Tuesday, February 15, 2011

ಕರ್ತವ್ಯಚ್ಯುತಿ: ಜಿಲ್ಲಾಧಿಕಾರಿಗಳಿಂದ ಸಮಜಾಯಿಷಿ ಕೋರಿ ನೋಟೀಸು ಜಾರಿ

ಮಂಗಳೂರು, ಫೆಬ್ರವರಿ.15: ಸಾಮಾಜಿಕ ಭದ್ರತಾ ಯೋಜನೆಗಳಾದ ಅಂಗವಿಕಲ ವೇತನ, ಸಂಧ್ಯಾ ಸುರಕ್ಷಾ ಯೋಜನೆ, ವಿಧವಾ ವೇತನದಂತಹ ಕಡತಗಳ ವಿಲೇಯಲ್ಲಿ ನಿರ್ಲಕ್ಷ್ಯ ತೋರಿ ವಿಳಂಬಿಸಿದ್ದಕ್ಕೆ ಬೆಳ್ತಂಗಡಿ ಕಸ್ಬಾದ ಮೂವರು ಕಂದಾಯ ನಿರೀಕ್ಷಕರಿಗೆ ಸಮಜಾಯಿಷಿ ಕೋರಿ ನೋಟೀಸು ಜಾರಿ ಮಾಡಲು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.

ಫೆಬ್ರವರಿ 10 ರಂದು ಬೆಳ್ತಂಗಡಿ ತಾಲೂಕು ಕಚೇರಿಗೆ ಅನಿರೀಕ್ಷಿತ ಭೇಟಿ ನೀಡಿದ ಜಿಲ್ಲಾಧಿಕಾರಿ ಸುಬೋಧ್ ಯಾದವ್ ಅವರು, ಎಲ್ಲ ಪಿಂಚಣಿ ಯೋಜನೆಗಳಿಗೆ ಸಂಬಂಧಪಟ್ಟಂತೆ ಬಾಕಿ ಪಟ್ಟಿಯನ್ನು ಪರಿಶೀಲಿಸಿ ಈ ಕ್ರಮ ಕೈಗೊಂಡಿದ್ದಾರೆ. ಬೆಳ್ತಂಗಡಿಯ ಕೊಕ್ಕಡ ಹೋಬಳಿಯಲ್ಲಿ ಅಂಗವಿಕಲ ವೇತನಕ್ಕೆ ಸಂಬಂಧಿಸಿದಂತೆ ಒಟ್ಟು 11 ಪ್ರಕರಣಗಳು, ಸಂಧ್ಯಾ ಸುರಕ್ಷಾದ 23 ಪ್ರಕರಣಗಳು, ವಿಧವಾ ವೇತನದ 33 ಪ್ರಕರಣಗಳು 18.10. 10ರಿಂದ ಬಾಕಿ ಇರುವುದನ್ನು ಗಮನಿಸಲಾಗಿದೆ. ಬೆಳ್ತಂಗಡಿ ಕಸ್ಬಾದಲ್ಲಿ ಅಂಗವಿಕಲ ವೇತನಕ್ಕೆ ಸಂಬಂಧಿಸಿದಂತೆ ಒಟ್ಟು 171 ಪ್ರಕರಣಗಳು, ಸಂಧ್ಯಾ ಸುರಕ್ಷಾದ 149 ಪ್ರಕರಣಗಳು, ವಿಧವಾ ವೇತನದ 9 ಪ್ರಕರಣಗಳು 25.10. 10ರಿಂದ ಬಾಕಿ ಇವೆ. ವೇಣೂರು ಹೋಬಳಿಯಲ್ಲಿ ಅಂಗವಿಕಲ ವೇತನಕ್ಕೆ ಸಂಬಂಧಿಸಿದಂತೆ ಒಟ್ಟು 13 ಪ್ರಕರಣಗಳು, ಸಂಧ್ಯಾ ಸುರಕ್ಷಾದ 105 ಪ್ರಕರಣಗಳು, ವಿಧವಾ ವೇತನದ 22 ಪ್ರಕರಣಗಳು 20.10. 10 ರಿಂದ ಬಾಕಿ ಇದೆ. ಮೂರು ಕಂದಾಯಾಧಿಕಾರಿಗಳಿಗೂ ನೋಟೀಸು ನೀಡಲಾಗಿದೆ. ಬೆಳ್ತಂಗಡಿ ತಹಸೀಲ್ದಾರರಿಗೆ ಆರ್ ಎಂ ಐ ಎಸ್ ಬಾಕಿಯನ್ನು ತಕ್ಷನ ವಿಲೇ ಮಾಡಲು ಕ್ರಮಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದರು.