Tuesday, September 4, 2012

ದೂರದುರ್ಗಮ ಪ್ರದೇಶಗಳಿಗೆ ನೆರೆಪರಿಹಾರದಡಿ 41 ಲಕ್ಷ ರೂ. ಅನುದಾನ: ಜಿಲ್ಲಾಧಿಕಾರಿ

ಮಂಗಳೂರು,ಸೆಪ್ಟೆಂಬರ್.04: ಬೆಳ್ತಂಗಡಿ ತಾಲೂಕಿನ ದೂರ ದುರ್ಗಮ ಪ್ರದೇಶಗಳಾದ ಕುತ್ಲೂರು, ನಾವೂರ, ನಾರಾವಿ ಮುಂತಾದೆಡೆ ರಸ್ತೆ, ಚರಂಡಿ, ಮೋರಿ ಅಭಿವೃದ್ಧಿಗೆ ನೆರೆ ಪರಿಹಾರ ನಿಧಿಯಡಿ ಒಟ್ಟು 41 ಲಕ್ಷ ರೂ.ಗಳನ್ನು ಕಾಮಗಾರಿಗಳಿಗೆ ದ.ಕ ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪಗೌಡ ಅವರು ಬಿಡುಗಡೆ ಮಾಡಿದ್ದು, ಮುಂಗಡ ಅನುದಾನ 20.50 ಲಕ್ಷ ರೂ. ನೀಡಲಾಗಿದೆ.
ಸೋಮವಾರ ಸಂಜೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಬೆಳ್ತಂಗಡಿ ಸುತ್ತಮುತ್ತಲ ಅಭಿವೃದ್ಧಿಯಲ್ಲಿ ಹಿಂದುಳಿದ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯ ಕಲ್ಪಿಸುವ ಸಂಬಂಧದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಈ ಮಾಹಿತಿಯನ್ನು ನೀಡಲಾಯಿತು.
ನೆರೆ ಪರಿಹಾರ ನಿಧಿಯಡಿ ನಾರಾವಿ ಗ್ರಾಮದ ನೂಜೋಡಿ ಕುಳಂತಾಜೆ ಹೊರಗಿನ ರಸ್ತೆ ದುರಸ್ತಿಗೆ, ಕುತ್ಲೂರು ಗ್ರಾಮದ ಪಿಲಿಯಾಡಿ-ನೆಲ್ಲಿತಡ್ಕ ರಸ್ತೆ ದುರಸ್ತಿಗೆ ತಲಾ ಏಳು ಲಕ್ಷ ರೂ.ಗಳ ಅಂದಾಜುಪಟ್ಟಿ ಸಿದ್ಧಪಡಿಸಲಾಗಿದ್ದು, ತಲಾ 3.50 ಲಕ್ಷ ರೂ. ಮುಂಗಡ ಅನುದಾನ ಬಿಡುಗಡೆ ಮಾಡಲಾಗಿದೆ. ಸುಲ್ಕೇರಿ ಮೊಗ್ರು ಗ್ರಾಮದ ಒಕ್ಕ -ಕುದ್ಕೋಳಿ ರಸ್ತೆ ದುರಸ್ತಿಗೆ 2.50 ಲಕ್ಷ ರೂ. ಸುಲ್ಕೇರಿ ಮೊಗ್ರು ಶಾಲೆಯಿಂದ ನಾವರ ಕೇಡೇಲು ರಸ್ತೆ ದುರಸ್ತಿಗೆ, ಶಿಲರ್ಾಲು ಗ್ರಾಮ ಶಾಲೆಯಿಂದ ಹಂಡೇಲು ಬೈಲು ರಸ್ತೆ ದುರಸ್ತಿಗೆ ತಲಾ 2.50 ಲಕ್ಷ ರೂ., ನಡ ಗ್ರಾಮದ ಮಂಜೊಟ್ಟಿ ಮಂಜಿಲ ರಸ್ತೆಯಲ್ಲಿ 2 ಮೋರಿ ಮತ್ತು ರಸ್ತೆ ದುರಸ್ತಿಗೆ 2.50 ಲಕ್ಷ ರೂ., ನಾವೂರು ಗ್ರಾಮದ ಪಿಲಗೂಡಿನಿಂದ ಎರ್ಮಲೆ ರಸ್ತೆ ದುರಸ್ತಿಗೆ 2 ಲಕ್ಷ, ನಾವೂರು ಗ್ರಾಮ ಪಾಂಚಾರ್ ನಿಂದ ಮಂಜಿಲ ರಸ್ತೆ ದುರಸ್ತಿಗೆ 2.50 ಲಕ್ಷ ರೂ.ಗಳ ಮುಂಗಡ ಅನುದಾನ ಬಿಡುಗಡೆ ಮಾಡಲಾಗಿದೆ.
