Wednesday, February 9, 2011

'ಆಹಾರೋತ್ಪನ್ನ ಅಭಿವೃದ್ಧಿಗೆ ಆದ್ಯತೆ ನೀಡಿ'

ಮಂಗಳೂರು, ಫೆಬ್ರವರಿ.09:ಕೃಷಿ ಪ್ರಧಾನ ದೇಶ ಭಾರತ ಎಲ್ಲ ವಲಯಗಳಲ್ಲಿ ಅಭಿವೃದ್ಧಿಯನ್ನು ದಾಖಲಿಸಿದ್ದು, ಆಹಾರೋತ್ಪನ್ನ ವಲಯಕ್ಕೂ ಹೆಚ್ಚಿನ ಆದ್ಯತೆಯನ್ನು ನೀಡಬೇಕು ಎಂದು ಮೀನುಗಾರಿಕಾ ಮಹಾವಿದ್ಯಾಲಯದ ಜಲಕೃಷಿ ತರಬೇತಿ ಕೇಂದ್ರದ ಪ್ರಾಧ್ಯಾಪಕರಾದ ಡಾ. ಹೆಚ್ ಶಿವಾನಂದ ಮೂರ್ತಿ ಹೇಳಿದರು.
ಅವರಿಂದು ಜಲಕೃಷಿ ವಿಭಾಗ ಮತ್ತು ವಿಸ್ತರಣಾ ಶಿಕ್ಷಣ ಕೇಂದ್ರ ಹಾಗೂ ಜಿಲ್ಲಾ ಕೃಷಿ ತರಬೇತಿ ಕೇಂದ್ರ ಬೆಳ್ತಂಗಡಿ ಇವರ ಆಶ್ರಯದಲ್ಲಿ ಫೆಬ್ರವರಿ 9 ರಿಂದ 11 ರವರೆಗೆ ಕೃಷಿ ತರಬೇತಿ ಕೇಂದ್ರದಲ್ಲಿ ಆಯೋಜಿಸಲಾದ ಸಿಹಿನೀರು ಮೀನು ಮತ್ತು ಸಿಗಡಿ ಸಾಕಣೆ ಕುರಿತ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಹಣವನ್ನು ತಿನ್ನಲು ಸಾಧ್ಯವಿಲ್ಲ ಎಂಬುದನ್ನು ಎಲ್ಲರೂ ತಿಳಿಯಬೇಕು; ಕೃಷಿಯಲ್ಲಿ ಕೃಷಿಕರು ಇಂದು ಆಸಕ್ತಿಯನ್ನು ಕಳೆದುಕೊಳ್ಳುತ್ತಿದ್ದು, ಕೃಷಿಗೆ ಹೆಚ್ಚಿನ ಪ್ರೋತ್ಸಾಹ ನೀಡುವುದು ಇಂದಿನ ಅಗತ್ಯ ಎಂದು ಪ್ರತಿಪಾದಿಸಿದ ಅವರು, ಸಮಗ್ರ ಕೃಷಿಯೊಂದೇ ಕೃಷಿಯಲ್ಲಿ ಲಾಭ ಗಳಿಸಲು ಇರುವ ದಾರಿ ಎಂದರು. ಕೃಷಿಕರ ಬಳಿ ತೆರಳಿ ಅವರಿಗೆ ತರಬೇತಿ ನೀಡುವ ಸದುದ್ದೇಶದಿಂದ ತರಬೇತಿ ಕಾರ್ಯಕ್ರಮವನ್ನು ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದ್ದು, ಮೀನುಗಾರಿಕಾ ವಲಯ ದೇಶದ ವಿದೇಶಿ ವಿನಿಮಯದಲ್ಲಿ ಸರಾಸರಿ ವಾರ್ಷಿಕ 8000 ಕೋಟಿ ರೂ. ದಾಖಲಿಸಿದೆ ಎಂದರು. ದೇಶ ಮೀನುಗಾರಿಕೆಯಲ್ಲಿ 3ನೇ ಸ್ಥಾನದಲ್ಲಿದ್ದು, ಸುಮಾರು 15 ದಶಲಕ್ಷ ಜನರು ಮೀನುಗಾರಿಕೆಯಿಂದ ಬದುಕು ಸಾಗಿಸುತ್ತಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಡಾ. ಪುತ್ರ. ಜಿ. ಟಿ ಅವರು, ಕೃಷಿ ತರಬೇತಿ ಕೇಂದ್ರ ಕೃಷಿಕರ ಸಮಗ್ರ ಅಭಿವೃದ್ಧಿಗೆ ಅಗತ್ಯವಾದ ತರಬೇತಿ ನೀಡಲು ಎಲ್ಲ ಸಹಕಾರ ನೀಡುವುದಾಗಿ ಹೇಳಿದರು. ಕೃಷಿಯ ಹಾಗೂ ಕೃಷಿಕರ ಉನ್ನತೀಕರಣ ತರಬೇತಿ ಕೇಂದ್ರದ ಧ್ಯೇಯ ಎಂದವರು ನುಡಿದರು. ಸಮಗ್ರ ಕೃಷಿಯೊಂದೇ ಇಂದಿನ ಹಲವು ಸಮಸ್ಯೆಗಳಿಗೆ ಉತ್ತರ ಎಂದರು.
