Saturday, November 5, 2011

'ತರಬೇತಿ ಉಚಿತ ಕೆಲಸ ಖಚಿತ'

ಮಂಗಳೂರು,ನವೆಂಬರ್.05 : ಸ್ವರ್ಣ ಜಯಂತಿ ಶಹರಿ ರೋಜ್ ಗಾರ್ ಯೋಜನೆಯಡಿ ನಗರದ ಬಡಜನರಿಗಾಗಿ ಕೌಶಲ್ಯಾಭಿವೃದ್ಧಿ ತರಬೇತಿ ಪಡೆದವರಿಗೆ ಕೆಲಸ ನೀಡುವ ಕುರಿತು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಯಿತು.ಪೌರಾಡಳಿತ ನಿರ್ದೇಶಾನಲಯದ ಮಾರ್ಗಸೂಚಿಯನ್ವಯ ಆಸಕ್ತ ಅರ್ಹ ಅಭ್ಯರ್ಥಿಗಳಿಗೆ ತರಬೇತಿ ನೀಡುವುದಲ್ಲದೆ, ತರಬೇತಿ ನೀಡಿದ ಸಂಸ್ಥೆಗಳು ಕೆಲಸದ ಖಾತರಿ ನೀಡಬೇಕಾಗುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಎನ್.ಎಸ್. ಚನ್ನಪ್ಪಗೌಡ ಹೇಳಿದರು.
ಯೋಜನಾ ನಿರ್ದೇಶಕರು ಜಿಲ್ಲಾ ನಗರಾಭಿವೃದ್ಧಿ ಕೋಶ, ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಸಮುದಾಯ ಅಭಿವೃದ್ಧಿ ಪರಿಣತರು, ಸಹಾಯಕ ನಿರ್ದೇಶಕರು ಉದ್ಯೋಗ ಮತ್ತು ತರಬೇತಿ ಇಲಾಖೆ, ಜಿಲ್ಲಾ ಲೀಡ್ ಬ್ಯಾಂಕ್ ಸೇರಿದಂತೆ ಪ್ರಮುಖ ಇಲಾಖೆಗಳು ಹಾಗೂ ಸರ್ಕಾರಿ ಸ್ವಾಮ್ಯದಡಿ ಬರುವ ಕಂಪೆನಿಗಳ ಪ್ರಮುಖರು ಸಭೆಯಲ್ಲಿ ಉಪಸ್ಥಿತರಿದ್ದರು. ಕೆಪಿಟಿ ಮಂಗಳೂರು ಇವರು ವಿವಿಧ ತಾಂತ್ರಿಕ ತರಬೇತಿ ನೀಡುವರು. ಮಾನವ ಸಂಪನ್ಮೂಲ ಇಲಾಖೆ ಮೊಬೈಲ್ ಟೆಕ್ನಿಷಿಯನ್ ಮತ್ತು ಸಾಫ್ಟ್ ಸ್ಕಿಲ್ಸ್ ಗಳ ತರಬೇತಿ, ಎಂ ಎಸ್ ಎಂ ಇ (ಮೈಕ್ರೋ ಸ್ಮಾಲ್ ಅನ್ ಮೀಡಿಯಂ ಎಂಟರ್ ಪ್ರೈಸಸ್) ರೆಡಿಮೇಡ್ ಗಾರ್ಮೆಂಟ್ಸ್, ಆಹಾರ ಸಂಸ್ಕರಣೆ, ಬೇಕರಿ ಉತ್ಪನ್ನ ತಯಾರಿಕೆ, ಕಸೂತಿ ಮತ್ತು ಆರ್ಟಿಫಿಷಿಯಲ್ ಆಭರಣ ತಯಾರಿಕೆ ಕುರಿತ ತರಬೇತಿ, ಜಿಐಟಿಸಿ (ಗವರ್ನ್ಮೆಂಟ್ ಟೂಲ್ ರೂಮ್ ಮತ್ತು ಟ್ರೈನಿಂಗ್ ಸೆಂಟರ್ ನವರು ಆಟೋ ಕ್ಯಾಡ್ ನಿಂದ ಆರಂಭಿಸಿ ಟರ್ನರ್, ಮಿಲ್ಲರ್, ಗ್ರೈಂಡರ್, ಸಿ ಎನ್ ಸಿ ಟರ್ನರ್, ಮಿಲ್ಲಿಂಗ, ಸಾಲಿಡ್ ವಕ್ರ್ಸ ಮುಂತಾದ ವಿಷಯಗಳಲ್ಲಿ ತರಬೇತಿಗಳನ್ನು ಎಸ್ ಎಸ್ ಎಲ್ ಸಿ/ ಪಿ ಯುಸಿ ಪಾಸಾದ ಅಥವಾ ಫೈಲ್ ಆದ ಮಕ್ಕಳಿಗೆ ನೀಡಿ ಉದ್ಯೋಗ ನೀಡುವ ಭರವಸೆಯನ್ನು ಸಭೆಯಲ್ಲಿ ನೀಡಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗೇರು ಉದ್ಯಮಕ್ಕೂ ಮಾನವ ಸಂಪನ್ಮೂಲದ ಅಗತ್ಯವಿದ್ದು ಈ ಉದ್ಯಮದವರು ತಾವೂ ತರಬೇತಿ ನೀಡಿ ಉದ್ಯೋಗ ನೀಡುವ ಭರವಸೆಯನ್ನು ಜಿಲ್ಲಾಧಿಕಾರಿಗಳಿಗೆ ನೀಡಿದರು. ಕಿಯೋನಿಕ್ಸ್ ಅವರು ಆಧಾರ್ ಯೋಜನೆಗೆ ಅಗತ್ಯವಿರುವವರಿಗೆ ತರಬೇತಿ ನೀಡುವುದಾಗಿ ಹೇಳಿದರು.
ತರಬೇತಿ ಪಡೆದ ಫಲಾನುಭವಿಗಳು ಖಚಿತವಾಗಿ ಉದ್ಯೋಗ ಪಡೆಯುವಲ್ಲಿ ಕ್ರಮ ವಹಿಸಲಾಗಿದ್ದು ನಗರಸಭೆ ಮತ್ತು ಪುರಸಭೆಯವರು ಉದ್ಯೋಗಾಕಾಂಕ್ಷಿಗಳ ಪಟ್ಟಿಯನ್ನು ನವೆಂಬರ್ 20 ರೊಳಗೆ ನೀಡಲು ಜಿಲ್ಲಾಧಿಕಾರಿಗಳು ಸೂಚಿಸಿದರು.