Saturday, February 26, 2011

ದೌರ್ಜನ್ಯಕ್ಕೊಳಗಾದ, ನೊಂದ ಮಹಿಳೆಯರ ದೂರುಗಳನ್ನು ಸ್ವೀಕರಿಸಿ - ಮಂಜುಳಾ

ಮಂಗಳೂರು, ಫೆಬ್ರವರಿ. 26:ಗಂಡನ ಕಿರುಕುಳ, ಲೈಂಗಿಕ ದೌರ್ಜನ್ಯ,ವರದಕ್ಷಿಣೆಯ ಒತ್ತಡ ಇತ್ಯಾದಿಗಳಿಂದ ನೊಂದ ಮಹಿಳೆ ಪರಿಹಾರಕ್ಕಾಗಿ ನ್ಯಾಯ ಬೇಡಿ ದೂರು ನೀಡಲು ಬಂದಾಗ ಅಂತಹವರ ದೂರುಗಳನ್ನು ಸಮಚಿತ್ತದಿಂದ ಆಲಿಸಿ ಸ್ವೀಕರಿಸುವಂತೆ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಮಂಜುಳಾ ಅವರು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಅವರು ಇಂದು ದ.ಕ.ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಮಹಿಳೆಯರಿಗೆ ಹೇಗೆ ರಕ್ಷಣೆ ನೀಡಲಾಗುತ್ತಿದೆ ಎಂಬ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳು,ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಚರ್ಚಿಸಿ ಮಾತನಾಡುತ್ತಿದ್ದರು.ಜಿಲ್ಲೆಯಲ್ಲಿ ನಿರಾಶ್ರಿತ ಮಹಿಳೆಯರು ಹಾಗೂ ಗಂಡ ಅಥವಾ ಕುಟುಂಬದವರ ದೌರ್ಜನ್ಯಕ್ಕೊಳಗಾಗಿ ಆಶ್ರಯ ಬೇಡಿ ಬಂದವರಿಗೆ ತಾತ್ಕಾಲಿಕ ವಸತಿ ಸೌಕರ್ಯಕ್ಕೆ ಇದ್ದದ್ದೊಂದು ಸ್ವೀಕಾರ ಕೇಂದ್ರ ಬಂದ್ ಆಗಿರುವುದರಿಂದ ತುಂಬಾ ತೊಂದರೆಯಾಗಿರುವ ಬಗ್ಗೆ,ಸಾಂತ್ವನ ಮಹಿಳಾ ಸಹಾಯವಾಣಿ ಹಾಗೂ ಮಹಿಳಾ ಪುನರ್ ವಸತಿ ಕೇಂದ್ರದ ಕಾರ್ಯಕರ್ತರು ಹಾಗೂ ಮಹಿಳಾ ಪೊಲೀಸ್ ಠಾಣಾಧಿಕಾರಿ ಮಹಿಳಾ ಆಯೋಗದ ಅಧ್ಯಕ್ಷರ ಗಮನಕ್ಕೆ ತಂದರು.ದಿಕ್ಕು ದೆಸೆಯಿಲ್ಲದ ಹಿರಿಯರ ಅಂಕೆ ಇಲ್ಲದೆ, ಕಪಟ ಪ್ರೇಮದ ಬಲೆಗೆ ಬಿದ್ದು ಮದುವೆ ಆಗಿರುವ ಪ್ರೇಮ ವಿವಾಹಗಳು,ವರದಕ್ಷಿಣೆ ದಾಹ, ಸಂಶಯಗಳಿಂದಾಗಿ 1-2 ವರ್ಷಗಳಲ್ಲೇ ಸಂಬಂಧಗಳು ಮುರಿದು ಬೀಳುತ್ತವೆ.