Sunday, September 2, 2012

ಸೆಪ್ಟೆಂಬರ್ 15ರಿಂದ ಜಾನುವಾರು ಗಣತಿ

ಮಂಗಳೂರು,ಸೆಪ್ಟೆಂಬರ್.02 ಸಮಗ್ರ ಜಾನುವಾರು ಗಣತಿಗೆ ಸಮನ್ವಯದಿಂದ ಸಂಬಂಧಪಟ್ಟ ಇಲಾಖೆಗಳು ಕರ್ತವ್ಯ ನಿರ್ವಹಿಸಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ ಕೆ ಎನ್ ವಿಜಯಪ್ರಕಾಶ್ ಸೂಚಿಸಿದರು.
ಸೆಪ್ಟೆಂಬರ್ 1ರಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಿದ್ದ 19ನೇ ಜಾನುವಾರು ಗಣತಿ ಕಾರ್ಯಕ್ರಮದಡಿ ದೇಶಾದ್ಯಂತ ಸೆಪ್ಟೆಂಬರ್ 15ರಿಂದ ಅಕ್ಟೋಬರ್ 15ರವರೆಗೆ ನಡೆಯಲಿರುವ ಜಾನುವಾರು ಗಣತಿ ಜಿಲ್ಲಾ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಗಣತಿ ಕಾರ್ಯದಲ್ಲಿ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ, ಕೃಷಿ, ತೋಟಗಾರಿಕೆ,ಮೀನುಗಾರಿಕೆ, ನಗರಾಭಿವೃದ್ದಿ, ಕಂದಾಯ ಮತ್ತು ಶಿಕ್ಷಣ ಇಲಾಖೆಗಳು, ಪಂಚಾಯಿತಿಗಳು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ಅರ್ಧದಿನ ಗಣತಿ ನಡೆಸುತ್ತಾರೆ.ಇವರೊಂದಿಗೆ ನಿವೃತ್ತ ಸರ್ಕಾರಿ ನೌಕರರು, ತರಬೇತಿ ಹೊಂದಿದ ಪಶುವೈದ್ಯ ಸಹಾಯಕರು/ಪಶುವೈದ್ಯ ನಿರೀಕ್ಷಕರನ್ನು ಒಳಪಡಿಸಬಹುದು.
ಈ ಸಂಬಂಧ ಈಗಾಗಲೇ ಜಿಲ್ಲಾ ಮತ್ತು ತಾಲೂಕು ಮಟ್ಟದ ಸಮಿತಿಗಳನ್ನು ರಚಿಸಲಾಗಿದೆ. ಜಿಲ್ಲಾ ಮಟ್ಟದ ಸಮಿತಿಗೆ ಜಿಲ್ಲಾಧಿಕಾರಿಗಳು ಅಧ್ಯಕ್ಷರಾಗಿರುತ್ತಾರೆ. ಕೃಷಿ ಇಲಾಖೆ ಜಂಟಿ ನಿರ್ದೇಶಕರು, ಪಾಲಿಕೆ ಆಯುಕ್ತರು, ತೋಟಗಾರಿಕಾ ಇಲಾಖಾ ಉಪನಿರ್ದೇಶಕರು, ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರು, ಜಿಲ್ಲಾ ಅಂಕಿ ಅಂಶ ಅಧಿಕಾರಿ ಸದಸ್ಯರಾಗಿರುತ್ತಾರೆ. ಪಶುಪಾಲನಾ ಇಲಾಖೆಯ ಉಪನಿರ್ದೇಶಕರು ಸದಸ್ಯ ಕಾರ್ಯದರ್ಶಿಗಳಾಗಿರುತ್ತಾರೆ.
ತಾಲೂಕು ಮಟ್ಟದ ಸಮಿತಿಗೆ ಕಾರ್ಯನಿರ್ವಾಹಕ ಅಧಿಕಾರಿ ತಾಲೂಕು ಪಂಚಾಯಿತಿ ಅಧ್ಯಕ್ಷರಾಗಿರುತ್ತಾರೆ. ಕೃಷಿ ಇಲಾಖೆ ಸಹಾಯಕ ನಿರ್ದೇಶಕರು, ತಹಸೀಲ್ದಾರರು, ಪೌರಾಯುಕ್ತರು, ತೋಟಗಾರಿಕೆ ಇಲಾಖೆ, ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ಸದಸ್ಯರಾಗಿರುತ್ತಾರೆ. ಆಯಾ ತಾಲೂಕಿನ ಸಹಾಯಕ ನಿರ್ದೇಶಕರು ಸದಸ್ಯ ಕಾರ್ಯದರ್ಶಿಗಳಾಗಿರುತ್ತಾರೆ.
18ನೇ ಜಾನುವಾರು ಗಣತಿಯ ಪ್ರಕಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ. 54 ರಷ್ಟು ಕುಟುಂಬಗಳು ಜಾನುವಾರು ಪೋಷಣೆಯಲ್ಲಿ ತೊಡಗಿದ್ದಾರೆ. ಸರ್ಕಾರವು ಪರಿಣಾಮಕಾರಿ ಯೋಜನೆಗಳನ್ನು ರೂಪಿಸಲು ಪ್ರತಿ 5 ವರ್ಷಕ್ಕೊಮ್ಮೆ ನಡೆಸುವ ಜಾನುವಾರು ಗಣತಿ ಅಂಕಿ ಅಂಶಗಳು ಆಧಾರವಾಗಿವೆ. ಜಿಲ್ಲೆಯಲ್ಲಿ 700-1000ಗಳಿಗೆ ಒಬ್ಬ ಗಣತಿದಾರರನ್ನು ನೇಮಿಸಿಕೊಳ್ಳಲು ಅನುಮೋದನೆ ಕೋರಲಾಗಿದೆ ಎಂದು ಪಶುವೈದ್ಯಕೀಯ ಉಪನಿರ್ದೇಶಕ ಡಾ ವಿ ಹಲಗಪ್ಪ ಅವರು ಸಭೆಗೆ ಮಾಹಿತಿ ನೀಡಿದರು. ಸೆಪ್ಟೆಂಬರ್ 5ರಿಂದ 13ರವರೆಗೆ ಜಾನುವಾರು ಗಣತಿ ಸಂಬಂಧ ಗಣತಿದಾರರಿಗೆ ಹಾಗೂ ಮೇಲ್ವಿಚಾರಕರಿಗೆ ತರಬೇತಿ ಆಯೋಜಿಸಲಾಗಿದೆ. ಸಭೆಯಲ್ಲಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.