Friday, November 25, 2011

ಸಮುದ್ರಕೊರೆತಕ್ಕೆ ಕಲ್ಲುಹಾಕುವುದು ಅವೈಜ್ಞಾನಿಕ; ಡಾ.ವಿ ಎನ್ ನಾಯಕ್

ಮಂಗಳೂರು,ನವೆಂಬರ್.25: ಕರಾವಳಿ ತೀರ ಸಮುದ್ರದ ಆಟದ ಮೈದಾನ; ಮಾನವರು ಈ ಆಟದ ಮೈದಾನವನ್ನು ಅತಿಕ್ರಮಿಸಲು ಸಮುದ್ರ ಎಂದಿಗೂ ಅವಕಾಶ ನೀಡಲ್ಲ ಎಂದು ಕಾರವಾರದ ಕರ್ನಾಟಕ ವಿಶ್ವವಿದ್ಯಾನಿಲಯದ ಪಿ ಜಿ ಕೇಂದ್ರದ ಸಾಗರ ಭೂವಿಜ್ಞಾನ ವಿಭಾಗದ ಡಾ ವಿ ಎನ್ ನಾಯಕ್ ಹೇಳಿದರು.
ಅವರು ಗುರುವಾರ ನಗರದ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ಅಧಿಕಾರಿಗಳಿಗೆ ಹಮ್ಮಿಕೊಂಡಿದ್ದ ಮೂರು ದಿನಗಳ ಕಡಲಕೊರೆತ ನಿರ್ವಹಣೆಯ ಎರಡನೇ ದಿನದ ಅಧಿವೇಶನವನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. ಸಮುದ್ರ ಪ್ರದೇಶದಲ್ಲಿ ಮಾನವನ ಅತಿಕ್ರಮಣವೇ ಕಡಲ್ಕೊರೆತಕ್ಕೆ ಕಾರಣವಾಗಿದೆ. ಸಿ ಆರ್ ಝಡ್ ನಿಯಮ ಪಾಲಿಸಿದರೆ ಈ ಸಮಸ್ಯೆಯೇ ಉದ್ಭವಿಸುವುದಿಲ್ಲ. ಸಮುದ್ರಕ್ಕೆ ಅವೈಜ್ಞಾನಿಕವಾದ ಕಲ್ಲಿನ ತಡೆಗೋಡೆ ಕಟ್ಟುವ ಅವಶ್ಯಕತೆ ಇಲ್ಲ; ಸಮುದ್ರದಿಂದ ಉಸುಕನ್ನು ತೆಗೆಯುವುದು, ಪಶ್ಚಿಮ ಘಟ್ಟಗಳಂತೆಯೇ ಸೂಕ್ಷ್ಮ ಹಾಗೂ ಸುಂದರವಾಗಿರುವ ಸಮುದ್ರ ತೀರದ ಉಸುಕಿನ ದಿಬ್ಬಗಳನ್ನು ಸಮತಟ್ಟು ಮಾಡುವುದು ಹಾಗೂ ಕಾಂಡ್ಲಾ ವನ ನಾಶದಿಂದ ಸಮುದ್ರ ಕೊರೆತದಂತಹ ವಿಕೋಪಗಳು ಸಂಭವಿಸುತ್ತದೆ ಎಂದು ವಿವರಿಸಿದ ಅವರು, ಕಾರವಾರದ ಬಾವಿಕೇರಿ, ಹಣಕೋಣ, ದೇವಬಾಗ್ ನಲ್ಲಿ ಸಂಭವಿಸಿದ ಸಮುದ್ರ ಕೊರೆತದ ಘಟನೆಗಳನ್ನು ವಿಶ್ಲೇಷಿಸಿದರು. 2009ರಲ್ಲಿ ಸಂಭವಿಸಿದ ಮಹಾಮಳೆ ಮತ್ತು ಭೂಕುಸಿತಕ್ಕೆ ವೈಜ್ಞಾನಿಕವಾಗಿ ಕಾರಣಗಳನ್ನು ನೀಡಿದ ಅವರು, ಜೈವಿಕ ಬೇಲಿ ಮತ್ತು ಹಸಿರುಗೋಡೆಯಿಂದ ಸಮುದ್ರ ಕೊರೆತವನ್ನು ಪರಿಣಾಮಕಾರಿಯಾಗಿ ತಡೆಯಬಹುದು ಎಂದು ಪ್ರತಿಪಾದಿಸಿದರು.
ನಮ್ಮ ದೇಶ ಭೂಮಧ್ಯರೇಖೆಗೆ ಹತ್ತಿರವಾಗಿದ್ದು, ಸ್ಥಿರವಾದ ಹವಾಮಾನ ಹೊಂದಿರುವುದಿಲ್ಲ.ಅಸ್ಥಿರ ಹವಾಮಾನದಿಂದಾಗಿ ವಾತಾವರಣದ ಬದಲಾವಣೆಯನ್ನು ಕರಾರುವಕ್ಕಾಗಿ ಹೇಳಲು ಸಾಧ್ಯವಿಲ್ಲ. ಸ್ವೀಡನ್ ನಂತಹ ದೇಶಗಳಲ್ಲಿ 4ಗಂಟೆ 5 ನಿಮಿಷಕ್ಕೆ ಮಳೆ ಬರುತ್ತದೆ ಎಂಬುದನ್ನು ಕರಾರುವಕ್ಕಾಗಿ ಹೇಳಲು ಸಾಧ್ಯ ಎಂದರು.
