Wednesday, November 2, 2011

ನವೆಂಬರ್ 15ರಿಂದ ಮಕ್ಕಳ ಚಲನಚಿತ್ರೋತ್ಸವ

ಮಂಗಳೂರು,ನವೆಂಬರ್.02: ದಕ್ಷಿಣ ಕನ್ನಡ ಜಿಲ್ಲೆಯ 15 ಚಲನಚಿತ್ರ ಮಂದಿರಗಳಲ್ಲಿ ನವೆಂಬರ್ 15ರಿಂದ 17ರವರೆಗೆ ಮಂಗಳೂರು ನಗರದಲ್ಲಿ ಹಾಗೂ ನವೆಂಬರ್ 28 ರಿಂದ ಡಿಸೆಂಬರ್ 1 ರವರೆಗೆ ಗ್ರಾಮಾಂತರ ಪ್ರದೇಶಗಳಲ್ಲಿ ಮಕ್ಕಳ ಚಲನಚಿತ್ರೋತ್ಸವದ ಅಂಗವಾಗಿ ಚಲನಚಿತ್ರ ಪ್ರದರ್ಶನ ಏರ್ಪಡಿಸಲು ದಕ್ಷಿಣ ಕನ್ನಡ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಕೆ ಎ ದಯಾನಂದ ಇವರ ಅಧ್ಯಕ್ಷತೆಯಲ್ಲಿ ಈ ಕುರಿತು ಜರುಗಿದ ಸಭೆಯಲ್ಲಿ ನಿರ್ಣಯಿಸಲಾಯಿತು.
ಮಂಗಳೂರಿನ ಸೆಂಟ್ರಲ್, ನ್ಯೂಚಿತ್ರ, ರೂಪವಾಣಿ, ಜ್ಯೋತಿ, ರಾಮಕಾಂತಿ, ಶ್ರೀನಿವಾಸ, ಸುಚಿತ್ರ ಹಾಗೂ ಪ್ಲಾಟಿನಂ ಚಿತ್ರ ಮಂದಿರಗಳಲ್ಲಿ ದಿನಾಂಕ 15.11.11ರಿಂದ 17.11.11ರವರೆಗೆ ಪ್ರತಿದಿನ ಬೆಳಗ್ಗೆ 10ರಿಂದ 12 ಗಂಟೆಯವರೆಗೆ ರಿಯಾಯ್ತಿ ದರ ರೂ. 5ರಲ್ಲಿ ಚಿತ್ರ ಪ್ರದರ್ಶನ ಏರ್ಪಡಿಸಲು ತೀರ್ಮಾನಿಸಲಾಯಿತು.
ದಿನಾಂಕ 15.11.11. ರಂದು ಬೆಳಗ್ಗೆ ಜ್ಯೋತಿ ಚಿತ್ರಮಂದಿರದಲ್ಲಿ ಸಾಂಕೇತಿಕವಾಗಿ ಚಿತ್ರೋತ್ಸವ ಉದ್ಘಾಟನೆಯಾಗಲಿದೆ. ದಿನಾಂಕ 28.11. 11ರಿಂದ 1.12.11ರವರೆಗೆ ಸುರತ್ಕಲ್ ನ ನಟರಾಜ್, ಪುತ್ತೂರಿನ ಮಯೂರ ಮತ್ತು ಅರುಣ, ಸುಳ್ಯದ ಸಂತೋಷ್, ಮೂಡಬಿದರೆ ಅಮರಶ್ರೀ ಹಾಗೂ ಭಾರತ್ ಟಾಕೀಸ್ ಹಾಗೂ ಉಜಿರೆ ಸಂದ್ಯಾ ಚಿತ್ರ ಮಂದಿರಗಳಲ್ಲಿ ಚಿತ್ರೋತ್ಸವದ ಅಂಗವಾಗಿ ಚಲನಚಿತ್ರಗಳನ್ನು ಪ್ರತಿದಿನ ಬೆಳಗ್ಗೆ 10ರಿಂದ 12ರವರೆಗೆ ಪ್ರದರ್ಶಿಸಲು ತೀರ್ಮಾನಿಸಲಾಗಿದೆ.
ಮಕ್ಕಳ ಚಲನಚಿತ್ರೋತ್ಸವದ ಅಂಗವಾಗಿ ಪ್ರದರ್ಶನಗೊಳ್ಳುವ ಚಿತ್ರಗಳೆಂದರೆ ಕಲರವ, ಮ್ಯಾಜಿಕ್ ಅಜ್ಜಿ, ಚಂದನ ಚಿಗುರು, ಕೇರಾಫ್ ಫುಟ್ ಪಾತ್, ಚಿನ್ನಾರಿಮುತ್ತ, ಕೊಟ್ರೇಶಿ ಕನಸು ಸೇರಿದಂತೆ ಒಟ್ಟು 13 ಚಲನಚಿತ್ರಗಳು ಸೇರಿವೆ.
ಈ ಚಿತ್ರೋತ್ಸವವು ಕರ್ನಾಟಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಮಕ್ಕಳ ಚಿತ್ರ ಸಂಸ್ಥೆಯವರ ಸಹಕಾರದಿಂದ ಏರ್ಪಡಿಸಲಾಗಿದೆ.