ಇಂತಹ ಹೆಣ್ಣು ಮಕ್ಕಳ ಬಾಳು ಅಕ್ಷರಶ: ನರಕ ಸದೃಶವಾಗಿದೆ ಎಂದು ತಮ್ಮ ಆತಂಕ ತೋರ್ಪಡಿಸಿದ ಮಹಿಳಾ ಆಯೋಗದ ಅಧ್ಯಕ್ಷರು ಮೈಸೂರಿನ ಊಟಿ ರಸ್ತೆಯಲ್ಲಿರುವ ಶಕ್ತಿ ಕೇಂದ್ರ ಮಹಿಳಾ ಪುನರ್ ವಸತಿ ಕೇಂದ್ರದ ಮಾದರಿಯಲ್ಲಿ ಮಂಗಳೂರು ಸೇರಿದಂತೆ ರಾಜ್ಯದ ಇತರೆಡೆಗಳಲ್ಲಿ ತೆರೆಯಲು ಸರ್ಕಾರದ ಗಮನ ಸೆಳೆಯುವುದಾಗಿ ತಿಳಿಸಿದರು.ನೊಂದ ಮಹಿಳೆಯರು ಪೊಲೀಸ್ ಠಾಣೆಗೆ ಬಂದಾಗ ಪೊಲೀಸರು ಮಹಿಳಾ ಸ್ನೇಹಿಗಳಾಗಿ ಅವರ ದುಖ: ದುಮ್ಮಾನಗಳನ್ನು ಆಲಿಸಬೇಕೆಂದು ಮನವಿ ಮಾಡಿದರು.ತಾವು ಮಹಿಳಾ ಆಯೋಗದ ಅಧ್ಯಕ್ಷರಾದ ಮೇಲೆ ಒಂದೂವರೆ ತಿಂಗಳಲ್ಲಿ 238 ಪ್ರಕರಣಗಳು ದಾಖಲಾಗಿವೆ.ಮಹಿಳೆಯರ ಅಜ್ಞಾನ ಇನ್ನಿತರೆ ಕಾರಣಗಳಿಂದ ಶೇಕಡಾ 60ಕ್ಕೂ ಹೆಚ್ಚು ದೌರ್ಜನ್ಯ ಪ್ರಕರಣಗಳು ಬೆಳಕು ಕಾಣುತ್ತಿಲ್ಲ.ಪ್ರತೀದಿನ ಮಹಿಳಾ ದೌರ್ಜನ್ಯ ಪ್ರಕರಣಗಳನ್ನು ದಾಖಲಿಸುವ ಜೊತೆಗೆ ವಾರದಲ್ಲಿ ಯಾವುದಾದರೊಂದು ನಿರ್ದೀಷ್ಠ ದಿನವನ್ನು ವಿಶೇಷವಾಗಿ ಮಹಿಳೆಯರ ಅಹವಾಲು ಸ್ವೀಕಾರಕ್ಕೆ ಮೀಸಲಿಡುವಂತೆ ಅರಕ್ಷಕರಲ್ಲಿ ಮನವಿ ಮಾಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಜನ ರಾಜ್ಯದ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಅತ್ಯಂತ ಸುಶಿಕ್ಷಿತರು ಸಂಸ್ಕೃತಿವಂತರು ಆದರೆ ಬಸ್ಸುಗಳಲ್ಲಿ ಮಹಿಳೆಗೆ ಮೀಸಲಿಟ್ಟ ಆಸಗಳಲ್ಲಿ ಮಹಿಳೆಯರು ನಿಂತಿದ್ದರೂ ಸ್ಥಳ ಬಿಡದೆ ಕೂರುವುದು ಸಂಸ್ಕೃತಿಗೆ ಅಪಚಾರವೆಸಗಿದಂತೆಯೇ ಸರಿ ಎಂದ ಅವರು ಮಹಿಳೆಯರಿಗೆ ಮೀಸಲಿಟ್ಟಿರುವ ಜಾಗದಲ್ಲಿ ಪುರುಷ ಸಹ ಪ್ರಯಾಣಿಕರು ಅವರ ಆಸನಗಳನ್ನು ಬಿಟ್ಟುಕೊಡಬೇಕೆಂದು ತಿಳಿಸಿದ್ದಾರೆ.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ,ಜಿಲ್ಲಾ ಪಂಚಾಯತ್ ಸಿಇಓ ಪಿ.ಶಿವಶಂಕರ್, ಡಿವೈಎಸ್ ಪಿ ಬಿ.ಜೆ.ಭಂಡಾರಿ, ಜಿಲ್ಲಾ ಪಂಚಾಯತ್ ಅಧ್ಯಕ್ಷ್ಯೆ ಶೈಲಜಾ ಭಟ್ ,ರಾಜ್ಯ ಬಾಲಭವನ ಅಧ್ಯಕ್ಷ್ಯೆ ಸುಲೋಚನಾ ಭಟ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಉಪನಿರ್ದೇಶಕಿ ಶಕುಂತಳಾ ಭಾಗವಹಿಸಿದ್ದರು.