Friday, April 29, 2011

ಜಿಲ್ಲೆಯ ಕಡಲಕಿನಾರೆಯ 20 ಸ್ಥಳಗಳಲ್ಲಿ ಮೇ 1ರಂದು ಏಕಕಾಲಕ್ಕೆ ಶ್ರಮದಾನ

ಮಂಗಳೂರು,ಏಪ್ರಿಲ್. 29: ಸ್ವಚ್ಛ, ಹಸಿರು, ಪ್ರಗತಿಪರ ಮಂಗಳೂರು ಧ್ಯೇಯದಡಿ ಜಿಲ್ಲೆಯಲ್ಲಿ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುವ ಆಂದೋಲನವನ್ನು ಜಿಲ್ಲಾಡಳಿತ ಎಲ್ಲರ ಸಹಕಾರದೊಂದಿಗೆ ಈಗಾಗಲೇ ಆರಂಭಿಸಿದ್ದು, ಮೇ ಒಂದರಂದು 43 ಕಿ.ಮೀ ಉದ್ದದ ಕಡಲಕಿನಾರೆಯ 20 ಪ್ರದೇಶಗಳಲ್ಲಿ 20 ತಂಡಗಳು ಏಕಕಾಲದಲ್ಲಿ ಕಡಲತೀರ ಸ್ವಚ್ಛತೆಗೆ ಶ್ರಮದಾನವನ್ನು ಆಯೋಜಿಸಿದೆ.

