Tuesday, November 22, 2011

ಅರಣ್ಯ ಪ್ರದೇಶದ ಕೊರಗರು ಅರ್ಜಿ ಸಲ್ಲಿಸಿದರೆ ಹಕ್ಕು ಪತ್ರ; ಜಿಲ್ಲಾಧಿಕಾರಿ

ಮಂಗಳೂರು,ನವೆಂಬರ್.22: ದಕ್ಷಿಣಕನ್ನಡ ಜಿಲ್ಲೆಯಲ್ಲಿ 24 ಕೊರಗರ ಕುಟುಂಬಗಳು ಅರಣ್ಯ ವ್ಯಾಪ್ತಿಯಲ್ಲಿ ಸಾಗುವಳಿ ಮಾಡುತ್ತಿದ್ದು,ಅವರು ಹಕ್ಕು ಪತ್ರ ಕೋರಿ ಸಂಬಂಧಿಸಿದವರಿಗೆ ಅರ್ಜಿ ಸಲ್ಲಿಸಿದಲ್ಲಿ ಕೂಡಲೇ ಹಕ್ಕು ಪತ್ರ ದೊರಕಿಸುವುದಾಗಿ ದಕ್ಷಿಣಕನ್ನಡ ಜಿಲ್ಲಾಧಿಕಾರಿ ಡಾ.ಎನ್.ಎಸ್.ಚನ್ನಪ್ಪ ಗೌಡರು ತಿಳಿಸಿದ್ದಾರೆ.
ಅವರು ಸೋಮವಾರ ತಮ್ಮ ಕಚೇರಿಯಲ್ಲಿ ಈ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೊರಗ ಮುಖಂಡರು ಸ್ವಯಂ ಸೇವಾ ಸಂಸ್ಥೆಗಳ ಪದಾಧಿಕಾರಿಗಳೊಂದಿಗೆ ಕೊರಗರ ಜಮೀನು ಹಕ್ಕು ಪತ್ರ ವಿತರಣೆ ಸೇರಿದಂತೆ ಇತರ ವಿಷಯಗಳ ಕುರಿತು ಚರ್ಚಿಸಿದರು.
ಜಿಲ್ಲೆಯಲ್ಲಿ 857 ಕೊರಗ ಕುಟುಂಬಗಳಿದ್ದು,ಅವರಲ್ಲಿ 501 ಕುಟುಂಬಗಳಿಗೆ ಸ್ವಂತ ಜಮೀನು ಇದೆ.209 ಕುಟುಂಬಗಳು ಸರ್ಕಾರಿ ಜಮೀನಿನಲ್ಲಿ ಸಾಗುವಳಿ ಮಾಡುತ್ತಿದ್ದರೆ, 24 ಕುಟುಂಬಗಳು ಅರಣ್ಯ ಪ್ರದೇಶದಲ್ಲಿದ್ದಾರೆ. 122 ಕುಟುಂಬಗಳು ಇತರ ಜಮೀನುಗಳಲ್ಲಿ ಇದ್ದಾರೆ.
501 ಕುಟುಂಬಗಳಿಗೆ ತಮ್ಮ ಜಮೀನು ಹಕ್ಕು ಪತ್ರ ಈಗಾಗಲೇ ಇದ್ದು ಇನ್ನೂ 356 ಕುಟುಂಬಗಳಿಗೆ ಹಕ್ಕು ಪತ್ರ ಸಿಕ್ಕಿಲ್ಲ ಎಂದ ಜಿಲ್ಲಾಧಿಕಾರಿಗಳು ಹಕ್ಕು ಪತ್ರ ವಿತರಣೆಯನ್ನು ,ಇನ್ನು ಒಂದು ತಿಂಗಳೊಳಗೆ ಪೂರ್ಣಗೊಳಿಸುವಂತೆ ತಹಶೀಲ್ದಾರರಿಗೆ ಕಾಲಮಿತಿಯನ್ನು ನಿಗಧಿಪಡಿಸುವಂತೆ ಉಪವಿಭಾಗಾಧಿಕಾರಿಗಳಿಗೆ ಸೂಚಿಸಿದರು. ಈಗಾಗಲೇ ಸರ್ಕಾರಿ ಜಾಗದಲ್ಲಿದ್ದು, ಇನ್ನೂ ಹಕ್ಕು ಪತ್ರ ಸಿಗದಿದ್ದವರು ಕೂಡಲೇ ಸಂಬಂಧಿಸಿದ ತಾಲ್ಲೂಕು ಅಧಿಕಾರಿಗಳಿಗೆ ಅರ್ಜಿಗಳನ್ನು ನೀಡಿದರೆ ಪರಿಶೀಲಿಸಿ ಹಕ್ಕು ಪತ್ರ ದೊರಕಿಸಲು ಸರ್ಕಾರಕ್ಕೆ ಕಳುಹಿಸಲಾಗುವುದೆಂದರು.
ಜಿಲ್ಲೆಯಲ್ಲಿ ಒಟ್ಟು 73 ಕೊರಗರ ಕುಟುಂಬಗಳಿಗೆ 82.15 ಎಕ್ರೆ ಜಮೀನು ಮಂಜೂರು ಮಾಡಲಾಗಿದೆ. ಬಂಟ್ವಾಳ ತಾಲೂಕಿನಲ್ಲಿ 27 ಕುಟುಂಬಗಳಿಗೆ 29.92 ಎಕ್ರೆ ಅತೀ ಹೆಚ್ಚು ,ಅತೀ ಕಡಿಮೆ ಸುಳ್ಯ ತಾಲೂಕಿನಲ್ಲಿ ಒಂದು ಕುಟುಂಬಕ್ಕೆ 0.70 ಎಕ್ರೆ ಜಮೀನು ಮಂಜೂರು ಮಾಡಲಾಗಿದೆ. ಮಂಗಳೂರು ತಾಲೂಕಿನ 19 ಕುಟುಂಬಗಳಿಗೆ 28.27 ಎಕ್ರೆ ,ಬೆಳ್ತಂಗಡಿ ತಾಲೂಕಿನ 21 ಕುಟುಂಬಗಳಿಗೆ 16.93 ಎಕ್ರೆ ಹಾಗೂ ಪುತ್ತೂರು ತಾಲೂಕಿನ 05 ಕುಟುಂಬಗಳಿಗೆ 6.33 ಎಕ್ರೆ ಜಮೀನು ಮಂಜೂರು ಮಾಡಲಾಗಿದೆಯೆಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಆರೋಗ್ಯ ಪ್ರೇರಕರಾಗಿ ಕಾರ್ಯ ನಿರ್ವಹಿಸುತ್ತಿರುವ ಕೊರಗ ಹೆಣ್ಣು ಮಕ್ಕಳಿಗೆ 5 ತಿಂಗಳ ಗೌರವಧನದ ಚೆಕ್ಗಳನ್ನು ನೀಡಿದರು. ಸ್ವಂತ ನಿವೇಶನವಿದ್ದು, ಮನೆ ನಿರ್ಮಿಸಲು ಸರ್ಕಾರ ನೀಡುವ ಅನುದಾನದ ಚೆಕ್ ಗಳನ್ನು ಜಿಲ್ಲಾಧಿಕಾರಿಗಳು ಇದೇ ಸಂದರ್ಭದಲ್ಲಿ ವಿತರಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ದಯಾನಂದ, ಮಂಗಳೂರು ಉಪವಿಭಾಗಾಧಿಕಾರಿ ಡಾ.ವೆಂಕಟೇಶ್ ಮುಂತಾದವರು ಹಾಜರಿದ್ದರು.