Monday, September 10, 2012

ರಾಜ್ಯದಲ್ಲಿ ಆರೋಗ್ಯ ಹಕ್ಕಿನ ಅನುಷ್ಠಾನಕ್ಕೆ ಚಿಂತನೆ: ಅರವಿಂದ ಲಿಂಬಾವಳಿ

ಮಂಗಳೂರು, ಸೆ.10: ಶಿಕ್ಷಣ ಹಕ್ಕಿನ ರೀತಿಯಲ್ಲೇ ಕರ್ನಾಟಕ ರಾಜ್ಯದಲ್ಲಿ ಪ್ರಥಮವೆನ್ನುವಂತೆ ಆರೋಗ್ಯದ ಹಕ್ಕನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಅರವಿಂದ ಲಿಂಬಾವಳಿ ತಿಳಿಸಿದ್ದಾರೆ.
ಇಂದು ಮಂಗಳೂರಿನಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಸಚಿವರು, ಬಳಿಕ ವೆನ್ಲಾಕ್ ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆ ವೀಕ್ಷಣೆ ನಡೆಸಿದ ಬಳಿಕ ಸುದ್ದಿಗಾರರನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಎಲ್ಲರಿಗೂ ಆರೋಗ್ಯ ಸೇವೆ ಲಭ್ಯವಾಗುವ ನಿಟ್ಟಿನಲ್ಲಿ ಕಾಯಿದೆ ರೂಪದಲ್ಲಿ ಆರೋಗ್ಯ ಹಕ್ಕನ್ನು ದೇಶದಲ್ಲೇ ಪ್ರಥಮವಾಗಿ ರಾಜ್ಯದಲ್ಲಿ ಅನುಷ್ಠಾನಗೊಳಿಸಲು ಚಿಂತನೆ ನಡೆಯುತ್ತಿದೆ. ತಜ್ಞರ ಸಲಹೆ ಪಡೆದು, ಅಗತ್ಯ ಸೌಕರ್ಯಗಳನ್ನು ಒದಗಿಸಿದ ಬಳಿಕ ಕಾಯಿದೆ ರೂಪದಲ್ಲಿ ಈ ಹಕ್ಕನ್ನು ಸರಕಾರ ಜಾರಿಗೆ ತರಲು ಚಿಂತಿಸುತ್ತಿದೆ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.
ವೆನ್ಲಾಕ್ ಆಸ್ಪತ್ರೆ ಅಭಿವೃದ್ಧಿಗೆ 9 ಕೋಟಿ ರೂ.ಗಳನ್ನು ಆಸ್ಪತ್ರೆಯ ಮೂಲಭೂತ ಸೌಕರ್ಯಗಳಿಗೆ ಬಳಸಿಕೊಳ್ಳಲು ಸೂಚನೆ ನೀಡಿರುವುದಾಗಿ ಸಚಿವ ಅರವಿಂದ ಲಿಂಬಾವಳಿ ಈ ಸಂದರ್ಭ ತಿಳಿಸಿದರು.
ಆಸ್ಪತ್ರೆಗೆ ಹೆಚ್ಚುವರಿ ಡಯಾಲಿಸ್ ಉಪಕರಣದ ಅಗತ್ಯವಿದ್ದು, ಅದರ ಖರೀದಿ ಹಾಗೂ ವೆನ್ಲಾಕ್ ಆಸ್ಪತ್ರೆಯ ಈಗಿನ ಕಟ್ಟಡವನ್ನು ಉಳಿಸಿಕೊಂಡು ಮೂಲಭೂತ ಸೌಕರ್ಯಗಳೊಂದಿಗೆ ಕಟ್ಟಡದ ವಿಸ್ತರಣೆ ಈ ಹಣವನ್ನು ಬಳಸಿಕೊಳ್ಳಲಾಗುವುದು. ಖಾಸಗಿ ಆಸ್ಪತ್ರೆಗಳ ಸಹಕಾರದೊಂದಿಗೆ ಸರಕಾರಿ ಆಸ್ಪತ್ರೆಗಳನ್ನು ಉನ್ನತ ದರ್ಜೆಗೇರಿಸುವ ಕೆಲಸ ಆಗಬೇಕಿದೆ ಎಂದವರು ಹೇಳಿದರು.
