Saturday, November 5, 2011

ದ.ಕ. ದಲ್ಲಿ 2404 ಹೆ. ಹಿಂಗಾರು ಬಿತ್ತನೆ ಪ್ರಗತಿ

ಮಂಗಳೂರು,ನವೆಂಬರ್.05: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂಗಾರು (ಸುಗ್ಗಿ) ಬಿತ್ತನೆ ಆರಂಭಗೊಂಡಿದ್ದು 2404 ಹೆಕ್ಟೇರ್ ಬಿತ್ತನೆಯಾಗಿದೆ. ಜಿಲ್ಲೆಯಲ್ಲಿ 24,000 ಹೆಕ್ಟೇರ್ ಗುರಿ ಇದ್ದು ಮಂಗಳೂರಿನಲ್ಲಿ 1347 ಹೆಕ್ಟೇರ್, ಬಂಟ್ವಾಳದಲ್ಲಿ 385 ಹೆ., ಬೆಳ್ತಂಗಡಿಯಲ್ಲಿ 203 ಹೆಕ್ಟೇರ್, ಪುತ್ತೂರಿನಲ್ಲಿ 454 ಹೆಕ್ಟೇರ್, ಸುಳ್ಯದಲ್ಲಿ 15 ಹೆಕ್ಟೇರ್ ಬಿತ್ತನೆಯಾಗಿದೆ.ಹಿಂಗಾರು ಬಿತ್ತನೆ ಕಾರ್ಯ ಪ್ರಗತಿ ಯಲ್ಲಿದ್ದು ಕಳೆದ ವರ್ಷ ಇದೇ ಅವಧಿ ಯಲ್ಲಿ ಜಿಲ್ಲೆಯಲ್ಲಿ 589 ಹೆಕ್ಟೇರ್ ಬಿತ್ತನೆ ಯಾಗಿತ್ತು.ಪ್ರಸಕ್ತ ಸಾಲಿನಲ್ಲಿ ಕೃಷಿ ಇಲಾಖೆ ಯಿಂದ ಸಬ್ಸಿಡಿ ದರದಲ್ಲಿ 7 ಮಂದಿ ರೈತರಿಗೆ ಬಿತ್ತನೆ ಯಂತ್ರವನ್ನು ನೀಡಲಾಗಿದ್ದು,ಅದರಲ್ಲಿ ಸುಳ್ಯ ತಾಲೂಕಿಗೆ 1, ಪುತ್ತೂರು-2,ಮಂಗಳೂರು-2,ಬಂಟ್ವಾಳ-2 ರಂತೆ ಸಬ್ಸಿಡಿ ದರದಲ್ಲಿ ಬಿತ್ತನೆ ಯಂತ್ರವನ್ನು ನೀಡಲಾಗಿದೆ. ಬಿತ್ತನೆ ಯಂತ್ರ ಖರೀದಿಗೆ 77,500 ರೂ. ಸಹಾಯಧನ ನೀಡಲಾಗಿದೆ. ಕಳೆದ ವರ್ಷ ಇಲಾಖೆಯ ಸಹಾಯಧನ ಪಡೆದು ಜಿಲ್ಲೆಯ ಮೂರು ಮಂದಿ ರೈತರು ಬಿತ್ತನೆ ಯಂತ್ರ ಖರೀದಿಸಿದ್ದಾರೆ.ಈ ಸಾಲಿನಲ್ಲಿ 7 ಮಂದಿ ರೈತರು ಇಲಾಖೆಯ ಸಹಾಯಧನದಲ್ಲಿ ಬಿತ್ತನೆ ಯಂತ್ರವನ್ನು ಖರೀದಿಸಿದ್ದಾರೆ. ಶೇಕಡಾ 50 ರಷ್ಟು ರೈತರು ನಾಟಿ ಯಂತ್ರವನ್ನು ಉಪಯೋಗಿಸುತ್ತಿದ್ದಾರೆ.
ಜಿಲ್ಲೆಯಲ್ಲಿ ಕಳೆದ ಎರಡು ಮೂರು ವರ್ಷಗಳಿಂದ ಶ್ರೀಪದ್ಧತಿಯನ್ನು ಜನಪ್ರಿಯಗೊಳಿಸಲ ಖಾರಿಫ್ಗೆ 104 ಎಕರೆಯಲ್ಲಿ ಪ್ರಾತ್ಯಕ್ಷಿಕೆ ನಡೆಸಿದೆ. ಈಗ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಈ ಸಂಬಂಧ ಕಾರ್ಯಕ್ರಮವನ್ನು ಹಾಕಿಕೊಂಡಿದೆ.
ದಕ್ಷಿಣಕನ್ನಡ ಜಿಲ್ಲೆಯಲ್ಲಿ ನವೆಂಬರ್ 2011 ರ ಅಂತ್ಯದ ವರೆಗೆ ವಾಡಿಕೆ ಮಳೆಯಾಗಿ ಒಟ್ಟು 3892.60 ಮಿಲಿಮೀಟರ್ ಮಳೆಯಾಗಬೇಕಿದ್ದು ,4-11-11 ರ ವರೆಗೆ ಒಟ್ಟು 4103.56 ಮಿಲಿಮೀಟರ್ ಮಳೆಯಾಗಿದೆ.ಕಳೆದ ವರ್ಷ ಈ ಅವಧಿಯಲ್ಲಿ 3862.20 ಮಿಲಿಮೀಟರ್ ಮಳೆಯಾಗಿತ್ತು.
ಕೃಷಿ ಇಲಾಖೆ ಪ್ರಾಯೋಜಕತ್ವದಲ್ಲಿ ಮಂಗಳೂರು ಆಕಾಶವಾಣಿಯ ಕೃಷಿರಂಗ ವಿಭಾಗದ ಕಿಸಾನ್ ವಾಣಿಯಲ್ಲಿ `` ಸಾವಯವ ಕೃಷಿಯಲ್ಲಿ ಸಮಗ್ರ ಪೋಷಕಾಂಶಗಳ ನಿರ್ವಹಣೆ ''ಕುರಿತ 13 ಕಂತುಗಳ (ಪ್ರತೀ ಮಂಗಳವಾರ) ಸರಣಿ ಕಾರ್ಯಕ್ರಮವನ್ನು 2011, ನವೆಂಬರ್ 1,ರಿಂದ ಪ್ರಾರಂಭವಾಗಿ 24-1-12 ರ ವರೆಗೆ ಸಂಜೆ 7 ರಿಂದ 7.30 ರ ವರೆಗೆ ಪ್ರಸಾರಗೊಳ್ಳಲಿದೆ.ರೈತ ಬಾಂಧವರು ಈ ಕಾರ್ಯಕ್ರಮದ ಪ್ರಯೋಜನವನ್ನು ಪಡೆದುಕೊಳ್ಳಬಹುದು ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಪದ್ಮಯ್ಯ ನಾಯಕ್ ಅವರು ತಿಳಿಸಿದ್ದಾರೆ.