Friday, December 9, 2011

ಜ.22-25: ರಾಷ್ಟ್ರ ಮಟ್ಟದ ಬಾಲ ಸೃಜನೋತ್ಸವ

ಮಂಗಳೂರು,ಡಿ.09: ರಾಷ್ಟ್ರಮಟ್ಟದ ಬಾಲ ಸೃಜನೋತ್ಸವ ಕಾರ್ಯಕ್ರಮವನ್ನು ಜನವರಿ 22ರಿಂದ 25ರವರೆಗೆ ಪಿಲಿಕುಳದ ನಿಸರ್ಗಧಾಮದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಬಾಲಭವನದ ಅಧ್ಯಕ್ಷೆ ಸುಲೋಚನಾ ಭಟ್ ತಿಳಿಸಿದರು.ಕದ್ರಿಯ ಬಾಲಭವನದಲ್ಲಿ ಇಂದು ಸೃಜನೋತ್ಸವದ ಕುರಿತಂತೆ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ದೇಶದ 25 ರಾಜ್ಯಗಳಿಂದ 10ರಿಂದ 16 ವರ್ಷದೊಳಗಿನ ಬಾಲಪ್ರತಿಭೆಗಳು ಈ ಉತ್ಸವದಲ್ಲಿ ಪಾಲ್ಗೊಳ್ಳಲಿವೆ. ವಿವಿಧ ರಾಜ್ಯಗಳ ಅರಳು ಬಾಲ ಪ್ರತಿಭೆಗಳನ್ನು ಒಂದು ಕಡೆ ಸೇರಿಸಿ ಮಕ್ಕಳಿಗೆ ವಿವಿಧ ಕಲಾ ಪ್ರಕಾರಗಳ ಪರಿಚಯ ಹಾಗೂ ಬೇರೆ ರಾಜ್ಯದ ಮಕ್ಕಳೊಂದಿಗೆ ಕಲಾ ಸಂಸ್ಕೃತಿಯ ವಿನಿಮಯ ಮಾಡಿಕೊಳ್ಳುವ ಉದ್ದೇಶದಿಂದ ಬಾಲಭವನದಿಂದ ಪ್ರಥಮ ಬಾರಿಗೆ ಈ ಉತ್ಸವವನ್ನು ಆಯೋಜಿಸಲಾಗಿದೆ ಎಂದರು.
ರಾಷ್ಟ್ರದ ನಾನಾ ಭಾಗಗಳ 73 ಬಾಲ ಭವನಗಳಿಂದ ಹಾಗೂ ದ.ಕ. ಜಿಲ್ಲೆಯ ಸ್ಥಳೀಯ ಶಾಲಾ ಮಕ್ಕಳು ಸೇರಿದಂತೆ ಸುಮಾರು 2500 ರಿಂದ 3000 ಮಕ್ಕಳು ಭಾಗವಹಿಸಲಿದ್ದು, ಹೊರ ರಾಜ್ಯದ, ದೂರದೂರಿನ ಮಕ್ಕಳಿಗೆ ವಾಮಂಜೂರು ಪರಿಸರದ 14 ಶಾಲೆಗಳಲ್ಲಿ ಉತ್ಸವದ ಸಮಯದಲ್ಲಿ ವಾಸ್ತವ್ಯದ ವ್ಯವಸ್ಥೆಯನ್ನು ಮಾಡಲಾಗುವುದು. ಮಕ್ಕಳ ಆರೋಗ್ಯದ ದೃಷ್ಟಿಯಿಂದ ಸುಸಜ್ಜಿತ ಆ್ಯಂಬುಲೆನ್ಸ್ನೊದಿಗೆ ವೈದ್ಯರ ತಂಡ ಸೇವೆ ನೀಡಲಿದೆ. ಜ.22ರಂದು ಸಂಜೆ 3-30ಕ್ಕೆ ವಾಮಂಜೂರಿನಿಂದ ಉತ್ಸವದ ನಡೆಯಲಿರುವ ಪಿಲಿಕುಲದ ಬಯಲು ರಂಗಮಂದಿರದವರೆಗೆ ಜಿಲ್ಲೆಯ ವಿವಿಧ ಕಲಾವಿದರ ತಂಡದ ಮೆರವಣಿಗೆ ನಡೆಯಲಿದೆ. ಅಂದು ಸಂಜೆ 5-30ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಈ ಸಂದರ್ಭ ಜಿಲ್ಲೆಯ ಸಂಸ್ಕೃತಿಯನ್ನು ಬಿಂಬಿಸುವ ಬೊಂಬೆಯಾಟ, ಕಿರು ಯಕ್ಷಗಾನ, ನಾಟ್ಯ ಪ್ರದರ್ಶನದೊಂದಿಗೆ ದಿನದ ಕಾರ್ಯಕ್ರಮ ಕೊನೆಗೊಳ್ಳಲಿದೆ.