ರಾಜ್ಯದ ಸರಕಾರಿ ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 899 ತಜ್ಞ ವೈದ್ಯರು ಹಾಗೂ 171 ಎಂಬಿಬಿಎಸ್ ವೈದ್ಯರ ಕೊರತೆ ಇದೆ. ಡಿ ದರ್ಜೆಯ ನೌಕರರು ಸೇರಿದಂತೆ ಇತರ ಸಿಬ್ಬಂದಿಗಳ ಕೊರತೆ ಇದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಅಗತ್ಯ ಸೇವೆಗಳಿಗೆ ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡುವಂತೆ ಜಿಲ್ಲಾಧಿಕಾರಿಗೆ ಅಧಿಕಾರ ನೀಡಲಾಗಿದೆ ಎಂದವರು ಹೇಳಿದರು. ಶುಷ್ರೂಷಕಿಯರು ಹಾಗೂ ಡಿ ಗ್ರೂಪ್ ನೇಮಕಕ್ಕೆ ಪ್ರಕ್ರಿಯೆ ಆರಂಭವಾಗಿದೆ. ರಾಜ್ಯದಲ್ಲಿನ 5000 ಪುರುಷ ಮತ್ತು ಮಹಿಳಾ ಶುಷ್ರೂಷಕರನ್ನು ಖಾಯಂ ಗೊಳಿಸುವ ಪ್ರಕ್ರಿಯೆಗೆ ಇತ್ತೀಚೆಗೆ ಮುಖ್ಯಮಂತ್ರಿ ನೇತೃತ್ವದಲ್ಲಿ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆದಿದೆ. ಅವರ ಸೇವೆ ಅಗತ್ಯವಿರುವುದರಿಂದ ಶೀಘ್ರದಲ್ಲೇ ಖಾಯಂಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದರು.
ರಾಜ್ಯದಲ್ಲಿ ತಜ್ಞ ವೈದ್ಯರ ಕೊರತೆಯ ಹಿನ್ನೆಲೆಯಲ್ಲಿ ಈಗಾಗಲೇ ಎಂಬಿಬಿಎಸ್ ಮತ್ತು ಪಿಜಿ ಮಾಡಿರುವ ವೈದ್ಯರ ಗ್ರಾಮೀಣ ಸೇವೆ ಒಂದು ವರ್ಷ ಕಡ್ಡಾಯ ಎಂದು ಕಾನೂನು ಮಾಡಲಾಗಿದೆ. ಆದರೆ ತಕ್ಷಣಕ್ಕೆ ಅದು ಸಾಧ್ಯವಿಲ್ಲ. ಹಾಗಾಗಿ ಖಾಸಗಿಯಲ್ಲಿರುವಂತೆ ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಸೇವೆಯನ್ನು ಗಂಟೆಗೆ ಹಾಗೂ ರೋಗಿಗಳ ಆಧಾರದಲ್ಲಿ ಒಪ್ಪಂದದ ಮೇರೆಗೆ ನಡೆಸುವಂತೆ ಇಂದು ನಡೆದ ಆರೋಗ್ಯ ಇಲಾಖಾ ಅಧಿಕಾರಿಗಳ ಪರಿಶೀಲನಾ ಸಭೆಯಲ್ಲಿ ಸೂಚನೆ ನೀಡಲಾಗಿದೆ. ವೈದ್ಯಕೀಯ ತಜ್ಞರು ಕೂಡಾ ಈ ಬಗ್ಗೆ ಗಮನ ಹರಿಸಿ ಸರಕಾರಿ ಆಸ್ಪತ್ರೆಗಳಲ್ಲಿ ಸೇವೆ ನೀಡಲು ಮುಂದಾಗಬೇಕು ಎಂದು ಸಚಿವ ಲಿಂಬಾವಳಿ ಮನವಿ ಮಾಡಿದರು.
ಬೆಂಗಳೂರು ಮತ್ತು ಮೈಸೂರು ವಿಭಾಗಗಳಲ್ಲಿ ಈಗಾಗಲೇ ಜಾರಿಯಲ್ಲಿರುವ ವಾಜಪೇಯಿ ಆರೋಗ್ಯ ಶ್ರೀ ಯೋಜನೆಯನ್ನು ಬಿಪಿಎಲ್ ವ್ಯಾಪ್ತಿಯ ಜನರಿಗಾಗಿ ಅಕ್ಟೋಬರ್ ತಿಂಗಳಿನಿಂದ ಜಾರಿಗೊಳಿಸಲಾಗುತ್ತಿದೆ. ಈ ಯೋಜನೆಯಡಿ ಸರಕಾರ ಗುರುತಿಸಿರುವ 135 ಆಸ್ಪತ್ರೆಗಳಲ್ಲಿ ಬಿಪಿಎಲ್ ಚೀಟಿದಾರರು ಒಂದೂವರೆ ಲಕ್ಷ ರೂ.ಗಳ ವಿವಿಧ ರೀತಿಯ ಆಯ್ದ ಚಿಕಿತ್ಸೆಗಳನ್ನು ಪಡೆಯಬಹುದಾಗಿದೆ ಎಂದು ಸಚಿವ ಅರವಿಂದ ಲಿಂಬಾವಳಿ ತಿಳಿಸಿದರು.
