Thursday, September 6, 2012

'ಪಶು ಸಂಪತ್ತು ಅಭಿವೃದ್ಧಿಗೆ ಮಾಹಿತಿ ಅಗತ್ಯ'

ಮಂಗಳೂರು, ಸೆಪ್ಟೆಂಬರ್.06 : ಪಶು ಸಂಗೋಪನಾ ಇಲಾಖೆಗೆ ಅಭಿವೃದ್ಧಿ ಕಾರ್ಯ ಅನುಷ್ಠಾನಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹೆಚ್ಚಿನ ಅನುದಾನವನ್ನು ನೀಡುತ್ತಿವೆ. ಯಾವುದೇ ಅಭಿವೃದ್ಧಿ ಯೋಜನೆಗಳನ್ನು ರೂಪಿಸಲು ಅಂಕಿ ಅಂಶಗಳು ಮುಖ್ಯ. ಈ ನಿಟ್ಟಿನಲ್ಲಿ ಇಲಾಖೆ ಕಾರ್ಯೋನ್ಮುಖವಾಗಿದೆ ಎಂದು ಪಶುವೈದ್ಯಕೀಯ ಇಲಾಖೆಯ ಆಯುಕ್ತ ಆದೋನಿ ಸೈಯದ್ ಸಲೀಂ ಹೇಳಿದರು.
ಅವರಿಂದು ಮೂಡುಬಿದರೆಯ ಸಮಾಜಮಂದಿರದಲ್ಲಿ ದ.ಕ ಜಿಲ್ಲಾಡಳಿತ, ದ.ಕ ಜಿಲ್ಲಾ ಪಂಚಾಯತ್ ಮತ್ತು ದ.ಕ ಜಿಲ್ಲಾ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಆಶ್ರಯದಲ್ಲಿ 19 ನೇ ಅಖಿಲ ಭಾರತ ಜಾನುವಾರು,ಕುಕ್ಕಟ ಹಾಗೂ ಪಶು ಸಂಗೋಪನಾ ವಲಯದಲ್ಲಿ ಉಪಯೋಗಿಸಲ್ಪಡುವ ಉಪಕರಣಗಳ ಗಣತಿ-2012 ಅಂಗವಾಗಿ ರಾಜ್ಯದಲ್ಲೇ ಮೊದಲ `ಎಣಿಕೆದಾರರಿಗೆ ಮತ್ತು ಮೇಲ್ವಿಚಾರಕರಿಗೆ ತರಬೇತಿ' ಕಾರ್ಯಕ್ರಮ
ಉದ್ಘಾಟಿಸಿ ಮಾತನಾಡುತ್ತಿದ್ದರು. ಗೋಮಾಳ ಜಾಗವನ್ನು ಇತರ ಯಾವುದೇ ಅಭಿವೃದ್ಧಿ ಕೆಲಸಗಳಿಗೆ ಉಪಯೋಗಿಸದೆ ಅದನ್ನು ಕಾಯ್ದಿರಿಸುವಂತೆ ರಾಜ್ಯ ಉಚ್ಛ ನ್ಯಾಯಾಲಯ ಮತ್ತು ಸುಪ್ರಿಂ ಕೋರ್ಟ್ ಅದೇಶವನ್ನು ಹೊರಡಿಸಿದೆ. ಒತ್ತುವರಿ ಪ್ರಕರಣಗಳಿದ್ದರೆ ಇದನ್ನು ತೆರವುಗೊಳಿಸುವಂತೆ ಜಿಲ್ಲಾಧಿಕಾರಿಯವರು ಈಗಾಗಲೇ ಸೂಚಿಸಿದ್ದಾರೆ ಎಂದು ಹೇಳಿದರು.
ಮೂಡುಬಿದರೆಯ ತಹಶೀಲ್ದಾರ್ ಬಸವರಾಜ್.ಸಿ. ಪಳೋಟೆ ಮಾತನಾಡಿ, ಆಧುನಿಕತೆಯ ಭರಾಟೆಯಲ್ಲಿ ಪಶುಸಂಗೋಪನೆ ಕ್ಷೀಣಿಸುತ್ತಿದೆ. ಪಶುಸಂಪತ್ತು ಹೆಚ್ಚಿಸುವರಲ್ಲಿ ಇಲಾಖೆ ಅಧ್ಯಯನ ನಡೆಸಿದಲ್ಲಿ ಪಶುಸಂಗೋಪನೆಯನ್ನು ವೃದ್ಧಿಸಬಹುದು. ಗೋಮಾಳಕ್ಕೆ ಕಾದಿರಿಸಿದ ಜಾಗವನ್ನು ಬೇರೆ ಉದ್ದೇಶಕ್ಕೆ ಬಳಸಬಾರದು ಎಂದು ಹೇಳಿದರು.
ಪುರಸಭಾಧ್ಯಕ್ಷ ರತ್ನಾಕರ ದೇವಾಡಿಗ, ಮುಖ್ಯಾಧಿಕಾರಿ ರಾಯಪ್ಪ ಉಪಸ್ಥಿತರಿದ್ದರು. ಡಾ.ಚೆನ್ನೇಗೌಡ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾಹಿತಿ ನೀಡಿದರು.
ಮೂಡುಬಿದಿರೆ ವಲಯದ ಪಶುಪಾಲನ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಜಗನಾಥ ರೈ ಸ್ವಾಗತಿಸಿದರು. ಉಪ ನಿರ್ದೇಶಕ ಡಾ ಕೆ ವಿ ಹಲಗಪ್ಪ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಹಾಯಕ ನಿರ್ದೇಶಕ ತಾಲೂಕು ಗಣತಿ ಅಧಿಕಾರಿ ಮತ್ತು ಸಹಾಯಕ ನಿರ್ದೇಶಕ ಡಾ.ಕೆ.ಅಶೋಕ್ ಕುಮಾರ್ ಕಾರ್ಯಕ್ರಮವನ್ನು ನಿರೂಪಿಸಿದರು. ಜಾನುವಾರು ಗಣತಿಯ ದ.ಕ ಜಿಲ್ಲಾ ನೋಡೆಲ್ ಅಧಿಕಾರಿ ಡಾ.ಎಂ. ಈಶ್ವರ ವಂದಿಸಿದರು.