ನಮ್ಮ ಪರಿಸರ ಸ್ವಚ್ಛವಾಗಿರಿಸುವ ಸದುದ್ದೇಶದಿಂದ ಆರಂಭಿಸಲಾಗಿರುವ ಈ ಅಭಿಯಾನದಲ್ಲಿ ಅಂದು ಆರರಿಂದ ಏಳು ಸಾವಿರದವರೆಗೆ ಮಾನವ ಶಕ್ತಿ ಸದ್ಬಳಕೆಯಾಗಲಿದೆ ಎಂದು ಜಿಲ್ಲಾಧಿಕಾರಿ ಸುಬೋಧ್ ಯಾದವ್ ಅವರು ಹೇಳಿದರು. ಈ ಸಂಬಂಧ ಹಲವು ಸುತ್ತಿನ ಪೂರ್ವಭಾವಿ ಸಭೆಗಳಾಗಿದ್ದು, ಇಂದು ಸಂಜೆ ಅಂತಿಮ ಸುತ್ತಿನ ಸಭೆಯನ್ನು ಅವರು ನಡೆಸಿದರು.
ಕೇರಳದ ಗಡಿ ಪ್ರದೇಶ ತಲಪಾಡಿ ಕಡಲತೀರದಿಂದ ಉಡುಪಿಯ ಗಡಿ ಹೆಜಮಾಡಿ ವರೆಗೆ ಕಡಲತೀರ ಸ್ವಚ್ಛಗೊಳಿಸಲು ಐದು ವಲಯಗಳನ್ನಾಗಿ ವಿಂಗಡಿಸಿ ಮುಕ್ಕಾಚೇರಿ, ಮೊಗವೀರಪಟ್ಣ, ಕೋಟೆಪುರ, ಸೋಮೇಶ್ವರ ದೇವಾಲಯ, ಬಟ್ಟಪಾಡಿ, ಬೆಂಗ್ರೆ ಫುಟ್ ಬಾಲ್ ಮೈದಾನ, ನಾಗದೇವರ ಬನ, ಫಾತಿಮಾ ಚರ್ಚ್ ತಣ್ಣೀರು ಬಾವಿ, ಪಣಂಬೂರು ಬೀಚ್, ಬೈಕಂಪಾಡಿ, ನವಜ್ಯೋತಿ ಮೈದಾನ, ಚಿತ್ರಾಪು ಪ್ರೌಢಶಾಲೆ, ಭಗವತೀ ದೇವಾಲಯ, ಮುಕ್ಕಾ ಭಜನಾ ಮಂದಿರ, ಗುಡ್ಡೆಕೊಪಲ್ಪು ರಾಮಭಜನಾ ಮಂದಿರ, ದೊಡ್ಡೆಕೊಪ್ಪಲು, ಕರಾವಳಿ ಫ್ರೆಂಡ್ಸ್ ಸರ್ಕಲ್, ಐಸ್ ಪ್ಲಾಂಟ್ ಸಸಿಹಿತ್ಲು, ಚಿತ್ರಾಪು ಸ್ಮಶಾನ, ಸ್ಟರ್ಲಿಂಗ್ ಕಸ್ಟಮ್ಸ್ ಹೌಸ್, ಕೊಳಚಿ ಕಂಬಳದಲ್ಲಿ ಮೇ ಒಂದರಂದು ಬೆಳಗ್ಗೆ 7.30ಕ್ಕೆ ಏಕಕಾಲದಲ್ಲಿ ಶ್ರಮದಾನ ಆರಂಭಗೊಳ್ಳಲಿದೆ. ಈಗಾಗಲೇ ಎಲ್ಲ ಸೇವಾ ಸಂಸ್ಥೆಗಳೊಂದಿಗೆ, ಎಂ ವಿ ಶೆಟ್ಟಿ, ಆಳ್ವಾಸ್. ಕೆ ಎಂ ಸಿ, ಇನ್ಫೊಸಿಸ್, ಯೂತ್ ಹಾಸ್ಟೆಲ್, ಕೆನರಾ ಸಣ್ಣ ಕೈಗಾರಿಕೆ, ಎಂ ಸಿ ಎಫ್ ಸಕ್ರಿಯವಾಗಿ ಸ್ವಚ್ಛತೆಯಲ್ಲಿ ಪಾಲ್ಗೊಳ್ಳಲಿದೆ. ತೋಟ ಬೆಂಗ್ರೆಯಲ್ಲಿ ರಾಜ್ಯ ಉಚ್ಛ ನ್ಯಾಯಾಲಯದ ನ್ಯಾಯ ಮೂರ್ತಿ ಹಾಗೂ ದ ಕ ಜಿಲ್ಲೆ ಆಡಳಿ ತಾತ್ಮಕ ನ್ಯಾಯ ಮೂರ್ತಿ ನಾಗ ಮೋಹನ್ ದಾಸ್ ಅವರು ಅಭಿಯಾ ನಕ್ಕೆ ಚಾಲನೆ ನೀಡುವರು. ಈ ಸಂದರ್ಭ ದಲ್ಲಿ ಜಿಲ್ಲಾ ಉಸ್ತು ವಾರಿ ಸಚಿವರಾದ ಜೆ. ಕೃಷ್ಣ ಪಾಲೆ ಮಾರ್, ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಸುರೇಶ್ ಕುಮಾರ್, ಉನ್ನತ ಶಿಕ್ಷಣ ಸಚಿವ ವಿ. ಎಸ್ ಆಚಾರ್ಯ, ವಿಧಾನಸಭಾ ಉಪಸಭಾಧ್ಯಕ್ಷರಾದ ಎನ್ ಯೋಗೀಶ್ ಭಟ್, ಸಂಸದ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಹಲವು ಗಣ್ಯತಿ ಗಣ್ಯರುರು ಕಡಲತೀರ ಸ್ವಚ್ಛತಾ ಆಂದೋಲನದಲ್ಲಿ ಪಾಲ್ಗೊಳ್ಳಲಿರುವರು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಎಂ ಆರ್ ಪಿ ಎಲ್ ಅಭಿಯಾನದ ಪ್ರಾಯೋಜಕತ್ವವನ್ನು ವಹಿಸಿದ್ದು, ಸಕ್ರಿಯ ಪಾಲ್ಗೊಳ್ಳುವಿಕೆಯಲ್ಲಿ ನಿರತರಾದವರಿಗೆ ಕ್ಯಾಪ್ ಮತ್ತು ತಿಂಡಿ ವ್ಯವಸ್ಥೆ ಮಾಡಲಾಗಿದೆ. ಎಲ್ಲ ಸ್ಥಳೀಯರು, ನಾಗರೀಕ ಬಂಧುಗಳು ಸ್ವಚ್ಛತಾ ಆಂದೋಲನದಲ್ಲಿ ಪಾಲ್ಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ವಿನಂತಿಸಿದ್ದು ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಶಾಲಾ ಮಕ್ಕಳು ಹಾಗೂ ಸಂಸ್ಥೆಗಳು ಕಿರು ನಾಟಕ ಹಾಗೂ ಪ್ರಾತ್ಯಕ್ಷಿಕೆಗಳನ್ನು ನೀಡಲಿರುವರು. ಒಟ್ಟು 150 ಅಧಿಕಾರಿಗಳು ಈ ಅಭಿಯಾನದ ಯಶಸ್ವಿಗೆ ದುಡಿದಿದ್ದು, ಜಿಲ್ಲೆಯಲ್ಲಿ ಸ್ವಚ್ಛತೆಗೆ ಸಂಬಂಧಿಸಿದ ಮೂರನೇ ಅಭಿಯಾನ ಇದಾಗಿದೆ. ವಾಹನ, ಸ್ವಚ್ಛತೆಗೆ ಸಂಬಂಧಿಸಿದ ಮೂಲಸೌಕರ್ಯಗಳನ್ನು ಪ್ರಾಯೋಜಕರು ಒದಗಿಸಿದ್ದಾರೆ. ಮಂಗಳೂರನ್ನು ಹಸಿರು, ಸುಂದರ ನಗರವನ್ನಾಗಿಸುವ ಧ್ಯೇಯದಡಿ ಈಗಾಗಲೇ ಫೆ.20ರಂದು ಹಾಫ್ ಮ್ಯಾರಥಾನ್, ಮಾರ್ಚ್ 27ರಂದು ಮಹಾ ಶ್ರಮದಾನ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಆರರಿಂದ ಏಳು ಸಾವಿರ ಜನರು ಪಾಲ್ಗೊಂಡಿದ್ದು ಕನಸಿನ ಸುಂದರ ನಗರಿಯನ್ನು ಸಾಕ್ಷಾತ್ಕರಿಸಲು ನಿರಂತರ ಇಂತಹ ಅಭಿಯಾನಗಳು ಸಾಕಾರವಾಗಲಿದೆ ಎಂಬುದು ಜಿಲ್ಲಾಧಿಕಾರಿ ಅಭಿಪ್ರಾಯ. ಜನರಲ್ಲಿ ಜಾಗೃತಿ, ಅರಿವು ಹಾಗೂ ಕರ್ತವ್ಯಪ್ರಜ್ಞೆ, ವಿದ್ಯಾರ್ಥಿಗಳಲ್ಲಿ ಜವಾಬ್ದಾರಿ ಇಂತಹ ಕಾರ್ಯಕ್ರಮಗಳಿಂದ ಮೂಡಲಿದೆ ಎಂಬ ವಿಶ್ವಾಸ ಜಿಲ್ಲಾಧಿಕಾರಿಗಳದ್ದು. ಇದಕ್ಕೆ ಎಲ್ಲರ ಸಹಕಾರದ ಅಗತ್ಯವಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.