Monday, September 10, 2012

'ಬೆಳ್ತಂಗಡಿಗೆ ಮೊಬೈಲ್ ಹೆಲ್ತ್ ಯುನಿಟ್ ನೀಡಿ'

ಮಂಗಳೂರು, ಸೆ.10: ಬೆಳ್ತಂಗಡಿಯ 9 ಗ್ರಾಮಗಳ 11 ಹಳ್ಳಿಗಳು ಬಹುದೂರ ಮತ್ತು ಒಳನಾಡು ಪ್ರದೇಶ ಅದರಲ್ಲೂ ಮುಖ್ಯವಾಗಿ ಎಳನೀರಿನಂತಹ ಪ್ರದೇಶಗಳ ಜನರ ಆರೋಗ್ಯವನ್ನು ಗಮನದಲ್ಲಿರಿಸಿ ಮೊಬೈಲ್ ಹೆಲ್ತ್ ಯುನಿಟ್ ಒಂದನ್ನು ಒದಗಿಸಬೇಕೆಂದು ಜಿಲ್ಲಾಧಿಕಾರಿಗಳು ಸಚಿವರನ್ನು ಕೋರಿದರು. ಈಗಾಗಲೇ ಈ ಸಂಬಂಧ ಸಂವಹನ ನಡೆಸಿದ್ದು, ಸಚಿವರು ಸ್ಪಂದಿಸಬೇಕೆಂದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಎನ್.ಎಸ್. ಚನ್ನಪ್ಪ ಗೌಡ ಅವರು ಮಾತನಾಡಿ, ಬೆಳ್ತಂಗಡಿಯ ಎಳನೀರು ಪ್ರದೇಶದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ತೆರೆಯಲು ಅವಕಾಶ ಮಾಡಿಕೊಡಬೇಕೆಂದರು.
ಮಂಗಳೂರು ಮಹಾನಗರ ಪಾಲಿಕೆ ಸೇರಿದಂತೆ ಜಿಲ್ಲೆಯಲ್ಲಿ ಮಲೇರಿಯಾ, ಡೆಂಗ್ಯು, ಇಲಿಜ್ವರ ಹಾಗೂ ಎಚ್1ಎನ್1 ನಿಯಂತ್ರಣದ ಬಗ್ಗೆ ಕೈಗೊಂಡ ಕ್ರಮಗಳನ್ನು ಅಧಿಕಾರಿಗಳಿಂದ ಸಚಿವರು ಪಡೆದರು.
ಖಾಸಗಿ ಆಸ್ಪತ್ರೆಗಳು ಆರೋಗ್ಯ ರಕ್ಷಣೆಯಲ್ಲಿ ಮಹತ್ವದ ಕೊಡುಗೆ ನೀಡುತ್ತಿವೆ. ಆದರೆ ವಿವಿಧ ಯಾವುದೇ ರೀತಿಯಲ್ಲಿ ರೋಗಿಗಳಿಗೆ ಹಿಂಸೆಯಾಗದ ರೀತಿಯಲ್ಲಿ ಸರಕಾರಿ ಆಸ್ಪತ್ರೆಗಳ ಸೌಲಭ್ಯ, ಸೇವೆಯನ್ನು ಉನ್ನತೀಕರಣಗೊಳಿಸಲು ಅಧಿಕಾರಿಗಳು ಮುಂದಾಗಬೇಕು ಎಂದರು. ಸರ್ಕಾರಿ ಆಸ್ಪತ್ರೆಗಳ ಮೇಲ್ದಜರ್ೆಗೇರಿಸುವುದೊಂದೇ ತನ್ನ ಪ್ರಥಮ ಆದ್ಯತೆ ಎಂದರು.
ಸಾಂಕ್ರಾಮಿಕ ರೋಗಗಳು ಹರಡುವ ಮೊದಲೇ ಸೂಕ್ತ ಮುಂಜಾಗೃತಾ ಕ್ರಮಗಳನ್ನು ನಿರ್ದಿಷ್ಟ ಕಾಲಾವಧಿಯಲ್ಲಿ ಅಧಿಕಾರಿಗಳು ಕೈಗೊಳ್ಳಬೇಕೆಂದು ಸೂಚನೆ ನೀಡಿದ ಸಚಿವರು, ಮಾಹಿತಿ ಕೊರತೆಯಿಂದ ಜನಸಮುದಾಯದಲ್ಲಿ ಗಾಬರಿ ಸೃಷ್ಟಿಸುವ ಸನ್ನಿವೇಶಕ್ಕೆ ಆಸ್ಪದ ನೀಡಬಾರದು ಎಂದರು.
ಮಲೇರಿಯಾ ಪ್ರಕರಣ ಈ ವರ್ಷದ ಆರಂಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದು, ಮಂಗಳೂರು ನಗರದಲ್ಲಿ ಹೆಚ್ಚಿನ ಸಂಖ್ಯೆಯ ಪ್ರಕರಣಗಳು ದಾಖಲಾಗಿವೆ. ಈ ಬಗ್ಗೆ ಕ್ರಮ ಕೈಗೊಳ್ಳಲಾಗಿದ್ದು, ಪ್ರಸ್ತುತ ಕಳೆದ ಎರಡು ತಿಂಗಳಿನಿಂದ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದೆ ಎಂದರು.
ಸಭೆಯಲ್ಲಿ ವಿಧಾನಸಭೆ ಉಪಾಧ್ಯಕ್ಷರಾದ ಎನ್ ಯೋಗೀಶ್ ಭಟ್, ಶಾಸಕ ಮೋನಪ್ಪ ಭಂಡಾರಿ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಎನ್. ವಿಜಯಪ್ರಕಾಶ್, ಮನಪಾ ಆಯುಕ್ತ ಡಾ. ಹರೀಶ್ ಕುಮಾರ್ ಉಪಸ್ಥಿತರಿದ್ದರು.