Sunday, April 3, 2011

37,900 ಕೋಟಿ ರೂ. ತೆರಿಗೆ ಸಂಗ್ರಹ:ಮುಖ್ಯಮಂತ್ರಿ ಯಡಿಯೂರಪ್ಪ

ಮಂಗಳೂರು,ಏಪ್ರಿಲ್.03:ರಾಜ್ಯದ ಹಣಕಾಸು ವ್ಯವಸ್ಥೆ ಅತ್ಯುತ್ತಮವಾಗಿದ್ದು,ನಿರೀಕ್ಷಿತ ಗುರಿ ಮೀರಿ ಸಾಧನೆ ಮಾಡಲಾಗಿದೆ ಎಂದು ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದರು.

ಅವರಿಂದು ಕುಕ್ಕೆ ಸುಬ್ರಹ್ಮಣ್ಯ ದೇವಾಲ ಯದಲ್ಲಿ ವಿಶೇಷ ಪೂಜೆ ಸಲ್ಲಿಸದ ಬಳಿಕ ಸುದ್ದಿಗಾರ ರೊಂದಿಗೆ ಮಾತನಾಡಿ, ರಾಜ್ಯ ಹಣಕಾಸು ಸದೃಢವಾಗಿದೆ. 2010-11ನೇ ಸಾಲಿನಲ್ಲಿ 36,218 ಕೋಟಿ ತೆರಿಗೆಯನ್ನು ನಿರೀಕ್ಷಿಸಿದ್ದೆವು. ಆದರೆ ನಿರೀಕ್ಷೆಗೂ ಮೀರಿ 36,218 ಕೋಟಿ ರೂ.ಗಳನ್ನು ಸಂಗ್ರಹಿಸಲಾಗಿದೆ.%17 ರಷ್ಟು ಸಾಧನೆಯಾಗಿದೆ ಎಂದರು. ವಾಣಿಜ್ಯ, ಆದಾಯ, ಮೋಟಾರು ವೆಹಿಕಲ್, ಅರಣ್ಯ ಸೇರಿದಂತೆ ಎಲ್ಲ ವಲಯದಲ್ಲೂ ಗುರಿ ಮೀರಿ ಸಾಧನೆ ಮಾಡಲಾಗಿದೆ ಎಂದು ಮುಖ್ಯಮಂತ್ರಿಗಳು ವಿವರಿಸಿದರು. ರಾಜ್ಯದಲ್ಲಿ ಮುಜರಾಯಿ ಇಲಾಖೆಯಡಿ ಬರುವ ಎಲ್ಲ ದೇವಾಲಯಗಳ ಸಮಗ್ರ ಅಭಿವೃದ್ಧಿಗೆ ಸಾಕಷ್ಟು ಅನುದಾನ ಬಿಡುಗಡೆ ಮಾಡಿದ್ದು, ಸುಬ್ರಹ್ಮಣ್ಯದ ಅಭಿವೃದ್ದಿಗೆ 180 ಕೋಟಿ ರೂ.ಗಳ ಮಂಜೂರಾತಿ ನೀಡಿದ್ಸು, 55 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಮಾದರಿ ಕೆಲಸಗಳು ಇಲ್ಲಿ ಆಗುತ್ತಿವೆ ಎಂದರು.ದೇವಾಲಯಗಳಿಗೆ ರಸ್ತೆ ಸಂಪರ್ಕ, ಮೂಲಸೌಕರ್ಯ ಅಭಿವೃದ್ಧಿಗೂ ಸಾಕಷ್ಟು ಅನುದಾನ ಬಿಡುಗಡೆ ಮಾಡಲಾಗಿದೆ. ಅಭಿವೃದ್ಧಿ ಕೆಲಸಕ್ಕೆ ಹಣದ ತೊಂದರೆ ಇಲ್ಲ ಎಂದರು.
ಸಣ್ಣ ರೈತರನ್ನು ಸ್ವಾವಲಂಬಿಗಳಾಗಿಸಲು 10 ಲಕ್ಷ ಸಣ್ಣ ರೈತರಿಗೆ ತಲಾ ರೂ.10,000 ದಂತೆ ಸಮಗ್ರ ಕೃಷಿ ಚಟುವಟಿಕೆಗಳಿಗೆ ನೆರವು ನೀಡುವುದಾಗಿ ಹೇಳಿದ ಅವರು ಈ ತಿಂಗಳೊಳಗೆ 5,000ರೂ.ಗಳ ನೆರವು ನೀಡುವುದಾಗಿ ಮುಖ್ಯಮಂತ್ರಿಗಳು ಹೇಳಿದರು. ಜಿಲ್ಲಾ ಉಸ್ತುವಾರಿ ಸಚಿವರಾದ ಜೆ. ಕೃಷ್ಣ ಪಾಲೆಮಾರ್,ಸ್ಥಳಿಯ ಶಾಸಕರಾದ ಅಂಗಾರ,ಮಲ್ಲಿಕಾ ಪ್ರಸಾದ್, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಬಿಜೆಪಿ ಜಿಲ್ಲಾಧ್ಯಕ್ಷ ಪದ್ಮನಾಭ ಕೊಟ್ಟಾರಿ ಸೇರಿದಂತೆ ಹಲವರು ಗಣ್ಯರು ಭೇಟಿಯ ಸಂದರ್ಭದಲ್ಲಿ ಉಪಸ್ಥಿತರಿದ್ದರು.