Friday, September 28, 2012

ತ್ಯಾಜ್ಯದಿಂದ ಎರೆಗೊಬ್ಬರ ತಯಾರಿಕೆ

ಮಂಗಳೂರು, ಸೆಪ್ಟೆಂಬರ್. 28 :ಮೂಡಬಿದ್ರೆ ಕೇಂದ್ರದ 23 ವಾರ್ಡುಗಳಲ್ಲಿ ಮನೆಮನೆ ಕಸ ಸಂಗ್ರಹಿಸಿ ಎರೆಗೊಬ್ಬರ ತಯಾರಿಸಿ,ವಿಲೇವಾರಿ ಮಾಡುವ ಕ್ರಮವನ್ನು ಈಗಾಗಲೇ ಕೈಗೊಳ್ಳಲಾಗಿದೆ.ಇದೇ ರೀತಿ ಎಲ್ಲಾ ತಾಲ್ಲೂಕುಗಳಲ್ಲಿ ತ್ಯಾಜ್ಯ ವಿಲೇವಾರಿ ಕ್ರಮ ಕೈಗೊಳ್ಳಲಾಗುವುದು.ಮನೆಮನೆ ಕಸ ಸಂಗ್ರಹಿಸುವಾಗ ಕಸವನ್ನು ವಿಂಗಡಿಸಿ,ಪ್ಲಾಸ್ಟಿಕ್ ಬೇರೆ ಬ್ಯಾಗುಗಳಲ್ಲಿ ಹಾಗೂ ಇತರ ತ್ಯಾಜ್ಯವನ್ನು ಬೇರೆ ತೊಟ್ಟಿಗಳಲ್ಲಿ ಕೊಟ್ಟರೆ ಮಾತ್ರ ತೆಗೆದುಕೊಳ್ಳಲಾಗುವುದು.ಇಲ್ಲದಿದ್ದರೆ ದಂಡ ವಿಧಿಸಲಾಗುವುದು.ಮುಂದಿನ ದಿನಗಳಲ್ಲಿ ಜಿಲ್ಲೆಯನ್ನು ಪ್ಲಾಸ್ಟಿಕ್ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಎಲ್ಲಾ ನಗರಸಭಾ ಪಾಲಿಕೆ ಮುಖ್ಯಸ್ಥರು ಪ್ರಯತ್ನಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಚನ್ನಪ್ಪ ಗೌಡ ತಿಳಿಸಿದರು.
          ಅವರು ಸ್ಥಳೀಯ ಸಂಘ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಸಭೆಯಲ್ಲಿ ವಾಜಪೇಯಿ ನಗರ ವಸತಿ ಹಾಗೂ ನಮ್ಮ ಮನೆ ಯೋಜನೆಯಲ್ಲಿ 2012 ನೇ ಸೆಪ್ಟೆಂಬರ್ ಅಂತ್ಯದವರೆಗೆ ಶೇಕಡಾ 42 ರಷ್ಟು ಸಾಧನೆಯಾಗಿದೆ. ಮುಖ್ಯಮಂತ್ರಿ ಸಣ್ಣ ಮತ್ತು ಬೃಹತ್ ಪ್ರವಾಸೋದ್ಯಮ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಮೂಡಬಿದ್ರೆ,ಉಳ್ಳಾಲ ನಗರಸಭೆಗಳನ್ನೊಳಗೊಂಡು ಎಲ್ಲಾ ತಾಲ್ಲೂಕಿನ ನಗರಸಭೆಗಳಿಗೆ ರೂ.2600 ಲಕ್ಷ ಅನುದಾನ ಬಿಡುಗಡೆಯಾಗಿದ್ದು,103 ಕಾಮಗಾರಿಗಳು ಪ್ರಗತಿಯಲ್ಲಿವೆ.ಸಣ್ಣ ಉದ್ದಿಮೆ ಯೋಜನೆಯಲ್ಲಿ ಎಲ್ಲಾ ತಾಲೂಕುಗಳ ನಗರಸಭೆಗಳಿಗೆ  ತಲಾ 4 ಲಕ್ಷ ಅನುದಾನ ಬಿಡುಗಡೆಯಾಗಿದೆ.ಈ ಅನುದಾನದಲ್ಲಿ ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡ ಆವರಣಗೋಡೆ ಹಾಗೂ ವಿದ್ಯುದ್ದೀಕರಣ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ಯೊಜನಾ ನಿರ್ದೇಶಕರಾದ  ತಾಕತ್ ರಾವ್  ಸಭೆಗೆ ತಿಳಿಸಿದರು. ಸಭೆಯ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು,ಅಧಿಕಾರಿಗಳು ಉಪಸ್ಥಿತರಿದ್ದರು.