Friday, April 8, 2011

ಬೇಸಿಗೆಯಲ್ಲಿ ಕುಡಿಯುವ ನೀರು ಪೂರೈಸಲು ಬರ ಪರಿಹಾರ ನಿಧಿಯಿಂದ ನೆರವು-ಸುಬೋಧ್ ಯಾದವ್

ಮಂಗಳೂರು,ಎಪ್ರಿಲ್.08;ದಕ್ಷಿಣಕನ್ನಡ ಜಿಲ್ಲೆಯ ಪಟ್ಟಣಪ್ರದೇಶಗಳಲ್ಲಿ ಎಪ್ರಿಲ್-ಮೇ ಮಾಹೆಗಳಲ್ಲಿ ಕುಡಿಯುವ ನೀರಿಗೆ ಉಂಟಾಗುವ ಸಂಕಷ್ಟವನ್ನು ತಾತ್ಕಾಲಿಕವಾಗಿ ಪರಿಹರಿಸಲು ಜಿಲ್ಲಾ ಬರ ಪರಿಹಾರ ನಿಧಿಯಿಂದ ನೆರವು ನೀಡಲಾಗುವುದೆಂದು ಜಿಲ್ಲಾಧಿಕಾರಿ ಸುಬೋಧ್ ಯಾದವ್ ತಿಳಿಸಿದ್ದಾರೆ.
ಅವರು ಇಂದು ತಮ್ಮ ಕಚೇರಿಯಲ್ಲಿ ನಡೆದ ದಕ್ಷಿಣಕನ್ನಡ ಜಿಲ್ಲಾ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳ ಕಚೇರಿಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಪುರಸಭೆ/ಪಟ್ಟಣ ಪಂಚಾಯತ್ ಗಳ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ತೊಂದರೆ ಉಂಟಾದಲ್ಲಿ ಅಂತಹ ಸ್ಥಳೀಯ ಸಂಸ್ಥೆಯವರು ನೆರವು ಕೋರಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಲ್ಲಿ ಬರ ಪರಿಹಾರ ನಿಧಿಯಿಂದ ಹಣ ಒದಗಿಸುವುದಾಗಿ ತಿಳಿಸಿದರು.ದಕ್ಷಿಣಕನ್ನಡ ಜಿಲ್ಲೆಯಲ್ಲಿ 7 ಸ್ಥಳೀಯ ಸಂಸ್ಥೆಗಳಿಗೆ 2010-11 ನೇ ಸಾಲಿನಲ್ಲಿ ಒಟ್ಟು ರೂ.405.31 ಲಕ್ಷ ತೆರಿಗೆ ಸಂಗ್ರಹ ಬೇಡಿಕೆ ಇತ್ತು. 31-3-2011 ರ ಅಂತ್ಯಕ್ಕೆ ರೂ.391.32 ಲಕ್ಷ ವಸೂಲಾತಿ ಮಾಡುವ ಮೂಲಕ ಶೇ.97 ರಷ್ಟು ಸಾಧನೆ ಮಾಡಲಾಗಿದೆ. ಜಿಲ್ಲೆಯಲ್ಲಿರುವ 7 ಪುರಸಭೆಗಳ ವ್ಯಾಪ್ತಿಯಲ್ಲಿ 9078 ವಾಣಿಜ್ಯ ಉದ್ದಿಮೆಗಳಿಂದ 2011-12 ನೇ ಸಾಲಿಗೆ ಲೈಸನ್ಸ್ ನವೀಕರಣಗೊಳಿಸಿದ್ದು ಒಟ್ಟು ರೂ.34.33 ಲಕ್ಷ ಶುಲ್ಕ ವಸೂಲಾತಿ ಮಾಡಲಾಗಿದೆ.