ಮಂಗಳೂರು ಮಹಾನಗರ ಪಾಲಿಕೆ ಸೇರಿದಂತೆ ಜಿಲ್ಲೆಯಲ್ಲಿ ಆರೋಗ್ಯದ ಪರಿಸ್ಥಿತಿ ಸಮಾಧಾನಕರವಾಗಿದೆ. ಇಲಿ ಜ್ವರ ಸೇರಿದಂತೆ ಸಾಂಕ್ರಾಮಿಕ ರೋಗ ನಿಯಂತ್ರಣದಲ್ಲಿದೆ. ಡೆಂಗ್, ಇಲಿಜ್ವರದದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಲಾರ್ವಾ ಸರ್ವೇ ಮಾಡಲು ಸೂಚನೆ ನೀಡಲಾಗಿತ್ತು. ದ.ಕ. ಜಿಲ್ಲೆಯಲ್ಲೂ ಸರ್ವೇ ನಡೆದಿದ್ದು, ಎರಡು ತಾಲೂಕುಗಳಲ್ಲಿ ಕುಂಠಿತವಾಗಿದೆ. ಈ ಬಗ್ಗೆ ಶೀಘ್ರ ಸರ್ವೇ ನಡೆಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದವರು ಹೇಳಿದರು.
ಕ್ಯಾನ್ಸರ್ ಚಿಕಿತ್ಸೆ, ಹೃದಯ ಶಸ್ತ್ರ ಚಿಕಿತ್ಸೆಗೆ ಸಂಬಂಧಿಸಿ ಸೂಪರ್ ಸ್ಪೆಷಾಲಿಟಿ ಘಟಕವನ್ನು ಒದಗಿಸುವಂತೆ ಹಾಗೂ ಲೇಡಿಗೋಶನ್ನ 250 ಹಾಸಿಗೆಗಳಿಂದ 500 ಹಾಸಿಗೆಗಳಿಗೆ ಮೇಲ್ದರ್ಜೆಗೇರಿಸಲು ಸಚಿವರು ಮುಂದಾಗಬೇಕು ಎಂದು ವಿಧಾನ ಸಭೆಯ ಉಪಾಧ್ಯಕ್ಷರಾದ ಎನ್. ಯೋಗೀಶ್ ಭಟ್ ಬೇಡಿಕೆ ಇರಿಸಿದರು.
ಇದರೊಂದಿಗೆ ಶಿಥಿಲಾವಸ್ಥೆಯಲ್ಲಿರುವ ಜೈಲ್ ವಾರ್ಡ್ ನ ದುರಸ್ತಿ, ಹೆಚ್ಚುವರಿ ಎಕ್ಸ್ರೇ ಯಂತ್ರಗಳು, ಸಿಬ್ಬಂದಿಗಳಿಗೆ ವಸತಿಗೃತಹ, ಹೆಚ್ಚುವರಿ ಡಯಾಲಿಸ್ ಯಂತ್ರ ಸೇರಿದಂತೆ ಐದಾರು ತಿಂಗಳಲ್ಲಿ ಮೂಲಭೂತ ಸೌಕರ್ಯಕ್ಕೆ 9 ಕೋಟಿ ರೂ.ಗಳನ್ನು ಬಳಸಿಕೊಳ್ಳುವಂತೆ ಸಚಿವರನ್ನು ವಿನಂತಿಸಲಾಗಿದೆ. ಅದಲ್ಲದೆ ಆಸ್ಪತ್ರೆಗೆ ಎಂಆರ್ಐ ಯಂತ್ರದ ಅಗತ್ಯವಿದ್ದು, ಅದರ ವೆಚ್ಚ ಸುಮಾರು 4ರಿಂದ 5 ಕೋಟಿ ರೂ. ಆಗಿದ್ದು, ಅದಕ್ಕೆ ಸರಕಾರದ ಕಡೆಯಿಂದ ಹಣ ಒದಗಿಸಬೇಕೆಂದು ಯೋಗೀಶ್ ಭಟ್ ಅವರು ಸಚಿವರ ಗಮನ ಸೆಳೆದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಪದ್ಮನಾಭ ಕೊಟ್ಟಾರಿ, ವಿಧಾನ ಪರಿಷತ್ ಸದಸ್ಯ ಮೋನಪ್ಪ ಭಂಡಾರಿ, ವೆನ್ಲಾಕ್ ಆಸ್ಪತ್ರೆಯ ಸರ್ಜನ್ ಡಾ ಸರೋಜ ಮೊದಲಾದವರು ಉಪಸ್ಥಿತರಿದ್ದರು.