Wednesday, November 9, 2011

ಪಿಲಿಕುಳದಲ್ಲಿ ಮಕ್ಕಳ ಕಲಾ ಉತ್ಸವ ಪೂರ್ವಭಾವಿ ಸಭೆ

ಮಂಗಳೂರು,ನವೆಂಬರ್.09 : ಜನವರಿ 26 ರಿಂದ ಪಿಲಿಕುಳದಲ್ಲಿ ಆಯೋಜಿಸಿರುವ ರಾಷ್ಟ್ರ ಮಟ್ಟದ ಮಕ್ಕಳ ಕಲಾ ಉತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ಜವಾಹರ ಬಾಲಭವನ ಕಬ್ಬನ್ ಪಾರ್ಕ್ ಮತ್ತು ದಕ್ಷಿಣ ಕನ್ನಡ ಜಿಲ್ಲಾಡಳಿತ ಸಮಿತಿಗಳನ್ನು ರಚಿಸಿ ಕಾರ್ಯಕ್ರಮಗಳನ್ನು ರೂಪಿಸಿದ್ದು ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅವರನ್ನು ಕರೆಸಲು ಯತ್ನಿಸಲಾಗುವುದು ಎಂದು ರಾಜ್ಯ ಬಾಲಭವನ ಸೊಸೈಟಿ ಅಧ್ಯಕ್ಷರಾದ ಶ್ರೀಮತಿ ಸುಲೋಚನ ಜಿ.ಕೆ. ಭಟ್ ಅವರು ಹೇಳಿದರು.ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಈ ಸಂಬಂಧ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಕ್ಕಳ ಉತ್ಸವ ಯಶಸ್ಸಿಗೆ ರೂಪಿಸಿರುವ ಕಾರ್ಯಕ್ರಮಗಳ ಸ್ಥೂಲ ಪರಿಚಯ ನೀಡಿದ ಅವರು ಈ ಕಾರ್ಯಕ್ರಮದೊಂದಿಗೆ ಜಿಲ್ಲಾ ಬಾಲಭವನಕ್ಕೂ ಹೊಸ ರೂಪ ನೀಡಲು ನಿರ್ಧರಿಸಲಾಗಿದೆ ಎಂದರು.
ಮೆರವಣಿಗೆಯಿಂದ ಆರಂಭಿಸಿ ಸಮಾರೋಪದವರೆಗಿನ ಕಾರ್ಯಕ್ರಮಗಳ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗ ಚರ್ಚಿಸಿದ ಅವರು, ಮುಖ್ಯವಾಗಿ ಆಹಾರ, ವಸತಿ ಮತ್ತು ಸಂಪರ್ಕ ವ್ಯವಸ್ಥೆಯ ಕುರಿತು ಯೋಜನೆಯನ್ನು ಸಭೆಯಲ್ಲಿ ರೂಪಿಸಲಾಯಿತು. ಉತ್ಸವಕ್ಕೆ ಆಗಮಿಸುವ ಮಕ್ಕಳಿಗೆ ವಸತಿ, ಊಟ ಹಾಗೂ ಸ್ಥಳೀಯ ಸಾರಿಗೆ ವೆಚ್ಚವನ್ನು ಜಿಲ್ಲಾಡಳಿತ ಭರಿಸುತ್ತಿದ್ದು ತೊಂದರೆಯಾಗದಂತೆ ನಿರ್ವಹಿಸುವ ಭರವಸೆಯನ್ನು ಅಪರ ಜಿಲ್ಲಾಧಿಕಾರಿ ದಯಾನಂದ ಕೆ ಎ ಅವರು ನೀಡಿದರು.
ಮಂಗಳಜ್ಯೋತಿ ಶಾಲೆ, ಸೈಂಟ್ ಜೋಸೆಫ್ಸ್, ಸ್ಕೌಟ್ಸ್ ಅಂಡ್ ಗೈಡ್ಸ್ ಮತ್ತು ಕರಾವಳಿ ಕಾಲೇಜುಗಳಲ್ಲಿ ವಾಸ್ತವ್ಯಕ್ಕೆ ನೆರವು ಪಡೆಯುವುದಾಗಿ, ಈ ಸಂಬಂಧ ಹೊಸ ವೆಬ್ ಸೈಟ್ ಮೂಲಕ ಆನ್ ಲೈನ್ ರಿಜಿಸ್ಟ್ರೇಷನ್ ಮಾಡಿಸುವುದಾಗಿ ಸಭೆಯಲ್ಲಿ ಪ್ರಸ್ತಾಪಿಸಲಾಯಿತು.
ಇದೇ ಸಂದರ್ಭದಲ್ಲಿ ಫುಡ್ ಕೋರ್ಟ್ , ವಸ್ತುಪ್ರದರ್ಶನ ಮಳಿಗೆ ಸ್ಥಾಪಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು. ಸ್ವಾಗತ ಸಮಿತಿಯಲ್ಲಿ ಇನ್ನೂ ಹಲವು ನಗರದ ಗಣ್ಯರ ಹೆಸರನ್ನು ಸೇರಿಸಲಾಯಿತು ಮತ್ತು ಮೆರವಣಿಗೆ ಸಮಿತಿಯನ್ನು ರಚಿಸಲು ತೀರ್ಮಾನಿಸಲಾಯಿತು. ಸಭೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಸ್ಥಳೀಯ ಪಂಚಾಯಿತಿಗಳ ಚುನಾಯಿತ ಪ್ರತಿನಿಧಿಗಳು ಉಪಸ್ಥಿತರಿದ್ದರು.