲು ನಿರ್ಧರಿಸಲಾಗಿದೆ. ಬಳಸಿದ ಪ್ಲಾಸ್ಟಿಕ್ನ ನಿರ್ವಹಣೆಗೂ ನಿರ್ಬಂಧ ಹೇರಲಾಗುವುದು. ಮಂಗಳೂರು ನಗರದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆಯೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ಅದಕ್ಕಾಗಿ ಪಾಲಿಕೆಯ ಆಯುಕ್ತರಾದ ಡಾ.ಹರೀಶ್ ಕುಮಾರ್ ನಿರ್ದಿಷ್ಟವಾದ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ ಎಂದು ಜಿಲ್ಲಾಧಿಕಾರಿ ನುಡಿದರು.
ಪ್ಲಾಸ್ಟಿಕ್ ಉತ್ಪಾದನೆ, ಬಳಕೆ ಮತ್ತು ನಿರ್ವಹಣೆ ಕಾಯ್ದೆ 2011ರ ಪ್ರಕಾರ ಜಿಲ್ಲೆಯಾದ್ಯಂತ ಕ್ರಮ ಕೈಗೊಳ್ಳಲಾಗುವುದು. ಆರಂಭದ 15 ದಿನ ವಾಹನವೊಂದರಲ್ಲಿ ಜಿಲ್ಲೆಯಾದ್ಯಂತ ಪ್ಲಾಸ್ಟಿಕ್ ನಿಷೇಧದ ಜಾಗೃತಿ ಮೂಡಿಸಲಾಗುವುದು . ಬಳಿಕ ದಂಡ ವಿಧಿಸಲಾಗುವುದು  ಎಂದು ಹೇಳಿದ ಜಿಲ್ಲಾಧಿಕಾರಿಗಳು ನ.1ರಂದು  ಬೆಳಿಗ್ಗೆ 7.30ಕ್ಕೆ ನಗರದ ಸ್ಕೌಟ್ ಭವನದಿಂದ ಹೊರಡುವ  ಪ್ಲಾಸ್ಟಿಕ್ ನಿಷೇಧ ಜಾಥಾಕ್ಕೆ ಜಿಲ್ಲಾ ಉಸ್ತುವಾರಿ ಮಂತ್ರಿ ಸಿ.ಟಿ.ರವಿ ಚಾಲನೆ ನೀಡುವರು ಎಂದರು.
ಹಾಲಿನ ಪ್ಯಾಕೆಟ್ಗೂ ಪ್ಲಾಸ್ಟಿಕ್ ಗೆ ಪರ್ಯಾಯ ಹುಡುಕಲು ಕೆ.ಎಂ.ಎಫ್ ಗೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ನುಡಿದರು.