Friday, April 15, 2011

111 ವೈದ್ಯಕೀಯ ಸಂಸ್ಥೆಗಳಿಗೆ ಸರ್ಟಿಫಿಕೇಟ್ ನೀಡಲು ನಿರ್ಧಾರ

ಮಂಗಳೂರು, ಏಪ್ರಿಲ್.15 :ಅರ್ಹ ನೋಂದಾಯಿಸಲ್ಪಡದ 111 ಖಾಸಗೀ ವೈದ್ಯಕೀಯ ಸಂಸ್ಥಗಳಿಗೆ ಪ್ರಮಾಣ ಪತ್ರ ನೀಡಲು ಜಿಲ್ಲಾಧಿಕಾರಿ ಸುಬೋಧ್ ಯಾದವ್ ಅವರು ಸಮ್ಮತಿಸಿದ್ದಾರೆ.

ಇಂದು ಈ ಸಂಬಂಧ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿಗದಿತ ಸಮಯಾವಕಾಶದಲ್ಲಿ ಕಾಯಿದೆಯನ್ವಯ ಎಲ್ಲ ಕಾನೂನು ಪಾಲಿಸಿ ನೋಂದಾವಣೆಗೆ ಅರ್ಹ ಎಂದು ತನಿಖೆಯ ಬಳಿಕ ತನಿಖಾ ತಂಡ ನೀಡಿದ ಅಭಿಪ್ರಾಯದಂತೆ ಅಂತಹ ಸಂಸ್ಥೆಗಳಿಗೆ ಪ್ರಮಾಣಪತ್ರ ನೀಡಲು ಜಿಲ್ಲಾಧಿಕಾರಿ ಹಾಗೂ ಕಾನೂನು ಅನುಷ್ಠಾನ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿಗಳು ಸಮ್ಮತಿಸಿದ್ದಾರೆ.
ಇನ್ನೂ 70 ಪ್ರಕರಣಗಳಿಗೆ ನೋಟೀಸು ನೀಡಲಾಗಿದ್ದು, ಉತ್ತರ ಬರಲಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ತಿಳಿಸಿದರು. ಮಂಗಳೂರು ತಾಲೂಕಿನಲ್ಲಿ ಸಮಸ್ಯೆ ಜಟಿಲವಾಗಿದ್ದು, ಅನುಷ್ಠಾನಕ್ಕಿರುವ ತೊಡಕುಗಳನ್ನು ತಾಲೂಕು ವೈದ್ಯಾಧಿಕಾರಿಗಳು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಮಂಗಳೂರಿನ 500 ಪ್ರಕರಣಗಳನ್ನು ಅಂತಿಮವಾಗಿ ಮೇ 31ರೊಳಗೆ ತೀರ್ಮಾನಿಸಲು ಜಿಲ್ಲಾಧಿಕಾರಿಗಳು ಸಮಯಮಿತಿ ನಿಗದಿಪಡಿಸಿದರು. ಬಂಟ್ವಾಳದಲ್ಲಿ ನೋಟೀಸು ಸ್ವೀಕರಿಸಿದ ತಕ್ಷಣ ನೋಂದಾಯಿಸಲ್ಪಡದ 4 ವೈದ್ಯಕೀಯ ಸಂಸ್ಥೆಗಳು ಸ್ವಯಂಪ್ರೇರಿತವಾಗಿ ಮುಚ್ಚಲ್ಪಟ್ಟಿದೆ ಎಂದು ಬಂಟ್ವಾಳ ತಾಲೂಕು ವೈದ್ಯಾಧಿಕಾರಿಗಳು ಮಾಹಿತಿ ನೀಡಿದರು. ಇನ್ನು ಕೆಲವು ಸಂಸ್ಥೆಗಳು ನೋಟೀಸಿಗೆ ಉತ್ತರಿಸಿದ್ದು, ತಮ್ಮ ಕೇಂದ್ರಗಳನ್ನು ಮೆಡಿಕಲ್ ಸೆಂಟರ್ ಗಳಾಗಿ ಪರಿವರ್ತಿಸಲು ಅನುಮತಿ ಕೋರಿವೆ. ಒಟ್ಟು 106 ಸಂಸ್ಥೆಗಳಿಗೆ ಸೆಕ್ಷನ್ 22 ರಡಿ ನೋಟೀಸು ಜಾರಿಗೊಳಿಸಲಾಗಿತ್ತು. 125 ವೈದ್ಯಕೀಯ ಸಂಸ್ಥೆಗಳಿಗೆ ತನಿಖಾ ತಂಡ ಭೇಟಿ ನೀಡಿ ಇವುಗಳಲ್ಲಿ 16 ಮಾತ್ರ ನೋಂದಾಯಿಸಲು ಅರ್ಹ ಎಂದು ವರದಿ ನೀಡಿದೆ. ಎಲ್ಲ ತಾಲೂಕುಗಳ ವೈದ್ಯಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.