Tuesday, September 11, 2012

ಇಲಿ, ಹೆಗ್ಗಣಗಳ ಹತೋಟಿ ಕ್ರಮ

ಇಲಿಗಳು ಬಿತ್ತನೆ ಕಾಳಿನಿಂದ ಹಿಡಿದು ಉಗ್ರಾಣದಲ್ಲಿ ಸಂಗ್ರಹಿಸಿಡುವವರೆಗೆ ಆಹಾರ ಧಾನ್ಯಗಳನ್ನು ಸಾಕಷ್ಟು ಪ್ರಮಾಣದಲ್ಲಿ ತಿನ್ನುವುದರಿಂದ ಆಗಾಧ ಆರ್ಥಿಕ ಹಾನಿಯುಂಟಾಗುತ್ತದೆ. ಭಕ್ಷಣೆಯ ಜೊತೆಗೆ ಸಾಕಷ್ಟು ಆಹಾರ ಧಾನ್ಯಗಳನ್ನು ತಮ್ಮ ಬಿಲಗಳಲ್ಲಿ ಶೇಖರಿಸಿಡುವುದು. ಹೀಗೆ ಸಂಗ್ರಹಿಸಿದ ಆಹಾರ ಧಾನ್ಯ ಹಾಳಾಗುವುದರ ಮೂಲಕ ನಷ್ಟದ ಪ್ರಮಾಣ ಇನ್ನಷ್ಟು ಹೆಚ್ಚುತ್ತದೆ. ಇಲಿಗಳು ಅತೀ ಕಡಿಮೆ ಅವಧಿಯಲ್ಲಿ ಅತೀ ಹೆಚ್ಚು ಸಂಖ್ಯೆಯಲ್ಲಿ ವೃದ್ಧಿಸುವ ಶಕ್ತಿಯನ್ನು ಹೊಂದಿರುತ್ತವೆ.
ಅಲ್ಲದೆ, ಇವುಗಳು ಕೂದಲು ಮತ್ತು ಹಿಕ್ಕೆಯನ್ನು ಆಹಾರಧಾನ್ಯಗಳಲ್ಲಿ ಸೇರ್ಪಡೆಯಾಗುವುದರಿಂದ ಆಹಾರಧಾನ್ಯ ಕಲುಷಿತಗೊಂಡು, ಇವುಗಳನ್ನು ಸೇವಿಸುವುದರಿಂದ ಜನ ಜಾನುವಾರುಗಳ ಆರೋಗ್ಯ ಕೆಡುವ ಸಂದರ್ಭವಿರುತ್ತದೆ. ಇತ್ತೀಚಿನ ದಿನಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮನುಷ್ಯರಲ್ಲಿ ಬರುವ ಇಲಿಜ್ವರದ ವಾಹಕವೂ ಇಲಿಯೇ ಆಗಿರುತ್ತದೆ. ಇಲಿಜ್ವರವು ಮಾರಣಾಂತಿಕ ರೋಗವಾಗಿದೆ. ಇಲಿಜ್ವರದಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾವುಗಳು ಸಹ ಸಂಭವಿಸಿರುತ್ತವೆ. ಹೀಗೆ ಇಲಿಗಳು ಆಹಾರ ಧಾನ್ಯಗಳನ್ನು ಸಾಕಷ್ಟು ಪ್ರಮಾಣದಲ್ಲಿ ಹಾಳು ಮಾಡುವುದರ ಜೊತೆಗೆ ಮನುಷ್ಯರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮಗಳನ್ನು ಬೀರುತ್ತವೆ. ಆದ್ದರಿಂದ ಇವುಗಳ ನಿಯಂತ್ರಣ ಅನಿವಾರ್ಯವಾಗಿರುತ್ತದೆ.
ಹೊಲಗದ್ದೆಗಳಲ್ಲಿ ಇಲಿ ನಿಯಂತ್ರಣ:
ಸಾಮೂಹಿಕವಾಗಿ ಹತೋಟಿ ಕ್ರಮಗಳನ್ನು ಕೈಗೊಂಡಲ್ಲಿ ಇಲಿಗಳನ್ನು ನಿಯಂತ್ರಿಸಬಹುದು. ಇಲಿಗಳು ಸಂಶಯ ಪ್ರಾಣಿಗಳಾದ್ದರಿಂದ ಏಕಾಏಕಿ ಯಾವುದೇ ಹೊಸ ಆಹಾರ ಪದಾರ್ಥವನ್ನು ತಕ್ಷಣ ತಿನ್ನುವುದಿಲ್ಲ. ಆದುದರಿಂದ ವಿಷ ರಹಿತ ಆಹಾರವನ್ನು ಎರಡು ದಿನ ಬಿಲಗಳಲ್ಲಿ ಇಟ್ಟ ಮೇಲೆಯೇ ಇಲಿ ಪಾಷಾಣವನ್ನು ಉಪಯೋಗಿಸಬೇಕು.
ವಿಷರಹಿತ ಆಮಿಷದ ತಯಾರಿಕೆ:
ಅಕ್ಕಿ ಹಿಟ್ಟು - 45 ಭಾಗ, ರಾಗಿಹಿಟ್ಟು -45 ಭಾಗ, ಹುರಿದು ಕುಟ್ಟಿದ ಕಡಲೆ ಬೀಜ-5 ಭಾಗ, ಕಡಲೆಕಾಯಿ ಎಣ್ಣೆ - 5 ಭಾಗ ಇಷ್ಟನ್ನು ಒಂದು ದೊಡ್ಡ ಪ್ಲಾಸ್ಟಿಕ್ ಬೋಗುಣಿಯಲ್ಲಿ ಹಾಕಿ, ಇದನ್ನು ಪ್ಲಾಸ್ಟಿಕ್ ಅಥವಾ ಮರದ ಸೌಟಿನ ಸಹಾಯದಿಂದ ಚೆನ್ನಾಗಿ ಬೆರೆಸಿ, 20 ಗ್ರಾಂ. ಮಿಶ್ರಣವನ್ನು ಪ್ಲಾಸ್ಟಿಕ್ ಕವರಿನೊಳಗೆ ಹಾಕಿ ಗಂಟು ಹಾಕಿ, ಹೀಗೆ ತಯಾರಿಸಿದ ವಿಷ ರಹಿತ ಆಮಿಷವನ್ನು ಬಿಲಗಳಲ್ಲಿ ಇಲಿಗಳು ಇವೆ ಎಂದು ಖಚಿತ ಪಡಿಸಿಕೊಂಡು (ಜೀವಂತ ಬಿಲಗಳಿಗೆ) ಎರಡು ದಿನ ಇಟ್ಟು ಇಲಿಗಳು ವಿಷ ರಹಿತ ಆಹಾರವನ್ನು ತಿನ್ನಲು ಪ್ರಾರಂಭಿಸಿದ ನಂತರವೇ ವಿಷಪೂರಿತ ಆಹಾರದ ಆಮಿಷವನ್ನು ಉಪಯೋಗಿಸಬೇಕು.
ವಿಷದ ಆಮಿಷ ತಯಾರಿಕೆ:
ಮೇಲೆ ತಿಳಿಸಿದಂತೆ ವಿಷರಹಿತ ಆಮಿಷವನ್ನು ತಯಾರಿಸಿ ಅದಕ್ಕೆ ಶೇ. 2ರಷ್ಟು ಜಿಂಕ್ ಫಾಸ್ಪೈಡನ್ನು ಬೆರೆಸಿ (ಮಿಶ್ರಣ ಮಾಡಲು ಪ್ಲಾಸ್ಟಿಕ್ ಚಮಚ ಬಳಸಿ) ನಂತರ ವಿಷಯುಕ್ತ ಆಮಿಷವನ್ನು ಪ್ರತೀ ಪ್ಲಾಸ್ಟಿಕ್ ಕವರ್ಗೆ 10 ಗ್ರಾಂ.ನಂತೆ ಹಾಕಿ, ಗಂಟು ಹಾಕಬೇಕು.
ವಿಷದ ಆಮಿಷ ಬಳಸುವ ವಿಧಾನ:
ಮೊದಲ ದಿನ ಹೊಲ ಗದ್ದೆಗಳಲ್ಲಿರುವ ಎಲ್ಲಾ ಇಲಿ ಬಿಲಗಳನ್ನು ಒದ್ದೆ ಮಣ್ಣಿನಿಂದ ಮುಚ್ಚಿರಿ.
ಎರಡನೇ ದಿನ ಬಾಯ್ದೆರೆದಿರುವ ಬಿಲಗಳಲ್ಲಿ ಒಂದೊಂದು ವಿಷ ರಹಿತ ಆಮಿಷವಿರುವ ಪ್ಲಾಸ್ಟಿಕ್ ಕವರನ್ನು ಹಾಕಿ ಒದ್ದೆ ಮಣ್ಣಿನಿಂದ ಮುಚ್ಚಿ.
ಮೂರನೇ ದಿನ ಮತ್ತೆ ವಿಷ ರಹಿತ ಆಹಾರವನ್ನು ಇಡಿ.
ನಾಲ್ಕನೇ ದಿನ ತೆರೆದಿರುವ ಪ್ರತಿ ಬಿಲದೊಳಕ್ಕೂ ಒಂದರಂತೆ ವಿಷಪೂರಿತ ಆಹಾರವಿರುವ ಪ್ಲಾಸ್ಟಿಕ್ ಕವರನ್ನು ಹಾಕಿ, ಒದ್ದೆ ಮಣ್ಣಿನಿಂದ ಮುಚ್ಚಿ.
ಐದನೇ ದಿನ ಮೇಲಿನ ಕ್ರಮದಿಂದ ಶೇ.60 ರಿಂದ 70ರಷ್ಟು ಇಲಿಗಳು ಸಾಯುತ್ತವೆ.
ಉಳಿದಿರುವ ಇಲಿಗಳನ್ನು ಕೊಲ್ಲಲು ಬಾಯಿ ತೆರೆದಿರುವ ಪ್ರತಿಯೊಂದು ಬಿಲದೊಳಕ್ಕೆ ಒಂದು ರೋಬಾನ್ ಬಿಲ್ಲೆ ಹಾಕಿ ಒದ್ದೆ ಮಣ್ಣಿನಿಂದ ಮುಚ್ಚಿ.

ರೋಬಾನ್ ಬಳಸಿ ಇಲಿಗಳ ನಿಯಂತ್ರಣ:
ಮೊದಲಿಗೆ ತೆಂಗು, ಅಡಿಕೆ, ದಾಳಿಂಬೆ, ಕೋಕೋ ಮತ್ತು ಇತರೆ ಮರಗಳಲ್ಲಿರುವ ಎಲ್ಲಾ ಇಲಿ ಗೂಡುಗಳನ್ನು ನಾಶಪಡಿಸಿ.
ನಂತರ ಕಾಂಡ ಮತ್ತು ಗೊನೆ ಅಥವಾ ಕಾಂಡ-ರೆಂಬೆ ಸೇರುವ ಕಡೆ ಒಂದು ರೋಬಾನ್ ಬಿಲ್ಲೆಯನ್ನು ಬೀಳದಂತೆ ಗಟ್ಟಿಯಾಗಿ ಅದುಮಿಡಿ.
ರೋಬಾನ್ ಬಿಲ್ಲೆಯ ಮೂಲಕ ಒಂದು ತೆಳುವಾದ ಬಿಸಿ ಕಬ್ಬಿಣದ ತಂತಿಯನ್ನು ತೂರಿಸಿ ಮರದ ಎತ್ತರ ನೋಡಿ ಆಯಕಟ್ಟಿನ ಜಾಗದಲ್ಲಿ ಕಾಂಡದ ಸುತ್ತಲೂ ಬಿಗಿಯಾಗಿ ಕಟ್ಟಿ.

ಇಲಿ ಬೋನುಗಳ ಬಳಕೆ:
ಮನೆಗಳಲ್ಲಿ ಇಲಿ ಬೋನುಗಳನ್ನಿಟ್ಟು ಇಲಿಗಳನ್ನು ಹತೋಟಿ ಮಾಡಬೇಕು.
ಪ್ರತೀ ಬಾರಿ ಇಲಿ ಸಿಕ್ಕಿ ಬಿದ್ದಾಗಲೂ ಬಿಸಿ ನೀರಿನಲ್ಲಿ ಅದ್ದಿ ಸ್ವಚ್ಛಗೊಳಿಸಿ ಮತ್ತೆ ಬೋನನ್ನು ಬಳಸಿ.
ಇಲಿ ನಿಯಂತ್ರಣದಲ್ಲಿ ಮುಂಜಾಗ್ರತಾ ಕ್ರಮಗಳು
ಹೊಲಗದ್ದೆ, ತೋಟಗಳಲ್ಲಿ ಮಾತ್ರ ಜಿಂಕ್ ಪಾಸ್ಫೇಟನ್ನು ಇಲಿಗಳ ನಿಯಂತ್ರಣಕ್ಕೆ ಬಳಸಿ.
ವಿಷವನ್ನು ಬರಿ ಕೈಯಿಂದಲಾಗಲಿ, ಲೋಹದ ಪಾತ್ರೆಗಳಲ್ಲಾಗಲೀ ಬೆರೆಸಬೇಡಿ (ಕೇವಲ ಪ್ಲಾಸ್ಟಿಕ್ ಬೇಸಿನ್ ಮತ್ತು ಸೌಟುಗಳ ಬಳಕೆ).
ಮೂರು ದಿನಗಳ ನಂತರ ತಿನ್ನದೇ ಉಳಿದಿರುವ ರೋಬಾನ್ ಬಿಲ್ಲೆಯನ್ನು ಮನುಷ್ಯರಿಗೆ ಸಾಕುಪ್ರಾಣಿಗಳಿಗೆ ಸಿಗದಂತೆ ನೋಡಿಕೊಳ್ಳಿ.
ಸತ್ತ ಇಲಿ, ಹೆಗ್ಗಣಗಳನ್ನು ನಾಯಿ ಬೆಕ್ಕುಗಳಿಗೆ ಸಿಗದಂತೆ ಆಳವಾಗಿ ಗುಂಡಿ ಮಾಡಿ ಹೂಳಿ.
ಮನೆಯಲ್ಲಿ ಕೇವಲ ರೋಬಾನ್ ಬಿಲ್ಲೆ ಬಳಸಿ, ಇಲಿಗಳನ್ನು ನಿಯಂತ್ರಿಸಿ.
ವಿಷ ಇಟ್ಟ ನಂತರ ಕೈ, ಕಾಲು, ಮುಖವನ್ನು ಸಾಬೂನಿನಿಂದ ಚೆನ್ನಾಗಿ ತೊಳೆದುಕೊಳ್ಳಬೇಕು.
ಆಕಸ್ಮಿಕವಾಗಿ ಜಿಂಕ್ ಪಾಸ್ಫೇಟನ್ನು ಯಾರಾದರೂ ತಿಂದರೆ ತಕ್ಷಣವೇ ಉಪ್ಪು ನೀರು ಅಥವಾ ಮೊಟ್ಟೆಯ ಬಿಳಿ ಭಾಗ ನುಂಗಿಸಿ ವಾಂತಿ ಮಾಡಿಸಿ ಹಾಗೂ ತಡಮಾಡದೇ ವೈದ್ಯರಲ್ಲಿ ಕರೆದೊಯ್ಯಿರಿ.
ರೋಬಾನನ್ನು ಆಕಸ್ಮಿಕವಾಗಿ ಸೇವಿಸಲಟ್ಟರೆ ವೈದ್ಯರಲ್ಲಿಗೆ ಕರೆದೊಯ್ದು, ವಿಟಮಿನ್ ಕೆ-1ರ ಚುಚ್ಚುಮದ್ದನ್ನು ನೀಡುವಂತೆ ಕೋರಿ.
ಹೆಚ್ಚಿನ ಮಾಹಿತಿಗೆ ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಛೇರಿಯನ್ನು ಸಂಪರ್ಕಿಸಿರಿ.

ಉಳಿಸಿದ ಕಾಳು ಬೆಳೆಸಿದ ಕಾಳಿಗೆ ಸಮ