Wednesday, April 13, 2011

ಮಹಿಳೆಯ ಅಭಿವೃದ್ಧಿಗೆ ಆರ್ಥಿಕ ಸಬಲತೆ ಮುಖ್ಯ: ಶೈಲಜಾ ಭಟ್

ಮಂಗಳೂರು,ಏಪ್ರಿಲ್.13:ಮಹಿಳೆಯ ಅಭಿವೃದ್ಧಿಗೆ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ವೃತ್ತಿಪರ ತರಬೇತಿಗಳಿಂದ ಮಹಿಳೆಯನ್ನು ಆರ್ಥಿಕವಾಗಿ ಸಬಲರನ್ನಾಗಿಸುವುದರಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಕೆ. ಟಿ. ಶೈಲಜಾ ಭಟ್ ಅವರು ಹೇಳಿದರು.

ಅವರಿಂದು ಮುಡಿಪುವಿನ ನವಚೇತನ ಜೀವನ ಶಿಕ್ಷಣ ಕೇಂದ್ರದಲ್ಲಿ ಸಮಾಜ ಕಾರ್ಯ ಸಂಸ್ಥೆ ಜನಶಿಕ್ಷಣ ಟ್ರಸ್ಟ್, ಲೋಕ ಶಿಕ್ಷಣ ನಿರ್ದೇಶನಾಲಯ, ದ.ಕ ಜಿಲ್ಲಾ ಸಾಕ್ಷರತಾ ಸಮಿತಿ, ಜಿಲ್ಲಾ ಪಂಚಾಯತ್ ಹಾಗೂ ಗ್ರಾಮ ಪಂಚಾಯತ್ಗಳ ಸಹಭಾಗಿತ್ವದಲ್ಲಿ ನಡೆದ ನವಸಾಕ್ಷರರ ವೃತ್ತಿ ಕೌಶಲ್ಯ ಮಾಸಿಕ ತರಬೇತಿ ಶಿಬಿರದ ಸಮಾರೋಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ಪ್ರಸಕ್ತ ಸಂದರ್ಭದಲ್ಲಿ ವೃತ್ತಿಪರ ತರಬೇತಿಗಳಿಂದಾಗುವ ಅನುಕೂಲಗಳನ್ನು ವಿವರಿಸಿದ ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಇಂದು ಎಲ್ಲಡೆಯಿಂದಲೂ ಮಹಿಳೆಯರ ಅಭಿವೃದ್ಧಿಗೆ ಪೂರಕ ವಾತಾವರಣ ಇದೆ. ಮಹಿಳೆಯರು ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾ ಧಿಕಾರಿ ಪಿ.ಶಿವ ಶಂಕರ್ ಅವರು ಮಾತನಾಡಿ, ರಾಜ್ಯಕ್ಕೆ ಮಾದರಿ ಎನಿಸುವಂತಹ ಹಲವು ಯೋಜನೆಗಳನ್ನು ದಕ್ಷಿಣ ಕನ್ನಡ ಜಿಲ್ಲೆ ನೀಡಿದ್ದು, ಈ ತರಬೇತಿಯೂ ರಾಜ್ಯಕ್ಕೆ ಮಾದರಿಯಾಗಿದೆ ಎಂದರು. ನಿರಂತರ ಕಲಿಕೆ ಅದರಲ್ಲೂ ವೃತ್ತಿಪರ ಕಲಿಕೆ ಮತ್ತು ಅದರ ಅನುಷ್ಠಾನ ಎಲ್ಲರಿಗೂ ಅನುಕೂಲವಾಗಲಿದೆ ಸ್ವಯಂ ಉದ್ಯೋಗ ಮತ್ತು ಉದ್ಯೋಗಿಗಳು ರಾಜ್ಯದ ಆರ್ಥಿಕ ವಲಯಕ್ಕೆ ನೀಡುವ ಕೊಡುಗೆ ಗಮನೀಯವಾಗಿದೆ ಎಂದು ಹೇಳಿದರು. ಉತ್ಪಾದನೆಯನ್ನು ವಿತರಿಸುವ ವ್ಯವಸ್ಥೆಯೂ ಸಮರ್ಪಕವಾಗಿ ಆಗಬೇಕಿದ್ದು, ಜಿಲ್ಲಾ ಪಂಚಾಯತ್ ನಿಂದ ಈ ಸಂಬಂಧ ಸಂಪೂರ್ಣ ಸಹಕಾರದ ಭರವಸೆಯನ್ನು ಅವರು ನೀಡಿದರು. ಗ್ರಾಮ ಪಂಚಾಯತ್ ಅಧ್ಯಕ್ಷರಾದ ಚಂದ್ರಶೇಖರ್ ಆಳ್ವಾ ಅವರು ಮಾತನಾಡಿದರು. ಒಂಬಡ್ಸ್ ಮನ್ ಶೀನ ಶೆಟ್ಟಿಯವರು ಮಾತನಾಡಿ, ಸಾಕ್ಷರತೆ, ಸ್ವಚ್ಛತೆ, ಉದ್ಯೋಗಖಾತ್ರಿಯಲ್ಲಿ ಜಿಲ್ಲೆ ಸಾಧಿಸಿದ ಪ್ರಗತಿ ಹಾಗೂ ಉದ್ಯೋಗ ಖಾತ್ರಿಯಿಂದಾಗಬಹುದಾದ ಪವಾಡಗಳ ಬಗ್ಗೆ, ಸಾಮಾಜಿಕ ಸ್ಥಿತಿಗತಿ ಅಭಿವೃದ್ಧಿಯ ಬಗ್ಗೆ ಸಭೆಯಲ್ಲಿ ಮಾಹಿತಿ ನೀಡಿದರು. ದೊಡ್ಡ ಯೋಜನೆಗಳಿಗಿಂತ ಗ್ರಾಮೀಣ ಪ್ರದೇಶಗಳಲ್ಲಿ ಸಾಮಾನ್ಯ ವರ್ಗದವರು ಉದ್ಯೋಗ ಚೀಟಿಯನ್ನು ಪಡೆಯುವುದರಿಂದಾಗುವ ಬದಲಾವಣೆ, ವೃತ್ತಿಪರತೆ ಕಲಿತು ಸಾಧಿಸುವ ಆರ್ಥಿಕ ಸಬಲೀಕರಣದ ಬಗ್ಗೆ ಮಾತನಾಡಿದರು.