Saturday, April 23, 2011

ಪಾಲಿಕೆ ಕಾಮಗಾರಿ-ಗುತ್ತಿಗೆದಾರರಿಗೆ ಕಾಲಮಿತಿಯಲ್ಲಿ ಬಿಲ್ ಪಾವತಿಸಿ:ಪಾಲೇಮಾರ್

ಮಂಗಳೂರು,ಎಪ್ರಿಲ್:23:ಮಂಗಳೂರು ನಗರದಲ್ಲಿ ಮೂಲಭೂತ ಸೌಲಭ್ಯಗಳ ಸರ್ವಂಗೀಣ ಅಭಿವೃದ್ಧಿಗಾಗಿ ಮಾನ್ಯ ಮುಖ್ಯ ಮಂತ್ರಿಗಳು ನೀಡಿರುವ ವಿಶೇಷ ಅನುದಾನದಡಿಯಲ್ಲಿ ವಿವಿಧ ಕಾಮಗಾರಿಗಳ ಗುತ್ತಿಗೆ ಪಡೆದಿರುವ ಗುತ್ತಿಗೆದಾರರಿಗೆ ಕಾಮಗಾರಿ ಪೂರ್ಣಗೊಂಡ 20 ದಿನಗಳೊಳಗೆ ಬಿಲ್ಲಿನ ಹಣ ಪಾವತಿ ಮಾಡುವಂತೆ ಮಹಾನಗರಪಾಲಿಕೆಯ ಅಧಿಕಾರಿಗಳಿಗೆ ರಾಜ್ಯದ ವಿಜ್ಞಾನ ಮತ್ತು ತಂತ್ರಜ್ಞಾನ,ಮೀನುಗಾರಿಕೆ,ಪರಿಸರ ಸಚಿವರಾದ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಜೆ.ಪಾಲೇಮಾರ್ ಅವರು ಸೂಚಿಸಿದ್ದಾರೆ.
ಅವರು ಶುಕ್ರವಾರ ಮಂಗಳೂರು ಮಹಾನಗರಪಾಲಿಕೆಯಲ್ಲಿ ನಡೆದ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿ ಈ ವಿಷಯ ತಿಳಿಸಿದರು.ಈಗಾಗಲೇ ಜಿಲ್ಲಾಧಿಕಾರಿಗಳು ಗುತ್ತಿಗೆದಾರರ ಬಿಲ್ ಪಾವತಿಗೆ ಹಾಕಿಕೊಟ್ಟಿರುವ ಮಾರ್ಗಸೂಚಿ ಕಾಲಮಿತಿಯಲ್ಲಿ ಬಿಲ್ಲುಗಳನ್ನು ಪಾವತಿಸುವ ಮೂಲಕ ಗುತ್ತಿಗೆದಾರರು ತಮಗೆ ವಹಿಸಿದ ಕಾಮಗಾರಿಗಳನ್ನು ನಿಗಧಿತ ಸಮಯದಲ್ಲಿ ಪೂರ್ಣಗೊಳಿಸಲು ಹಾಗೂ ಉತ್ತಮ ಗುಣಮಟ್ಟದ ಕಾಮಗಾರಿ ನೀಡಲು ಅನುಕೂಲವಾಗಲಿದೆಯೆಂದು ಸಚಿವರು ಈ ಸಂದರ್ಭದಲ್ಲಿ ತಿಳಿಸಿದರು.ನಗರಪಾಲಿಕೆಗೆ ಮುಖ್ಯಮಂತ್ರಿಗಳು ನೀಡಿರುವ ವಿಶೇಷ ಅನುದಾನದಲ್ಲಿ 13 ರಸ್ತೆಗಳನ್ನು ರೂ.53.80 ಕೋಟಿ ವೆಚ್ಚದಲ್ಲಿ ಕಾಂಕ್ರೀಟಿಕರಣಗೊಳಿಸಲಾಗಿದ್ದು,3 ಕಾಮಗಾರಿಗಳು ಪ್ರಗತಿಯಲ್ಲಿವೆ.
ಇದೇರೀತಿ 86 ರಸ್ತೆಗಳಿಗೆ ಡಾಂಬರೀಕರಣ ಹಾಗೂ 64 ರಸ್ತೆಗಳ ಇಂಟರ್ ಲಾಕ್ ಕಾಮಗಾರಿಗಳು ಪೂರ್ಣಗೊಂಡಿದ್ದು,ಇದಕ್ಕಾಗಿ ರೂ.4.47 ಕೋಟಿ ವೆಚ್ಚ ಮಾಡಲಾಗಿದೆಯೆಂದು ಮಹಾನಗರಪಾಲಿಕೆ ಆಯುಕ್ತರಾದ ಡಾ.ವಿಜಯ ಪ್ರಕಾಶ್ ಅವರು ಸಚಿವರ ಮಾಹಿತಿ ನೀಡಿದರು.
ಸಭೆಯಲ್ಲಿ ವಿಧಾನಸಭೆ ಉಪಸಭಾಪತಿ ಯೋಗೀಶ್ ಭಟ್,ಮೇಯರ್ ಪ್ರವೀಣ್ ,ಉಪಮೇಯರ್ ಗೀತಾ ನಾಯಕ್, ಹಾಗೂ ಜಿಲ್ಲಾಧಿಕಾರಿ ಸುಬೋಧ್ ಯಾದವ್ ಸೇರಿದಂತೆ ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರು ,ಉಪಾಧ್ಯಕ್ಷರು ಪಾಲ್ಗೊಂಡಿದ್ದರು.