Wednesday, February 23, 2011

103 ಅನಧಿಕೃತ ಧಾರ್ಮಿಕ ಕಟ್ಟಡಗಳ ತೆರವು-ಸುಬೋಧ್ ಯಾದವ್

ಮಂಗಳೂರು. ಫೆಬ್ರವರಿ, 23:ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಇಲ್ಲಿಯ ತನಕ ಅನಧಿಕೃತ ಧಾರ್ಮಿಕ ಕಟ್ಟಡಗಳ ತೆರವು ಕಾರ್ಯಾಚರಣೆ ಕುರಿತಂತೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆಸಲಾದ ನಾಲ್ಕು ಸಭೆಗಳ ತೀರ್ಮಾನದಂತೆ ಜಿಲ್ಲೆಯಲ್ಲಿ ಒಟ್ಟು 104 ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ಇಲ್ಲಿಯವರೆಗೆ ತೆರವು ಗೊಳಿಸಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಸುಬೋಧ್ ಯಾದವ್ ತಿಳಿಸಿದ್ದಾರೆ.
ಅವರು ಇಂದು ತಮ್ಮ ಕಚೇರಿಯಲ್ಲಿ ಈ ಸಂಬಂಧ ನಡೆದ ಜಿಲ್ಲಾ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಮಾತ ನಾಡುತ್ತಿದ್ದರು.
ಇಂದಿನ ಸಭೆಯಲ್ಲಿ 78 ಪ್ರಕರಣಗಳ ಬಗ್ಗೆ ವರದಿಗಳ ಸಲ್ಲಿಕೆಯಾಗಿದ್ದು ಇದರಲ್ಲಿ 30 ಪ್ರಕರಣಗಳು ತೆರವುಗೊಳಿಸಿದ್ದು,26 ಪ್ರಕರಣಗಳು ತೆರವಿಗೆ ಬಾಕಿ ಇದ್ದು 15 ಪ್ರಕರಣಗಳನ್ನು ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದ ಕಾರಣ ಇವುಗಳನ್ನು ಸಕ್ರಮಗೊಳಿಸಲು ಸಭೆಯಲ್ಲಿ ಶಿಫಾರಸು ಮಾಡಲಾಯಿತು.ಫೆಬ್ರವರಿ 28 ರೊಳಗೆ ಬಾಕಿ ಇರುವ ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸುವಂತೆ ಜಿಲ್ಲಾಧಿಕಾರಿಗಳು ಸಂಬಂಧಿಸಿದ ಉಪವಿಭಾಗಾಧಿಕಾರಿಗಳು ಹಾಗೂ ತಹಶೀಲ್ದಾರರು ಸೇರಿದಂತೆ ಲೋಕೋಪಯೋಗಿ ಇಲಾಖಾಧಿಕಾರಿಗಳಿಗೆ ಸೂಚಿಸಿದರು.
ಇನ್ನು ಮುಂದೆ ಜಿಲ್ಲಾ ಮಟ್ಟದ ಸಭೆಗೆ ಹಾಜರಾಗುವ ಮುನ್ನ ತಮ್ಮತಮ್ಮ ತಾಲ್ಲೂಕುಗಳ ಪ್ರಕರಣಗಳ ಕುರಿತು ಲೋಕೋಪಯೋಗಿ ಇಲಾಖೆ,ಇತರೆ ಇಲಾಖೆಗಳ ತಾಲ್ಲೂಕು ಮಟ್ಟದ ಅಧಿಕಾರಿಗಳಲ್ಲಿ ಚರ್ಚಿಸಿ ಅಂತಿಮ ಒಪ್ಪಿಗೆಗಾಗಿ ಮಾತ್ರ ಜಿಲ್ಲಾ ಮಟ್ಟದ ಸಭೆಯಲ್ಲಿ ಮಂಡಿಸಲು ಜಿಲ್ಲಾಧಿಕಾರಿಗಳು ಸೂಚಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ ಹಾಗೂ ಇನ್ನಿತರ ಇಲಾಖಾ ಅಧಿಕಾರಿಗಳು ಹಾಜರಿದ್ದರು.
ಸರಕಾರಿ ಜಮೀನು ಒತ್ತುವರಿ ಸಂಪೂರ್ಣ ವರದಿಗೆ ತಹಶೀಲ್ದಾರರಿಗೆ ಸೂಚನೆ:
ಜಿಲ್ಲೆಯಲ್ಲಿ ಖಾಸಗಿಯವರಿಂದ ಸರ್ಕಾರಿ ಜಮೀನು ಒತ್ತುವರಿ ಯಾಗಿರುವ ಬಗ್ಗೆ ಇನ್ನು 8 ದಿನಗಳೊಳಗಾಗಿ ಸಂಪೂರ್ಣ ವರದಿ ನೀಡುವಂತೆ ಜಿಲ್ಲಾಧಿಕಾರಿ ಸುಬೋಧ್ ಯಾದವ್ ಅವರು ಕಂದಾಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅಲ್ಲದೆ ಈಗಾಗಲೇ ಈ ಬಗ್ಗೆ ಒತ್ತುವರಿ ಮಾಹಿತಿ ಇದ್ದಲ್ಲಿ ಅಂತಹವರನ್ನು ಟಾಪ್ಟೆನ್ ಪಟ್ಟಿ ಮಾಡಿ ಒತ್ತುವರಿ ತೆರವಿಗೆ ಮುಂದಾಗುವಂತೆ ಅಧಿಕಾರಿಗಳಿಗೆ ತಿಳಿಸಿದರು.