ವಿಸ್ತರಣಾ ಶಿಕ್ಷಣ ಕೇಂದ್ರದ ಡಾ ಹೆಚ್ ಎನ್ ಆಂಜನೇಯಪ್ಪ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕ ಮಲ್ಲೇಶ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.ಇಂದು ಸಿಹಿನೀರು ಮೀನು ಮತ್ತು ಸಿಗಡಿ ಸಾಕಣೆ ಕುರಿತು, ಒಳನಾಡು ಮೀನುಕೃಷಿಯಲ್ಲಿ ಸಾಕಲು ಯೋಗ್ಯ ಮೀನುತಳಿಗಳ ಆಯ್ಕೆ, ಮೀನು ಕೃಷಿ ಕೈಗೊಳ್ಳಲು ಕೊಳಗಳ ಪೂರ್ವಭಾವಿ ಸಿದ್ಧತೆ, ಮಿಶ್ರತಳಿ ಮೀನುಕೃಷಿ, ಸಮಗ್ರ ಮೀನು ಕೃಷಿ ಕುರಿತ ಮಾಹಿತಿಯನ್ನು ಕೃಷಿಕರಿಗೆ ನೀಡಲಾಯಿತು. ಕೃಷಿಕರ ಸಕ್ರಿಯ ಭಾಗವಹಿಸುವಿಕೆಯಿತ್ತು. ನಾಳೆ ಮೀನುಕೃಷಿಯಲ್ಲಿ ಕೃತಕ ಆಹಾರದ ಮಹತ್ವ, ಮೀನುಕೃಷಿಯಲ್ಲಿ ಕೃತಕ ತಯಾರಿಕೆ ಹಾಗೂ ಬಳಕೆ, ಮೀನು ಸಾಕಾಣೆಯಲ್ಲಿ ನೀರಿನ ಗುಣಲಕ್ಷಣ ಮತ್ತು ನಿರ್ವಹಣೆ, ತ್ಯಾಜ್ಯ ನಿರ್ವಹಣೆ ಮತ್ತು ಪರಿಸರ ಸಮತೋಲನ ಕುರಿತ ಮಾಹಿತಿ ನೀಡಲಾಗುವುದು. ಫೆಬ್ರವರಿ 11 ರಂದು ಸಿಹಿನೀರು ಸಿಗಡಿ ಸಾಕಣೆ, ಸಿಗಡಿ ಸಾಕಣೆಯಲ್ಲಿ ಕಂಡು ಬರುವ ರೋಗಗಳು ಮತ್ತು ಹತೋಟಿ ಬಗ್ಗೆ ಮಾಹಿತಿ ನೀಡಲಾಗುವುದು. ಅಪರಾಹ್ನ ತರಬೇತಿಯಲ್ಲಿ ಪಾಲ್ಗೊಂಡ ಶಿಬಿರಾರ್ಥಿಗಳ ಅನಿಸಿಕೆ ಮತ್ತು ಅಭಿಪ್ರಾಯ ಹಾಗೂ ಚರ್ಚೆ. ಸಮಾರೋಪ ಮತ್ತು ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮ ನಡೆಯಲಿದೆ.