Tuesday, September 18, 2012

ಕಾಮಗಾರಿಗಳ ಸಂಯುಕ್ತ ಸಮೀಕ್ಷೆ ಮಾಡಿ ಛಾಯಾಚಿತ್ರ ಸಹಿತ ವರದಿ ಕೊಡಿ: ಜಿಲ್ಲಾಧಿಕಾರಿ

ಮಂಗಳೂರು, ಸೆಪ್ಟೆಂಬರ್. 18 : ಬೆಳ್ತಂಗಡಿ ತಹಸೀಲ್ದಾರ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮತ್ತು ಸಬ್ಇನ್ಸ್ಪೆಕ್ಟರ್ ಸಂಯುಕ್ತವಾಗಿ ಎಳನೀರು ಸುತ್ತಮುತ್ತಲ 10ರಿಂದ 11 ಕಾಮಗಾರಿಗಳ ಸ್ಥಳ ಪರಿಶೀಲನೆಯನ್ನು ಸೆಪ್ಟೆಂಬರ್ 18ರಂದು ನಡೆಸಿ ಛಾಯಾಚಿತ್ರ ಸಹಿತ ವರದಿ ನೀಡಬೇಕೆಂದು ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪಗೌಡ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸೋಮವಾರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಬಹುದೂರದ ಮತ್ತು ಒಳನಾಡಿನ ಪ್ರದೇಶ ಅಭಿವೃದ್ಧಿ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು, ಕಾಮಗಾರಿಗಳು ನಡೆಯುತ್ತಿರುವ ವೇಗದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತ ಪಡಿಸಿದರು. ಅಧಿಕಾರಿಗಳು ಅಭಿವೃದ್ಧಿ ಕುರಿತು ಬದ್ಧತೆ ಪ್ರದರ್ಶಿಸಿ ಕರ್ತವ್ಯ ನಿರ್ವಹಿಸಬೇಕೆಂದರು.
ಶಿರ್ಲಾಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಲೆಕ್ಕಿಲ-ಮಾಣಿಲ ರಸ್ತೆಯಲ್ಲಿ ಎರಡು ಮೋರಿ ರಚನೆ, ಮಿತ್ತಬಾಗಿಲು ಕಲ್ಸಾರು ಪ್ರದೇಶವನ್ನು ಸಂಪರ್ಕಿಸುವ ಮಿತ್ತಬಾಗಿಲು ಗ್ರಾಮದ ಎಲುವೇರೆ ಹಳ್ಳಕ್ಕೆ ಸೇತುವೆ ನಿರ್ಮಾಣ, ಎಳನೀರಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಾಣ, ಮಲವಂತಿಗೆ ಗ್ರಾಮದ ಪರಾರಿ ಪನಿಕಲ್ ದಿಡುಪೆ ರಸ್ತೆಯ ನೇತ್ರ ಕೋಡಂಗೆ ಎಂಬಲ್ಲಿ ಸೇತುವೆ ರಚನೆ, ಇಂದಬೆಟ್ಟು ಗ್ರಾಮ ಪಂಚಾಯತ್ ನ ನಾವೂರು ಗ್ರಾಮದ ಕುಂಡಡ್ಕ ಎಂಬಲ್ಲಿ ಕುಸಿದು ಬಿದ್ದ ಸೇತುವೆ ಪುನರ್ ನಿಮರ್ಾಣ ಕಾಮಗಾರಿ, ನಡ ಗ್ರಾಮದ ಕಂಬುಜೆ ಬಳಿ ನಾಲ್ಕು ಮೋರಿ ರಚನೆ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಸಂಯುಕ್ತವಾಗಿ ಸಮೀಕ್ಷೆ ಮಾಡಿ ಛಾಯಾಚಿತ್ರ ಸಹಿತ ವರದಿ ಸಲ್ಲಿಸಲು ಜಿಲ್ಲಾಧಿಕಾರಿಗಳು ಹೇಳಿದರು.
ಈ ಮೊದಲು ಸಂಬಂಧ ಪಟ್ಟ ಇಲಾಖಾಧಿಕಾರಿಗಳು ಸಮನ್ವಯದಿಂದ ಕರ್ತವ್ಯನಿರ್ವಹಿಸಬೇಕೆಂದು ಸೂಚಿಸಲಾಗಿದ್ದರೂ, ಸಮನ್ವಯತೆ ಸಾಧಿಸಿದೆ ಕಾಮಗಾರಿ ಅನುಷ್ಠಾನದಲ್ಲಿ ನಿರ್ಲಕ್ಷ್ಯ ವಹಿಸಿದರೆ ನೋಟೀಸು ನೀಡುವ ಎಚ್ಚರಿಕೆಯನ್ನೂ ನೀಡಿದರು.
ನಾರಾವಿ ಗ್ರಾಮದ ನುಜ್ಜೋಡಿ ಅಂಗನವಾಡಿಗೆ 4.15 ಲಕ್ಷ ರೂ.ಗಳ ಅನುದಾನ ಬಿಡುಗಡೆಯಾಗಿದ್ದು, ಅಕ್ಟೋಬರ್ 2ರ ಗಾಂಧೀಜಯಂತಿಯಂದು ಅಂಗನವಾಡಿ ಆರಂಭಿಸಬೇಕೆಂದ ಜಿಲ್ಲಾಧಿಕಾರಿಗಳು, ಮಾಳಿಗೆ ಮನೆಯಲ್ಲಿ ಅಂಗನವಾಡಿ ಆರಂಭಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿಗಳು ಹೇಳಿದರು.
ಕುತ್ಲೂರು -ಕುಕ್ಕಾಜೆ-ಅಳಂಬದ 2.5 ಕಿ. ಮೀ ವ್ಯಾಪ್ತಿಯ ರಸ್ತೆಗೆ 23.65 ಅಂದಾಜುಪಟ್ಟಿ ಸಲ್ಲಿಸಲಾಗಿದ್ದು, ಈ ವಾರದಲ್ಲಿ ಕೆಲಸ ಆರಂಭವಾಗಲಿದೆ. ಸುಲ್ಕೇರಿ ಮೊಗ್ರು ಮತ್ತು ಮಾಳಿಗೆ ರಸ್ತೆಯ ಕಾಮಗಾರಿ ಆರಂಭಿಸಲು ಕಚ್ಚಾಸಾಮಗ್ರಿಗಳನ್ನು ಸಾಗಾಟ ಮಾಡಲು ಸಮಸ್ಯೆ ಇದೆ ಎಂದಾಗ ಪೊಲೀಸ್ ಇಲಾಖೆ ಸ್ಥಳೀಯರ ಸಹಕಾರ ಹಾಗೂ ವಾಹನ ಒದಗಿಸುವ ವ್ಯವಸ್ಥೆಗೆ ನೆರವಾಗಲಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಅಭಿಷೇಕ್ ಗೋಯಲ್ ಹೇಳಿದರು.
ಒಟ್ಟಿನಲ್ಲಿ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾಮಗಾರಿಗಳು ಆರಂಭಗೊಳ್ಳಬೇಕು ಇದಕ್ಕೆ ಪೊಲೀಸ್ ಇಲಾಖೆ ಎಲ್ಲ ಸಹಕಾರ ನೀಡಲಿದೆ ಅಧಿಕಾರಿಗಳು ಸಹಕರಿಸಬೇಕೆಂದರು. ಶಿಲಾಳು ಸುಡೆಲಾಯಿ ಸೇತುವೆ ನಿರ್ಮಾಣ ಅಕೋಬರ್ ಮೊದಲ ವಾರದಲ್ಲಿ ನಿರ್ಮಾಣವಾಗಬೇಕೆಂದ ಜಿಲ್ಲಾಧಿಕಾರಿಗಳು ಅಧಿಕಾರಿಗಳು ಸಮಯ ಮಾಡಿ ಸ್ಥಳ ಪರಿಶೀಲಿಸಿ ಕಾಮಗಾರಿ ಆರಂಭವಾದ ಕುರಿತು ಮಾಹಿತಿ ನೀಡಬೇಕೆಂದರು.
ಪರಾರಿ- ಪನಿಕಲ್ ದಿಡುಪೆಯ ನೇತ್ರಕೊಡಂಗೆ ಎಂಬಲ್ಲಿ, ಇಂದಬೆಟ್ಟುವಿನ ಕುಂಡಡ್ಕ ಎಂಬಲ್ಲಿ ಸೇತುವೆ ರಚನೆ, ನಡ ಗ್ರಾಮದ ಕಂಬುಜೆ ಬಳಿ ಮೋರಿ ರಚನೆಗಳ ಕಾಮಗಾರಿಗಳಿಗೆ, ಮಲವಂತಿಗೆ ಸಂಪಿಗೆಕಟ್ಟೆ, ಎಳನೀರು ರಸ್ತೆ ಕಾಮಗಾರಿಗೆ ಟೆಂಡರ್ 27ರಂದು ಓಪನ್ ಆಗಲಿದೆ ಎಂದು ಜಿಲ್ಲಾ ಪಂಚಾಯತ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಹೇಳಿದರು.
ಪಲ್ಲಿ ಬಸ್ ನಿಲ್ದಾಣ ಬಳಿ ನೀರಾವಿ ಚರಂಡಿಗೆ, ಸೋಲಾರ್ ಘಟಕಗಳ ಬಗ್ಗೆ, ಗ್ರಾಮೀಣ ಉದ್ಯೋಗ ಖಾತ್ರಿ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಿ ಕಾಮಗಾರಿ ನಡೆಸಿ ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ ಕೆ ಎನ್ ವಿಜಯಪ್ರಕಾಶ್ ಅವರನ್ನೊಳಗೊಂಡಂತೆ ಎಲ್ಲ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.