Tuesday, February 1, 2011

ಜಿಲ್ಲೆಯಲ್ಲಿ 95,000 ಶೌಚಾಲಯಗಳ ನಿರ್ಮಾಣ : ಸಿ ಇ ಓ ಶಿವಶಂಕರ್

ಮಂಗಳೂರು ಫೆಬ್ರವರಿ 01: ಸಂಪೂರ್ಣ ಸ್ವಚ್ಚತಾ ಆಂದೋಲನದ ಅಂಗವಾಗಿ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು 95010 ಶೌಚಾಲಯಗಳನ್ನು 1.29 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ ಎಂದು ದ.ಕ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪಿ.ಶಿವಶಂಕರ್ ತಿಳಿಸಿದ್ದಾರೆ.ಅವರು ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಜರುಗಿದ ಜಿಲ್ಲಾ ನೀರು ಮತ್ತು ನೈರ್ಮಲ್ಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಬಡತನ ರೇಖೆಗಿಂತ ಕೆಳಗಿರುವ ಬಿಪಿಎಲ್ 59478 ಕುಟುಂಬಗಳು ಹಾಗೂ 35532 ಎಪಿಎಲ್ ಕುಟುಂಬಗಳು ವೈಯಕ್ತಿಕ ಶೌಚಾಲಯಗಳನ್ನು ಹೊಂದಿರುತ್ತದೆ.ಇದಲ್ಲದೆ ಜಿಲ್ಲೆಯಲ್ಲಿ 70 ಸಮುದಾಯ ಶೌಚಾಲಯಗಳು 1236 ಶಾಲಾ ಶೌಚಾಲಯಗಳು ಹಾಗೂ 505 ಅಂಗನವಾಡಿಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಲಾಗಿದೆಯೆಂದು ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ತಿಳಿಸಿದರು.ಜಿಲ್ಲೆಯಲ್ಲಿ ಬೆಳ್ತಂಗಡಿ ತಾಲ್ಲೂಕಿನ ಹೊಸಂಗಡಿ ಗ್ರಾಮಪಂಚಾಯತ್ ಸಂಪೂರ್ಣ ಸ್ವಚ್ಚ ಗ್ರಾಮವಾಗಿದ್ದು,ಜಿಲ್ಲಾ ಮಟ್ಟದಲ್ಲಿ ಸ್ವರ್ಣ ನೈರ್ಮಲ್ಯ ಪ್ರಥಮ ಬಹುಮಾನ ರೂ.5 ಲಕ್ಷ ತನ್ನದಾಗಿಸಿಕೊಂಡಿದೆ ಎಂದು ತಮ್ಮ ಸಂತಸ ಸೂಚಿಸಿದರು.ಇತ್ತೀಚಿನ ಉಚ್ಚ ನ್ಯಾಯಾಲಯದ ಆದೇಶದಂತೆ ಎಲ್ಲಾ ಗ್ರಾಮ ಪಂಚಾಯತ್ ಗಳು ಪರಿಸರಕ್ಕೆ ದಕ್ಕೆ ತರುವುದಿಲ್ಲ ಮತ್ತು ನದಿ ಪಾತ್ರಗಳನ್ನು ಮಲಿನಗೊಳಿಸುವುದಿಲ್ಲ ಎಂಬುದಾಗಿ ಪ್ರಮಾಣ ಪತ್ರ ಸಲ್ಲಿಸಬೇಕು.ಒಂದು ವೇಳೆ ಇದಕ್ಕೆ ತಪ್ಪಿದರೆ ಅಂತಹ ಗ್ರಾಮ ಪಂಚಾಯತ್ ಅಧ್ಯಕ್ಷರು/ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ನ್ಯಾಯಾಂಗ ನಿಂದನೆ ಪ್ರಕರಣ ಎದುರಿಸಬೇಕಾಗುತ್ತದೆ ಎಂದರು.ಸಭೆಯಲ್ಲಿ ಹಾಜರಿದ್ದ ಜಿಲ್ಲಾ ಆರೋಗ್ಯ ಹಾಗೂ ಕುಟಂಬ ಕಲ್ಯಾಣಾಧಿಕಾರಿ ಡಾ.ಓ.ರಂಗಪ್ಪ ಅವರ ಮಾತನಾಡಿ ಪ್ರತಿಯೊಂದು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಶೌಚಾಲಯ ನಿರ್ಮಿಸುವಂತೆ ಸಂಬಂಧಿಸಿದ ಗ್ರಾಮ ಪಂಚಾಯತ್ ಗಳು ಮುಂದೆ ಬರಬೇಕೆಂದರು.ಜಿಲ್ಲಾ ಮಟ್ಟದಲ್ಲಿ ರಜತ ನೈರ್ಮಲ್ಯ ಪುರಸ್ಕಾರಕ್ಕೆ ಆಯ್ಕೆಯಾಗಿರುವ ಇತರ ಗ್ರಾಮ ಪಂಚಾಯತ್ ಗಳೆಂದರೆ ಬಂಟ್ವಾಳ ತಾಲೂಕಿನ ಇರಾ ಗ್ರಾಮ ಪಂಚಾಯತ್ ದ್ವಿತೀಯ ಬಹುಮಾನ ರೂ.2.00 ಲಕ್ಷ ಹಾಗೂ ಪುತ್ತೂರು ತಾಲೂಕಿನ ನೆಕ್ಕಿಲಾಡಿ ತೃತೀಯ ರೂ 1.00 ಲಕ್ಷ ಬಹುಮಾನ ಪಡೆದಿವೆ. ಫೆಬ್ರವರಿ 26 ರಂದು ರಾಜ್ಯ ಮಟ್ಟದ ಪುರಸ್ಕಾರ ಪ್ರಧಾನ ಸಮಾರಂಭ ಮಂಗಳೂರಿನಲ್ಲಿ ಜರುಗಲಿದ್ದು ಮಾನ್ಯ ಮಖ್ಯಮಂತ್ರಿಗಳಾದಿಯಾಗಿ ಇನ್ನೂ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.
ಸಭೆಯಲ್ಲಿ ಉಪ ಕಾರ್ಯದರ್ಶಿ ಕೆ.ಶಿವರಾಮೇಗೌಡ, ಮುಖ್ಯ ಯೋಜನಾಧಿಕಾರಿ ಜೆ.ತಾಕತ್ ರಾವ್ ಮುಂತಾದವರು ಹಾಜರಿದ್ದರು.