Wednesday, February 23, 2011

ನಿಗಧಿಗಿಂತ ಹೆಚ್ಚು ಬಸ್ ಪ್ರಯಾಣದರ-ವರದಿ ನೀಡಲು ಸಚಿವರ ಪತ್ರ

ಮಂಗಳೂರು, ಫೆಬ್ರವರಿ. 23:ಕೆಲವು ಖಾಸಗಿ ಬಸ್ ಗಳ ಪ್ರಯಾಣ ದರವನ್ನು ಅನಧಿಕೃತವಾಗಿ ಏರಿಕೆ ಮಾಡಿರುವುದು ಮತ್ತು ಕೆಲವೊಂದು ಪ್ರದೇಶಗಳಲ್ಲಿ ನಿಗಧಿತ ದರಕ್ಕಿಂತ ಹೆಚ್ಚುವರಿ ದರ ಪ್ರಯಾಣಿಕರಿಂದ ವಸೂಲು ಮಾಡುತ್ತಿರುವುದು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ಬಂದಿದೆ.ಈ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ವಿಜ್ಞಾನ ಮತ್ತು ತಂತ್ರ ಜ್ಞಾನ,ಜೀವಿ ಶಾಸ್ತ್ರ, ಪರಿಸರ,ಮೀನುಗಾರಿಕೆ,ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಕೃಷ್ಣ ಪಾಲೇಮಾರ್ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಅವರು ತಮ್ಮ ಪತ್ರದಲ್ಲಿ ಕೆಲವು ಖಾಸಗಿ ಬಸ್ಸುಗಳಲ್ಲಿ ಪದೇಪದೇ ಪ್ರಯಾಣದರ ಹೆಚ್ಚಿಸುತ್ತಿರುವ ಕುರಿತು ಕೆಲವು ಪತ್ರಿಕೆ ಗಳಲ್ಲಿಯೂ ಪ್ರಕಟವಾಗಿರುವ ವರದಿ ಬಗ್ಗೆ ಮಾನ್ಯ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದು,ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಅನಧಿಕೃತ ಪ್ರಯಾಣ ದರ ವಸೂಲಿಯನ್ನು ತಡೆಯುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರದಲ್ಲಿ ವಿನಂತಿಸಿದ್ದಾರೆ.
ಮಂಗಳೂರು-ಕಾರ್ಕಳ ವೋಲ್ವೋ ಬಸ್ ಪ್ರಾರಂಭಿಸಲು ಸಚಿವರ ಪತ್ರ: ಮಂಗಳೂರಿನಿಂದ ಕಾರ್ಕಳಕ್ಕೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವೋಲ್ವೋ ಬಸ್ ಸೇವೆ ಪ್ರಾರಂಭಿಸುವ ಪ್ರಸ್ತಾವನೆಯು ತುಂಬಾ ಸಮಯದಿಂದ ಕಾರ್ಯಗತ ಗೊಂಡಿಲ್ಲ.ಆದ್ದರಿಂದ ಮಂಗಳೂರಿನಿಂದ ಮೂಡಬಿದ್ರೆ ಮಾರ್ಗವಾಗಿ ಕಾರ್ಕಳಕ್ಕೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವತಿಯಿಂದ ವೋಲ್ವೋ ಬಸ್ ಸಂಚಾರವನ್ನು ತಕ್ಷಣದಿಂದ ಪ್ರಾರಂಭಿಸಲು ಕ್ರಮ ಕೈಗೊಂಡು ವರದಿ ನೀಡಲು ಸಚಿವರು ಮಂಗಳೂರಿನ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಸೂಚಿಸಿದ್ದಾರೆ.