Tuesday, February 22, 2011

ಮಕ್ಕಳ ಸರ್ವಾಂಗೀಣ ಪ್ರಗತಿಗೆ ಬಾಲವಿಕಾಸ ಅಕಾಡೆಮಿ

ಮಂಗಳೂರು. ಫೆಬ್ರವರಿ,22:ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗಾಗಿ ಕರ್ನಾಟಕ ಸರ್ಕಾರ ಎಲ್ಲಾ ಜಿಲ್ಲೆಗಳಲ್ಲಿ ಬಾಲ ವಿಕಾಸ ಅಕಾಡೆಮಿಗಳನ್ನು ಸ್ಥಾಪಿಸಿದೆ. ಈ ಬಾಲವಿಕಾಸ ಅಕಾಡೆಮಿಯ ಮೂಲ ಉದ್ದೇಶಗಳೆಂದರೆ, ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ವಿಶೇಷ ಕಾರ್ಯಕ್ರಮಗಳನ್ನು ರೂಪಿಸುವುದು ಮುಖ್ಯವಾಗಿ ಆರ್ಥಿಕವಾಗಿ,ಸಾಮಾಜಿಕವಾಗಿ ಹಿಂದುಳಿದ ಮಕ್ಕಳನ್ನು ಕೇಂದ್ರವಾಗಿಟ್ಟುಕೊಂಡು ಕಾರ್ಯ ಕ್ರಮಗಳನ್ನು ರೂಪಿಸು ವುದಾಗಿದೆ. ಗ್ರಾಮೀಣ ಮಕ್ಕಳ ಮನೋ ವಿಕಾಸಗೊಳಿಸುವ ಆತ್ಮ ಸ್ಥೈರ್ಯ ತುಂಬುವ ರಚನಾತ್ಮಕ ಕಾರ್ಯ ಕ್ರಮಗಳನ್ನು ರೂಪಿಸುವುದು.ಡಾ.ಶಿವರಾಮ ಕಾರಂತರ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಪ್ರಯತ್ನಿಸಿದ ಪ್ರಯೋಗಗಳನ್ನು ಅನುಷ್ಠಾನ ಗೊಳಿಸುವುದಾಗಿದೆ. ವಿಜ್ಞಾನ,ಸಾಹಿತ್ಯ,ಸಂಸ್ಕೃತಿ ಕಲೆಗಳ ಚಟುವಟಿಕೆಗಳ ಕೇಂದ್ರವಾಗಿರುವ ಬಾಲವಿಜ್ಞಾನ ವಿಕಾಸ ಕೇಂದ್ರ ನಿರ್ಮಿಸಿ ಮಕ್ಕಳ ಪ್ರತಿಬೆ ಅರಳಿಸುವ ನಿರಂತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು.ಮಕ್ಕಳ ಮನಸ್ಸು ಅರಳಿಸುವ ಮೌಲ್ಯಯುಕ್ತ ಮಕ್ಕಳ ಸಾಹಿತ್ಯ ರಚನೆಯಾಗುವಂತೆ ಮಾಡುವುದು.ಮಗುವು ಹುಟ್ಟಿದಾಗಿನಿಂದ ಹರೆಯದವರೆಗೆ ಮಗುವಿನ ದೈಹಿಕ,ಬೌದ್ಧಿಕ,ಸಾಮಾಜಿಕ ಮತ್ತು ವ್ಯಕ್ತಿತ್ವ ಬೆಳವಣಿಗೆಗಾಗಿ ಶಿಕ್ಷಣ,ಆರೋಗ್ಯ,ಪೌಷ್ಟಿಕತೆ,ಮನೋವಿಜ್ಞಾನ ಹಾಗೂ ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಹೆಚ್ಚಿನ ಅಭಿವೃದ್ಧಿಗೊಳಿಸಿ ರಾಜ್ಯದಲ್ಲಿರುವ ಮಕ್ಕಳ ಸ್ಥಿತಿಗತಿಗಳನ್ನು ಉತ್ತಮಗೊಳಿಸುವುದು.