Saturday, February 26, 2011

ವೃಕ್ಷ ಪರಿಸರ ಪ್ರೇಮಿ "ಕೃಷ್ಣಪ್ಪ"

ಮಂಗಳೂರು, ಫೆಬ್ರವರಿ.26:ಹಲವಾರು ಸಮಾಜ ಮುಖೀ ಕಾರ್ಯಗಳು ಹೆಚ್ಚು ಪ್ರಚಾರವಿಲ್ಲದೆ ತನ್ನಿಂತಾನೆ ನಡೆಯುತ್ತಿರುತ್ತವೆ. ಈ ಪ್ರಕ್ರೀಯೆಯಿಂದಲೇ ಇಂದಿಗೂ ಸ್ವಸ್ಥ ಸಮಾಜ ಅಸ್ಥಿತ್ವದಲ್ಲಿದೆ.ಸ್ವಚ್ಛ ಹಸಿರು,ಪ್ರಗತಿಪರ ಮಂಗಳೂರು ಧ್ಯೇಯದೊಂದಿಗೆ ಕಳೆದ ಭಾನುವಾರ ಮಂಗಳೂರಿನಲ್ಲಿ ಆಯೋಜಿಸಿದ್ದ ಹಾಫ್ ಮ್ಯಾರಥಾನ್ ಉದ್ದೇಶವನ್ನು ಸಾರ್ಥಕಪಡಿಸಿದವರು ಮಂಗಳೂರಿನ ಒಬ್ಬ ನಿವೃತ್ತ ನೌಕರ ಅಕ್ಷರಶ: ವೃಕ್ಷ ಪ್ರೇಮಿ ಹಾಗೂ ಪರಿಸರ ಪ್ರೇಮಿ ಕೃಷ್ಣಪ್ಪ. ಕೃಷ್ಣಪ್ಪ ಅವರು ಮಂಗಳಾ ಕ್ರೀಡಾಂಗಣದಲ್ಲಿ ಗಿಡಗಳನ್ನು ಸ್ವತ:ತಾವೇ ಖರೀದಿಸಿ ರಸ್ತೆ ಬದಿಯಲ್ಲಿ ನೆಟ್ಟು ಅವುಗಳಿಗೆ ಪ್ರತೀನಿತ್ಯ ನೀರುಣಿಸುವರು.ಬೇವು,ಹಲಸು,ಹೆಬ್ಬಲಸು,ಮಾವು ಇಂತಹ ಪ್ರಯೋಜನಕಾರಿಯಾದ ಸಸಿಗಳನ್ನೇ ನೆಡುವ ಕೃಷ್ಣಪ್ಪ,ಎಲ್ಲಿಯಾದರೂ ಮರ ಕಡಿಯುವುದನ್ನು ಕಂಡರೆ ಅತ್ಯಂತ ದು:ಖಿತರಾಗುತ್ತಾರೆ. ಅಲ್ಲಿ ಮತ್ತೊಂದು ಸಸಿ ನೆಡುವುದನ್ನು ಮರೆಯುವುದಿಲ್ಲ.ಪ್ಲಾಸ್ಟಿಕ್ ತ್ಯಜಿಸಿ ಆಂದೋಲನವನ್ನು ಕೃಷ್ಣಪ್ಪ ಸದ್ದಿಲ್ಲದೆ ಮಾಡುತ್ತಿದ್ದಾರೆ. ಮರಗಳ ಉದುರಿದ ಎಲೆಗಳನ್ನು ತಾವು ನೆಟ್ಟ ಸಸಿಗಳಿಗೆ ಒಳ್ಳೆ ಪಾತಿ ಮಾಡಿ ಹಾಕಿ ಮೇಲೆ ಮಣ್ಣನ್ನು ಹಾಕಿ ಕಾಂಪೊಸ್ಟ್ ಆಗುವ ರೀತಿ ಮಾಡುವುದರಿಂದ ಸಸಿಗಳಿಗೆ ಉತ್ತಮ ಕಾಂಪೋಸ್ಟ್ ಗೊಬ್ಬರ ದೊರಕಿ ಸೊಂಪಾಗಿ ಬೆಳೆಯುತ್ತಿವೆ. ಕೇವಲ ಪರಿಸರ ಕಾಳಜಿಯೊಂದೇ ಕೃಷ್ಣಪ್ಪನವರ ಹವ್ಯಾಸವಾಗಿರದೇ ಅವರು ಅನೇಕ ರಕ್ತದಾನ ಶಿಬಿರಗಳಲ್ಲಿ ಭಾಗವಹಿಸುತ್ತಾರೆ.ಕೆಲವೊಮ್ಮೆ ಸ್ವತ: ರಕ್ತದಾನವನ್ನು ಮಾಡಿದ್ದಾರೆ. ಆರೋಗ್ಯ ಭಾಗ್ಯಕ್ಕೆ ಯೋಗ ಉತ್ತಮ ಸಾಧನ ಎನ್ನುವ ಕೃಷ್ಣಪ್ಪ ತಮ್ಮ 71ನೇ ವಯಸ್ಸಿನಲ್ಲಿ ಸಮಾಜಕ್ಕೆ ಹೊರೆಯಾಗದೇ ಸಮಾಜಕ್ಕೆ ಅತ್ಯಂತ ಪವಿತ್ರವಾದ ಕೆಲಸಗಳನ್ನು ನಿರ್ಮಲ ಮನಸ್ಸಿನಿಂದ ಮಾಡುತ್ತಿರುವುದು ಇಂದಿನ ಯುವಕರಿಗೆ ಮಾದರಿ.
ಸರ್ಕಾರದಿಂದ ತಮ್ಮ ಪರಿಸರ ಕೆಲಸಕ್ಕೆ ಬಿಡಿಗಾಸನ್ನು ಅಪೇಕ್ಷಿಸದ ತಮಗೆ ಬಿರುದು ಬಾವಲಿಗಳು ಪ್ರಶಸ್ತಿಗಳು ಬೇಕೆಂಬ ಹಂಬಲವಿಲ್ಲ.ಇಂತಹ ಕೃಷ್ಣಪ್ಪನವರು ನೂರಾರು ಜನ ಸಮಾಜಕ್ಕೆ ಬೇಕಾಗಿದೆ.