Wednesday, April 13, 2011

ರಸ್ತೆ ಸುರಕ್ಷತಾ ಸಮಿತಿ ನಿರ್ಣಯ ಕಟ್ಟುನಿಟ್ಟಾಗಿ ಅನುಷ್ಠಾನಿಸಿ: ಜಿಲ್ಲಾಧಿಕಾರಿ ಸೂಚನೆ

ಮಂಗಳೂರು,ಏಪ್ರಿಲ್.13:ಬಸ್ಸುಗಳಿಗೆ ಜಿಪಿಎಸ್ ಅಳವಡಿಸುವ ಬಗ್ಗೆ, ಆಟೋ ರಿಕ್ಷಾ ಚಾಲಕರಿಗೆ ಆಟೋ ಸ್ಟಾಂಡ್ ಗೆ ಜಾಗ ನಿಗದಿಪಡಿಸುವ ಬಗ್ಗೆ, ರಸ್ತೆಗಳಲ್ಲಿ ಅವೈಜ್ಞಾನಿಕವಾಗಿ ಸ್ಪೀಡ್ ಬ್ರೇಕರ್ ಗಳನ್ನು ಅಳವಡಿಸದಿರುವ ಬಗ್ಗೆ ಜಿಲ್ಲಾಧಿಕಾರಿ ಸುಬೋಧ್ ಯಾದವ್ ಅವರು ಸಂಬಂಧಪಟ್ಟ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಇಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ರಸ್ತೆ ಸುರಕ್ಷತಾ ಸಭೆಯಲ್ಲಿ ಬಸ್ಸುಗಳಿಗೆ ಜಿಪಿಎಸ್ ಅಳವಡಿಸುವ ಬಗ್ಗೆಗಿನ ನಿರ್ಣಯದಲ್ಲಿ ಯಾವುದೇ ಬದಲಾವಣೆ ಇಲ್ಲ; ತಕ್ಷಣವೇ ಈ ನಿರ್ಣಯಕ್ಕೆ ಸಂಬಂದಪಟ್ಟವರು ಬದ್ಧರಾಗಿ ನಿರ್ಣಯ ಅನುಷ್ಠಾನಕ್ಕೆ ತರಬೇಕೆಂದರು. ಬಸ್ಸುಗಳ ಸಿಬ್ಬಂದಿ ಅಶಿಸ್ತಿನಿಂದ ವರ್ತಿಸುತ್ತಿದ್ದು, ಪ್ರಯಾಣಿಕರೊಂದಿಗೆ ಸಭ್ಯವಾಗಿ ವರ್ತಿಸುತ್ತಿಲ್ಲ; ನಗರದಲ್ಲಿ ಎಲ್ಲೆಂದರಲ್ಲಿ ಪ್ರಯಾಣಿಕರನ್ನು ಹತ್ತಿಸುವ ಮತ್ತು ತೀರಾ ಅಜಾಗರೂಕತೆಯಿಂದ ವಾಹನಗಳನ್ನು ಚಲಾಯಿಸುತ್ತಿರುವ ಬಗ್ಗೆ ದೂರುಗಳನ್ನು ಗಂಭೀರವಾಗಿ ಪರಿಗಣಿಸಿ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಜರುಗಿಸಬೇಕೆಂದು ಪೊಲೀಸ್ ಮತ್ತು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.
ರಸ್ತೆಗಳ ಕಾಮಗಾರಿ ಸರಿಯಾಗಿಲ್ಲ ಎಂಬ ಚೇಂಬರ್ ಆಫ್ ಕಾಮರ್ಸ್ ನ ಆರೋಪದ ಬಗ್ಗೆ ಪಿಡಬ್ಲ್ಯುಡಿ, ಆರ್ ಟಿ ಒ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಜಂಟಿ ಸಮೀಕ್ಷೆ ನಡೆಸಲು ಜಿಲ್ಲಾಧಿಕಾರಿಗಳು ಸೂಚಿಸಿದರು.ಮಂಗಳೂರು ನಗರದ ರಸ್ತೆಗಳಿಗೆ ರಸ್ತೆ ವಿಭಾಜಕಗಳು ಮತ್ತು ಪಾದಾಚಾರಿಗಳ ರಸ್ತೆ ದಾಟುಗಳಿಗೆ ಬಣ್ಣ ಬಳಿಯುವ ಬಗ್ಗೆ ಸಾಧಿಸಿದ ಅಭಿವೃದ್ಧಿಯನ್ನು ಸಭೆಯಲ್ಲಿ ಪರಿಶೀಲಿಸಿದ ಜಿಲ್ಲಾಧಿಕಾರಿಗಳು, ಆಟೋರಿಕ್ಷಾ ಪ್ರೀ ಪೇಯ್ಡ್ ಕೌಂಟರ್ ಗಳನ್ನು ಸ್ಥಾಪಿಸುವ ಬಗ್ಗೆ ಕೈಗೊಂಡ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿಗಳು ಪರಿಶೀಲನೆ ನಡೆಸಿದರು.
ವಿಶೇಷ ಆಂದೋಲನ ಮಾದರಿಯಲ್ಲಿ ಭೂಮಿ ಗುರುತಿಸುವಿಕೆ
ಬಡವರಿಗೆ ಸರ್ಕಾರಿ ಭೂಮಿ ಗುರುತ್ತಿಸುವಿಕೆ:ಸರ್ಕಾರಿ ಯೋಜನೆಗಳಡಿ ಬಡತನ ರೇಖೆಗಿಂತ ಕೆಳಗಿರುವ ಫಲಾನುಭವಿಗಳಿಗೆ ಜಿಲ್ಲೆಯಲ್ಲಿ ಸೌಲಭ್ಯಗಳನ್ನು ಒದಗಿಸಲು ಭೂಮಿ ಗುರುತಿಸುವಿಕೆಗೆ ವಿಶೇಷ ಆಂದೋಲನ ಮಾದರಿಯಲ್ಲಿ ರೂಪುರೇಷೆಯನ್ನು ವಿನ್ಯಾಸ ಮಾಡಿದ್ದು, ಈ ಸಂಬಂಧ ಇಂದು ಸಹಾಯಕ ಆಯುಕ್ತರು ಮತ್ತು ತಹಸೀಲ್ದಾರ್ ಗಳ ಸಭೆಯನ್ನು ನಡೆಸಿದರು.
ಈ ಸಂಬಂಧ ಈ ವಾರದೊಳಗೆ ಸಂಬಂಧಪಟ್ಟ ತಹಸೀಲ್ದಾರ್ ಗ್ರಾಮಪಂಚಾಯತ್ ಕಾರ್ಯದರ್ಶಿ ಮತ್ತು ಗ್ರಾಮಲೆಕ್ಕಿಗರ ಜೊತೆ ಸಭೆ ನಡೆಸಲು ಸೂಚಿಸಲಾಗಿದ್ದು, ಈ ಸಂಬಂಧ ಸಮರ್ಪಕ ಮಾರ್ಗದರ್ಶನಗಳನ್ನು ನೀಡಿದರು. ಭೂಮಿ ಗುರುತಿಸುವಿಕೆಯ ಜೊತೆಗೆ ಸಮೀಕ್ಷೆ ಮತ್ತು ನಕ್ಷೆಗಳನ್ನು ಮಾಡಿ ತಹಸೀಲ್ದಾರರು ಸಹಾಯಕ ಆಯುಕ್ತರ ಮೂಲಕ ಕಾರ್ಯಯೋಜನೆ ಸಲ್ಲಿಸಲು ಸೂಚನೆ ನೀಡಿದರು. ಯೋಜನೆಗಳ ತುರ್ತು ಅನುಷ್ಠಾನಕ್ಕೆ ಭೂಮಿ ಗುರುತಿಸುವಿಕೆ ಅತ್ಯಗತ್ಯವಾಗಿದ್ದು, ಈ ಕಾರ್ಯಕ್ಕಾಗಿ ಸಮಯಮಿತಿಯನ್ನು ಜಿಲ್ಲಾಧಿಕಾರಿಗಳು ನಿಗದಿಪಡಿಸಿದ್ದಾರೆ.

