Tuesday, December 13, 2011

ಕರಾವಳಿ ಭಾಗದಲ್ಲಿ ಅಪರಾಧ ಪ್ರಮಾಣ ಇಳಿಕೆ ; ಅಲೋಕ್ ಮೋಹನ್

ಮಂಗಳೂರು,ಡಿಸೆಂಬರ್.13:ಕರಾವಳಿ ಭಾಗದ ಪ್ರದೇಶಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಅಪರಾಧ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ಪೋಲಿಸ್ ಅಧಿಕಾರಿ ಮತ್ತು ಸಿಬಂದಿ ವರ್ಗ ಹಾಗೂ ಸಾರ್ವಜನಿಕರ ಸಹಕಾರದಿಂದ ಇದು ಸಾಧ್ಯವಾಗಿದೆ ಎಂದು ಪಶ್ಚಿಮ ವಲಯದ ಪೊಲೀಸ್ ಮಹಾನಿರೀಕ್ಷಕರಾದ ಅಲೋಕ್ ಮೋಹನ್ ಹೇಳಿದರು. 2012ರ ಜನವರಿಯಿಂದ ಡಿಸೆಂಬರ್ ತನಕ ಸಿಂಗಾಪುರ ವಿಶ್ವ ವಿದ್ಯಾನಿಲಯದ ಎಲ್. ಕೆ. ಸ್ಕೂಲ್ ಆಫ್ ಪಾಲಿಸಿ ಮತ್ತು ಹಾರ್ವರ್ಡ್ ವಿಶ್ವ ವಿದ್ಯಾನಿಲಯದ ಸ್ಕೂಲ್ ಆಫ್ ಗವರ್ನೆನ್ಸ್ ನಲ್ಲಿ `ಮಾಸ್ಟರ್ ಇನ್ ಪಬ್ಲಿಕ್ ಮೆನೇಜ್ಮೆಂಟ್' ಕುರಿತ ಅಧ್ಯಯನಕ್ಕಾಗಿ ಸದ್ಯದಲ್ಲೇ ವಿದೇಶಕ್ಕೆ ತೆರಳಲಿರುವ ಅವರು ಸೋಮವಾರ ಮಂಗಳೂರಿನ ತಮ್ಮ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಜನಸ್ನೇಹಿ ಪೋಲಿಸಿಂಗ್ ಗೆ ತನ್ನ ಮೊದಲ ಆದ್ಯತೆ ಯಾಗಿದ್ದು, ಇಲಾಖೆಯ ಅಧಿಕಾರಿ ಮತ್ತು ಸಿಬಂದಿ ವರ್ಗ ಸಾರ್ವಜನಿಕರಿಗಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.ದೈನಂದಿನ ಕರ್ತವ್ಯದಿಂದ ಅನೇಕ ಒತ್ತಡಗಳಿಗೆ ಅವರು ಒಳಗಾಗುತ್ತಿರುನ ಹಿನ್ನೆಲೆಯಲ್ಲಿ ಪೋಲಿಸರ ಕಾರ್ಯ ದಕ್ಷತೆಯನ್ನು ಬಲಪಡಿಸಲು ಯೋಗ, ದೈಹಿಕ ಕಸರತ್ತುಗಳಲ್ಲಿ ತೊಡಗಿಸಲು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದರು. ವೀದೇಶಗಳಲ್ಲೂ ಪೋಲಿಸರು ಯಾವ ರೀತಿ ಕಾರ್ಯ ನಿರ್ವಹಿಸುತ್ತಾರೆ ಮತ್ತು ಅಲ್ಲಿ ಅಪರಾಧ ಪತ್ತೆ ಕಾರ್ಯದಲ್ಲಿ ಯಾವ ತಂತ್ರಗಳನ್ನು ಅನುಸರಿಸಲಾಗುತ್ತಿದೆ ಈ ಬಗ್ಗೆ ತಿಳಿದುಕೊಳ್ಳಲು ಈ ಉನ್ನತ ಅಧ್ಯಯನ ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟ ಅವರು; ಈ ಅಧ್ಯಯನ ಕರ್ತವ್ಯದ ಒಂದು ಭಾಗವಾಗಿದೆ ಎಂದರು.
ಅಲೋಕ್ ಮೋಹನ್ ಅವರು ಮಾಡಲಿರುವ ಒಂದು ವರ್ಷದ ಉನ್ನತ ಅಧ್ಯಯನ `ಮಾಸ್ಟರ್ ಇನ್ ಪಬ್ಲಿಕ್ ಮೆನೇಜ್ಮೆಂಟ್' ಎರಡು ಸೆಮಿಸ್ಟರ್ ಕೋರ್ಸ್. ಮೊದಲ ಆರು ತಿಂಗಳು ಸೆಮಿಸ್ಟರನ್ನು ಸಿಂಗಾಪುರದಲ್ಲಿ ಮತ್ತು ದ್ವಿತೀಯ ಆರು ತಿಂಗಳು ಸೆಮಿಸ್ಟರನ್ನು ಹಾರ್ವರ್ಡ್ ನಲ್ಲಿ ಮಾಡಲಿದ್ದಾರೆ.
2012ರ ಸಾಲಿನ ಈ ಉನ್ನತ ಅಧ್ಯಯನಕ್ಕಾಗಿ ಭಾರತದ ನಾಲ್ವರು ಹಿರಿಯ ಅಧಿಕಾರಿಗಳು ಆಯ್ಕೆಯಾಗಿದ್ದು, ಇವರಲ್ಲಿ ಮೂವರು ಐಎಎಸ್ ಅಧಿಕಾರಿಗಳಾದರೆ ಅಲೋಕ್ ಮೋಹನ್ ಮಾತ್ರ ಐಪಿಎಸ್ ಅಧಿಕಾರಿಯಾಗಿದ್ದಾರೆ. ಅಲೋಕ್ ಮೋಹನ್ ಕರ್ನಾಟಕದಿಂದ ಆಯ್ಕೆಯಾದ ಏಕೈಕ ಅಧಿಕಾರಿಯಾಗಿದ್ದಾರೆ.