ಮಕ್ಕಳ ಮೇಲಾಗುತ್ತಿರುವ ಎಲ್ಲಾ ರೀತಿಯ ಶೋಷಣೆಗಳನ್ನು ತಡೆಗಟ್ಟಲು ಅಂತರ್ ಜಿಲ್ಲಾ ಮತ್ತು ಅಂತರ್ ರಾಜ್ಯ ಅಂತರ್ಜಾಲಗಳ ಸಂಪೂರ್ಣ ಬಳಕೆ ಮಾಡುವ ಮೂಲಕ ಎಲ್ಲಾ ವಿಧದ ಶೋಷಣೆಯ ವಿರುದ್ಧ ರಕ್ಷಣೆ ನೀಡುವ ಕಾರ್ಯಕ್ರಮಗಳನ್ನು ರೂಪಿಸುವುದು. ಮಕ್ಕಳ ಕ್ಷೇತ್ರದಲ್ಲಿ ನೂತನ ಅವಿಷ್ಕಾರಗಳು,ಸಂಶೋಧನೆಗಳು ಹಾಗೂ ವಿವಿಧ ತರಬೇತಿ ಕಾರ್ಯಕ್ರಮಗಳನ್ನು ರೂಪಿಸುವುದು. ಪರಿಣಾಮಕಾರಿಯಾದ ಶಿಕ್ಷಣ ಕಾರ್ಯಕ್ರಮದ ಮೂಲಕ ದುಡಿಯುವ ಮಕ್ಕಳ ಪುನರ್ವಸತಿಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವುದಾಗಿದೆ.
ದಕ್ಷಿಣ ಕನ್ನಡ ಜಿಲ್ಲಾ ಅಕಾಡೆಮಿ ಸಮಿತಿಯ ಅಧ್ಯಕ್ಷರಾಗಿ ದಕ್ಷಿಣಕನ್ನಡ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ,ಉಪಾಧ್ಯಕ್ಷರಾಗಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು, ಕಾರ್ಯದರ್ಶಿಗಳಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರು ಹಾಗೂ ಸರ್ಕಾರೇತರ ಸಮಿತಿಯ ಸದಸ್ಯರಾಗಿ ಐ.ಕೆ.ಬೊಳುವಾರು, ಮೌನೇಶ್ ವಿಶ್ವಕರ್ಮ ಹಾಗೂ ಗೋಪಾಡ್ಕರ್ ಅವರನ್ನು ನೇಮಿಸಲಾಗಿದೆ. ಇವರ ಜೊತೆಗೆ ಆಶಾ ನಾಯಕ್ ಅಧ್ಯಕ್ಷರು,ಮಕ್ಕಳ ಕಲ್ಯಾಣ ಸಮಿತಿ ಇವರು ಸಹ ಸಮಿತಿಯ ಗೌರವ ಸದಸ್ಯರಾಗಿರುತ್ತಾರೆ. ವಿದ್ಯಾರ್ಥಿ ಬಳಗದಿಂದ ಪಿಯುಸಿ ವಿದ್ಯಾರ್ಥಿ ಪ್ರಶಾಂತ್,ಸಮಿತಿಯ ಸದಸ್ಯನಾಗಿರುತ್ತಾರೆ.
ಜಿಲ್ಲಾ ಸಮಿತಿಯು ಫೆಬ್ರವರಿ 17 ರಂದು ಬಾಲವಿಕಾಸ ಅಕಾಡೆಮಿ ಜಿಲ್ಲಾ ಅಧ್ಯಕ್ಷರಾದ ಶಿವಶಂಕರ್ ಅವರ ಅಧ್ಯಕ್ಷತೆಯಲ್ಲಿ ಸಭೆ ಸೇರಿ ಜಿಲ್ಲೆಯಲ್ಲಿ ಮಕ್ಕಳ ಸರ್ವಾಂಗೀಣ ವಿಕಾಸಕ್ಕಾಗಿ ಕೈಗೊಳ್ಳಬೇಕಾದ ಕಾರ್ಯಕ್ರಮಗಳನ್ನು ರೂಪಿಸಲು ಉಪಸಮಿತಿಗಳನ್ನು ರಚಿಸುವಂತೆ ನಿರ್ಣಯ ಕೈಗೊಳ್ಳಲಾಯಿತು.