312 ಅನಧಿಕೃತ ಧಾರ್ಮಿಕ ರಚನೆ ತೆರವು:
ಸರ್ವೋಚ್ಛ ನ್ಯಾಯಾಲಯದ ಆದೇಶ ಅನುಷ್ಠಾನಿಸಲು ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆಯಾಗುವಂತಹ ಅನಧಿಕೃತ ಧಾರ್ಮಿಕ ಕಟ್ಟಡ ತೆರವು ಗೊಳಿಸುವ ಸಂಬಂಧ ನಡೆದ ಆರನೇ ಸಭೆಯಲ್ಲಿ ಗುರುತಿಸಲಾದ 312 ಸಮಸ್ಯೆಗಳನ್ನು ಬಗೆಹರಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು.245 ಅನಧಿಕೃತ ನಿರ್ಮಾಣಗಳನ್ನು ತೆರವುಗೊಳಿಸಲಾಗಿದೆ. 65 ಸಕ್ರಮ ಗೊಳಿಸಲಾಗಿದೆ. ಕಟ್ಟಡ ತೆರವು ಕಾರ್ಯಾಚರಣೆ ನಿರೀಕ್ಷಿತ ವೇಗದಲ್ಲಿ ಸಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ಈ ಬಗ್ಗೆ ಸಾಕಷ್ಟು ಮಾಹಿತಿ ಅಧಿಕಾರಿಗಳಿಗಿದ್ದು, ಇನ್ನು ಮುಂದೆ ಪ್ರತೀ ತಿಂಗಳು ಸಭೆ ನಡೆಸದೆ ಅಂತಿಮ ವರದಿ ನೀಡಲು ಸೂಚಿಸಿದರು. ಅತಿ ಸೂಕ್ಷ್ಮ, ನಿಭಾಯಿಸಲಾರದ ಸಮಸ್ಯೆಗಳನ್ನು ಮಾತ್ರ ತಮ್ಮ ಗಮನಕ್ಕೆ ತರಬೇಕೆಂದು ಸೂಚಿಸಿದರು. ಎಲ್ಲ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.