ಸಮುದ್ರದ ತೀರಗಳನ್ನು ಅತಿಕ್ರಮಿಸುವುದರಿಂದ ಮತ್ತು ಕೇವಲ ಮಾನವ ಹಿತವನ್ನು ಮಾತ್ರ ದೃಷ್ಟಿಯಲ್ಲಿರಿಸಿದ ನಿರ್ಮಾಣಗಳಿಂದ ಅಮೂಲ್ಯವಾದ ಜಲಸಂಪತ್ತುಗಳಾದ ಮೀನುಗಳು, ಕಡಲಾಮೆಗಳು ಸೇರಿದಂತೆ ಅಸಂಖ್ಯ ವೈವಿಧ್ಯಮಯ ಜಲಚರಗಳು ಅಳಿವಿನಂಚಿಗೆ ಸರಿಯುತ್ತವೆ. ಮೀನುಗಾರರಿಗೆ ಮೀನುಗಾರಿಕೆಗೆ ತೊಂದರೆಯಾಗುತ್ತದೆ. ಬಿರುಗಾಳಿಯನ್ನು ತಡೆಯಲು ಸುರಹೊನ್ನೆಯಂತಹ ಮರಗಳಿಗಿರುವ ಸಾಮಥ್ರ್ಯ ತಡೆಗೋಡೆಗಳಿಗಿರುವುದಿಲ್ಲ ಎಂದ ಅವರು, ಕಳ್ಳಿ ಗಿಡಗಳು, ಸಮುದ್ರ ತೀರದಲ್ಲಿ ವಿಸ್ತಾರವಾಗಿ ಹಬ್ಬಿರುವ ಬಳ್ಳಿಗಳು, ಹಸಿರುಗೋಡೆಯ ಸಸಿಗಳು ಜೈವಿಕ ಗೋಡೆಗಳಾಗಿ ಸಮುದ್ರವನ್ನು, ಜಲಚರಗಳನ್ನು ಮಾನವನ ಸೊತ್ತುಗಳನ್ನು ಕಾಪಾಡುತ್ತವೆ. ಸಮುದ್ರ ತೀರಗಳನ್ನು ಅತಿಕ್ರಮಿಸುವುದರಿಂದ ಅದರ ಪರಿಣಾಮವನ್ನು ತೀರದಲ್ಲಿರುವ ಜೀವ ರಾಶಿ ಅನುಭವಿಸಬೇಕಾಗುತ್ತದೆ ಎಂದರು.
ಅಪರಾಹ್ನದ ಅಧಿವೇಶನದಲ್ಲಿ ಎನ್ ಐ ಟಿಕೆ ಯ ಡಾ ಕಿರಣ್ ಜಿ ಶಿರ್ಲಾಲ್ ಅವರು ಮಾತನಾಡಿ, ಸಮುದ್ರ ಕೊರೆತಕ್ಕೆ ಕಾರಣ, ಸಮಸ್ಯೆ ಮತ್ತು ಪರಿಹಾರದ ಬಗ್ಗೆ ವಿವರಿಸಿದರು. ನಮ್ಮ ಕರಾವಳಿ ತೀರದ ಕೊರೆತಕ್ಕೆ ಮನುಷ್ಯ ನೀಡಿದ ಕೊಡುಗೆ ಹಾಗೂ ಪ್ರಾಕೃತಿಕ ಕಾರಣಗಳನ್ನು ವಿವರಿಸಿದರು. ಹಸಿರುಗೋಡೆ ನಿರ್ಮಾಣ ಮತ್ತು ಇಂಜಿನಿಯರಿಂಗ್ ಪರಿಹಾರ, ಇದುವರೆಗೆ ಎನ್ ಐ ಟಿ ಕೆಯಿಂದ ನೀಡಿರುವ ಅತ್ಯುತ್ತಮ ಡಿಸೈನ್ ಮತ್ತು ಅದರ ಅಳವಡಿಕೆಯಲ್ಲಾದ ಸಮಸ್ಯೆಗಳ ಬಗ್ಗೆ ಪ್ರಶಿಕ್ಷಣಾರ್ಥಿಗಳಿಗೆ ಮಾಹಿತಿ ನೀಡಿದರು. ಸೀಬಡ್ರ್ ನ ಯಶೋಗಾಥೆ ಹಾಗೂ ಕೋವಳಂ ನಲ್ಲಿ, ಉಳ್ಳಾಲದಲ್ಲಿ ಯೋಜನೆ ವಿಫಲವಾಗಲು ಕಾರಣಗಳೇನು ಎಂಬುದನ್ನು ವಿವರಿಸಿದರು.