ಜ.23ರಂದು ಯೋಗ ಶಿಕ್ಷಣದೊಂದಿಗೆ ಉತ್ಸವ ಆರಂಭಗೊಂಡು ಚಿತ್ರಕಲೆ ಪ್ರದರ್ಶನ, ಚಿತ್ರ ಬಿಡಿಸುವ ತರಬೇತಿ ನಡೆಯಲಿದೆ. ಕರಕುಶಲ ಪ್ರದರ್ಶನದಲ್ಲಿ ಮಕ್ಕಳಿಂದ ಮಣ್ಣಿನಲ್ಲನ ನಿಗದಿತವಾದ ಆಕೃತಿ ಬಿಡಿಸಲು ತರಬೇತಿ ಮತ್ತು ಸ್ಪರ್ಧೆ ಏರ್ಪಡಿಸಲಾಗುವುದು. ಕತೆ ಬರೆಯುವುದು, ಕತೆ ಹೇಳುವುದು ಕತೆ ಬರೆಯಲು ತರಬೇತಿ ಮತ್ತು ಸ್ಪರ್ಧೆ ನಡೆಯಲಿದೆ. ಪೈಂಟಿಂಗ್ ತರಬೇತಿ ಮತ್ತು ಪೈಂಟಿಂಗ್ ಸ್ಪರ್ಧೆ ಮೊದಲಾದ ವಿಷಯಗಳಲ್ಲಿ ಸ್ಪರ್ಧೆ ನಡೆಸಿ ಪಕ್ಷಿ ಪ್ರದರ್ಶನ ಹಾಗೂ ಪ್ರಾಣಿ ಸಂಗ್ರಹಾಲಯ ವೀಕ್ಷಣೆ, ಖಗೋಳ ವೀಕ್ಷಣೆ ಬಳಿಕ ಜಾದೂ ಪ್ರದರ್ಶನ ನಡೆಯಲಿದೆ.
ಡಿ. 24ರಂದು ಯೋಗ ದೊಂದಿಗೆ ಉತ್ಸವ ಆರಂಭ ಗೊಂಡು ಕ್ರಿಯೇ ಟಿವ್ ಆರ್ಟ್ ಮತ್ತು ವಿವಿಧ ಸ್ಪರ್ಧೆ ಗಳು ನಡೆ ಯಲಿವೆ. ಸಂಜೆ 3 ಗಂಟೆ ಯಿಂದ ರಾತ್ರಿ 8 ಗಂಟೆ ಯವರೆಗೆ ಪಣಂಬೂರು ಬೀಚ್ನಲ್ಲಿ ಗಾಳಿಪಟ ತಯಾರಿ ಹಾರಾಟ ಮತ್ತು ಪ್ರದರ್ಶನ, ಮರಳು ಚಿತ್ರ ತಯಾರಿ ತರಬೇತಿ ಮತ್ತು ಸಾಹಿತ್ಯ ಪರಿಚಯದ ಕಿರು ನಾಟಕ ಹಾಗೂ ಜಿಲ್ಲೆಯ ಪ್ರತಿಭೆಗಳಿಂದ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಡಿ. 25ರಂದು ಬೆಳಗ್ಗೆ 11-30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಸುಲೋಚನಾ ಭಟ್ ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ಧೇಶಕಿ ಶಕುಂತಳಾ, ಮೇಯರ್ ಪ್ರವೀಣ್, ಸ್ಥಳೀಯ ಕಾರ್ಪೋರೇಟರ್ ರೂಪಾ ಡಿ. ಬಂಗೇರ ಉಪಸ್ಥಿತರಿದ್ದರು.