Tuesday, February 15, 2011

ಶಾಲೆಗಳ ಮೂಲಭೂತ ಸೌಕರ್ಯಗಳ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸಲು ಸಭೆ

ಮಂಗಳೂರು, ಫೆಬ್ರವರಿ.15: ಉಚಿತ ಮತ್ತು ಕಡ್ಡಾಯ ಶಿಕ್ಷಣವು ಸಂವಿಧಾನ ಬದ್ಧ ಹಕ್ಕಾಗಿದ್ದು, ಈ ಹಕ್ಕಿನ ಪರಿಣಾಮಕಾರಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸರ್ವೋಚ್ಛ ನ್ಯಾಯಾಲಯ ಎಲ್ಲ ಜಿಲ್ಲಾಧಿಕಾರಿಗಳಿಂದ ವರದಿ ಕೋರಿದ್ದು, ಸಮಗ್ರ ವರದಿ ತಯಾರಿಸಲು ಅಪರ ಜಿಲ್ಲಾಧಿಕಾರಿಗಳಾದ ಪ್ರಭಾಕರ ಶರ್ಮಾ ಅವರು ಸೂಚನೆ ನೀಡಿದರು.
ಅವರಿಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕರೆದಿದ್ದ ಅಧಿಕಾರಿಗಳ ಸಭೆಯನ್ನುದ್ದೇಶಿಸಿ ಮಾತನಾಡಿ, ವರದಿಯನ್ನು ಸಾಕಷ್ಟು ಎಚ್ಚರಿಕೆಯಿಂದ ಹಾಗೂ ಕರಾರುವಕ್ಕಾಗಿ ಸಲ್ಲಿಸಬೇಕೆಂದು ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಿದರು. ಪ್ರತಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿನ ಮೂಲಭೂತ ಸೌಕರ್ಯಗಳು,ಗಂಡು ಮತ್ತು ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶೌಚಾಲಯ, ಕುಡಿಯುವ ನೀರು, ಕಂಪೌಂಡ್ ವಾಲ್ ಸೇರಿದಂತೆ ಎಲ್ಲ ಸೌಕರ್ಯಗಳನ್ನು ಪರಿಶೀಲಿಸಲು ಎರಡು ಸಮಿತಿಗಳನ್ನು ರಚಿಸಲಾಯಿತು. ಜಿಲ್ಲಾ ಮಟ್ಟದಲ್ಲಿ ಸಮನ್ವಯಾಧಿಕಾರಿಗಳಾಗಿ ವಿದ್ಯಾಂಗ ಉಪನಿರ್ದೆಶಕರಾದ ಚಾಮೇಗೌಡ ಅವರು ಕರ್ತವ್ಯ ನಿರ್ವಹಿಸುವರು. ಬಿಇಒ ಅವರು ನೋಡಲ್ ಅಧಿಕಾರಿಗಳಾಗಿರುವರು. ಜಿಲ್ಲಾಮಟ್ಟದ ಅಧಿಕಾರಿಗಳ ತಂಡ ಬಿಇಒ ವಲಯದ ಅಧಿಕಾರಿಗಳ ತಂಡ ತಯಾರಿಸಿದ ವರದಿಯನ್ನು ಸ್ಥಳ ಭೇಟಿಯ ಮೂಲಕ ಪರಿಶೀಲಿಸಲಿದೆ. ವರದಿ ಸಮರ್ಪಕ ವಾಗಿರ ಬೇಕೆಂಬುದಕ್ಕೆ ಹೆಚ್ಚಿನ ಒತ್ತನ್ನು ನೀಡಲಾಗಿದೆ. ಸಭೆಯಲ್ಲಿ ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಉಪ ನಿರ್ದೇಶಕ ರಾದ ವೃಷಭ ರಾಜೇಂದ್ರ ಮೂರ್ತಿ, ಪಶುಪಾಲನಾ ಇಲಾಖೆ ಉಪನಿರ್ದೇಶಕರಾದ ಡಾ. ಕೆ.ವಿ ಹಲಗಪ್ಪ ಅವರನ್ನೊಳಗೊಂಡಂತೆ ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಎಲ್ಲ ಅಧಿಕಾರಿಗಳು ಉಪಸ್ಥಿತರಿದ್ದರು.
ಪುತ್ತೂರು ವಲಯಕ್ಕೆ ಸಹಾಯಕ ಆಯುಕ್ತರಾದ ಡಾ. ಹರೀಶ್ ಕುಮಾರ್, ಬೆಳ್ತಂಗಡಿ ವಲಯಕ್ಕೆ ವಿಜಯ ಬಿ.ಪಿ (ಪ್ರೊಬೇಷನರಿ ಕೆ ಎ ಎಸ್), ಮೂಡಬಿದ್ರಿ ವಲಯಕ್ಕೆ ಫಿಲೋಮಿನಾ ಲೋಬೋ, ಮಂಗಳೂರು ವಲಯಕ್ಕೆ ಜಿಲ್ಲಾ ಸಮಾಜಕಲ್ಯಾಣಾಧಿಕಾರಿ ಅರುಣ್ ಫುರ್ಟದೋ, ಮಂಗಳೂರು ನಗರಕ್ಕೆ ಮಂಜುಳಾ, ಸುಳ್ಯ ವಲಯಕ್ಕೆ ಬಿ.ಕೆ. ಕುಸುಮಾಧರ್, ಬಂಟ್ವಾಳ ವಲಯಕ್ಕೆ ಡಾ. ಕೆ.ವಿ.ಹಲಗಪ್ಪ ಅವರನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಫೆಬ್ರವರಿ 28 ರೊಳಗೆ ಈ ಸಂಬಂಧ ಸಂಪೂರ್ಣ ವರದಿ ಸಿದ್ಧಗೊಳ್ಳಬೇಕಿದೆ.