ಉದ್ದಿಮೆ ವ್ಯಾಪಾರ ಮಾಡುವವರು ಕಡ್ಡಾಯವಾಗಿ ಲೈಸನ್ಸ್ ಪಡೆಯಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ವಾಜಪೇಯಿ ನಗರ ವಸತಿ ಹಾಗೂ ನಮ್ಮ ಮನೆ ಯೋಜನೆಯಡಿ ಜಿಲ್ಲೆಯ ಮಂಗಳೂರು ಮಹಾನಗರಪಾಲಿಕೆ ಸೇರಿದಂತೆ ಉಳಿದ 7 ಪುರಸಭೆಗಳಲ್ಲಿ ಒಟ್ಟು 1325 ಜನರಿಗೆ ವಸತಿ ಒದಗಿಸುವ ಗುರಿ ಹೊಂದಲಾಗಿತ್ತು.1139 ಫಲಾನುಭವಿಗಳು ವಸತಿಗೆ ಅರ್ಜಿ ಸಲ್ಲಿಸಿರುತ್ತಾರೆ. ಆಶ್ರಯ ಸಮಿತಿಯಲ್ಲಿ ಆಯ್ಕೆಯಾದ 824 ರಲ್ಲಿ 565 ಫಲಾನುಭವಿಗಳ ಅರ್ಜಿಗಳನ್ನು ಬ್ಯಾಂಕುಗಳಿಗೆ ರವಾನಿಸಲಾಗಿದೆ. ವಾಜಪೇಯಿ ನಗರ ನಿವೇಶನ ಯೋಜನೆಯನ್ವಯ ಜಿಲ್ಲೆಯಲ್ಲಿ 2650 ಕುಟುಂಬಗಳಿಗೆ ನಿವೇಶನ ಒದಗಿಸುವ ಗುರಿ ಹೊಂದಲಾಗಿತ್ತು.ಆದರೆ 2003 ರ ನಿವೇಶನ ರಹಿತರ ಪಟ್ಟಿಯಲ್ಲಿ 4798 ಕುಟುಂಬಗಳನ್ನು ಗುರುತಿಸಲಾಗಿದ್ದು, ಪಟ್ಟಿಯಿಂದ 728 ಕುಟುಂಬಗಳನ್ನು ಪರಿಷ್ಕರಿಸಲಾಗಿದೆ. 2004 ರಿಂದ ಇದುವರೆಗೆ ಬಂದಿರುವ ಅರ್ಜಿಗಳು 5509 ,ಒಟ್ಟು 6237 ಅರ್ಜಿಗಳು ಬಂದಿರುತ್ತವೆ.
ಬಂಟ್ವಾಳ ತಾಲೂಕಿನಲ್ಲಿ 62 ಫಲಾನುಭವಿಗಳಿಗೆ ನಿವೇಶನ ಹಕ್ಕು ಪತ್ರ ಹಂಚಲು ಕ್ರಮ ಕೈಗೊಂಡಿದ್ದು ತಾಂತ್ರಿಕ ಕಾರಣದಿಂದ ವಿಳಂಬವಾಗಿದೆ. ಬೆಳ್ತಂಗಡಿ ತಾಲೂಕಿನಲ್ಲಿ 22 ಫಲಾನುಭವಿಗಳಿಗೆ ನಿವೇಶನ ಹಕ್ಕು ಪತ್ರ ವಿತರಿಸಲಾಗಿದೆ. ಮೂಡಬಿದ್ರೆ 100 ಹಕ್ಕು ಪತ್ರಗಳನ್ನು, ಸುಳ್ಯದಲ್ಲಿ 25 ಹಕ್ಕು ಪತ್ರಗಳನ್ನು ಶೀಘ್ರದಲ್ಲಿ ವಿತರಿಸಲಾಗುವುದೆಂದು ತಿಳಿಸಿದರು.ಪುತ್ತೂರಿನಲ್ಲಿ 60 ಕುಟುಂಬಗಳನ್ನು ಆಯ್ಕೆ ಮಾಡಿ ಹಕ್ಕು ವಿತರಣೆಗೆ ಕ್ರಮಕೈಗೊಳ್ಳಲಾಗಿದೆ.
ಸಭೆಯಲ್ಲಿ ಪುತ್ತೂರು ಉಪವಿಭಾಗಾಧಿಕಾರಿ ಡಾ. ಹರೀಶ್ ಕುಮಾರ್,ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ಮೇ 1 ರಂದು ಕರಾವಳಿ ತೀರ ಪ್ರದೇಶ ಸ್ವಚ್ಛತೆಗೆ ಶ್ರಮದಾನ:
ದಕ್ಷಿಣಕನ್ನಡ ಜಿಲ್ಲೆಯ ವ್ಯಾಪ್ತಿಗೊಳಪಡುವ ಕರಾವಳಿ ತೀರ ಪ್ರದೇಶ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಮೇ 1 ಕಾರ್ಮಿಕ ದಿನಾಚರಣೆಯಂದು ಮೆಗಾ ಶ್ರಮದಾನದ ಮೂಲಕ ಸ್ವಚ್ಛತಾ ಅಭಿಯಾನ ನಡೆಸಲಾಗುವುದೆಂದು ಜಿಲ್ಲಾಧಿಕಾರಿ ಸುಬೋಧ್ ಯಾದವ್ ತಿಳಿಸಿದ್ದಾರೆ.