ಈ ಪ್ರದೇಶಗಳಲ್ಲಿ ವಿಶೇಷ ಪ್ಯಾಕೇಜ್ನಡಿ ವಿವಿಧ ಕಾಮಗಾರಿಗಳಾದ ಸೇತುವೆ ರಚನೆಗಳಿಗೆ ಅಂದಾಜುಪಟ್ಟಿಗಳನ್ನು ಸಲ್ಲಿಸಲಾಗಿದ್ದು, ಎಲ್ಲ ಕಾಮಗಾರಿಗಳನ್ನು ಯಾವುದೇ ಕಾರಣಗಳನ್ನು ನೀಡದೆ ಶೀಘ್ರವೇ ಆರಂಭಿಸಬೇಕೆಂದು ಜಿಲ್ಲಾಧಿಕಾರಿಗಳು ಜಿಲ್ಲಾ ಪಂಚಾಯತ್ ಇಂಜಿನಿಯರ್ ವಿಭಾಗ ಹಾಗೂ ನಿರ್ಮಿತಿ ಕೇಂದ್ರದವರಿಗೆ ತಾಕೀತು ಮಾಡಿದರು.
ಕಾಮಗಾರಿಗಳ ಶೀಘ್ರ ಅನುಷ್ಠಾನಕ್ಕೆ ತಾಲೂಕು ಮಟ್ಟದಲ್ಲಿ ತಹಸೀಲ್ದಾರ್, ಕಾರ್ಯನಿರ್ವಹಣಾಧಿಕಾರಿ ಹಾಗೂ ಇಂಜಿನಿಯರ್ ಚರ್ಚಿಸಿ ಕ್ರಮಕೈಗೊಳ್ಳಲು ಸೂಚಿಸಿದರು. ನಾರಾವಿ ಗ್ರಾಮದ ನುಜ್ಜೋಡಿ ಎಂಬಲ್ಲಿ ಅಂಗನವಾಡಿ ಕೇಂದ್ರ ಸ್ಥಾಪನೆ ಸಂಬಂಧಿಸಿದಂತೆ 4.15 ಲಕ್ಷ ರೂ. ಅಂದಾಜು ಪಟ್ಟಿ ಸಲ್ಲಿಸಿದ್ದು, ಕೆಲಸ ಗುರುವಾರದಿಂದ ಆರಂಭವಾಗಬೇಕೆಂದು ಜಿಲ್ಲಾಧಿಕಾರಿಗಳು ಆದೇಶಿಸಿದರು.
ಮಾಳಿಗೆ ಗ್ರಾಮದಲ್ಲಿ ಒಂದು ಅಂಗನವಾಡಿ ಹಾಗೂ ಆರೋಗ್ಯ ತಪಾಸಣಾ ಕೇಂದ್ರ ತಕ್ಷಣವೇ ಆರಂಭಿಸಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ ಜಿಲ್ಲಾಧಿಕಾರಿಗಳು, ಮಲವಂತಿಗೆ ಗ್ರಾಮಪಂಚಾಯತ್ ಸದಸ್ಯರಾದ ಅರುಣ್ ಕುಮಾರ್ ಅಧಿಕಾರಿಗಳಿಗೆ ಸ್ಥಳೀಯವಾಗಿ ಸಹಕಾರ ನೀಡಬೇಕೆಂದರು. ಹಲವೆಡೆಗಳಲ್ಲಿ ಮಳೆಯಿಂದ ಕಾಮಗಾರಿಗೆ ತೊಂದರೆಯಾಗಲಿದ್ದು, ರಸ್ತೆ ಸಂಪರ್ಕವಿಲ್ಲದಿರುವುದರಿಂದ ಆಗುವ ಸಮಸ್ಯೆಗಳ ಬಗ್ಗೆ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಗಮನಸೆಳೆದಾಗ, ಯಾವುದೇ ಸಬೂಬು ಹೇಳದೆ ಸ್ಥಳೀಯರ ಸಹಕಾರದಿಂದ ಕಾಮಗಾರಿಗಳನ್ನು ಆರಂಭಿಸಲು ಜಿಲ್ಲಾಧಿಕಾರಿಗಳು ಹೇಳಿದರು.
ಸುಲ್ಕೇರಿ, ಸುಲ್ಕೇರಿ ಮೊಗ್ರುವಿನ 5 ಕುಟುಂಬಗಳಿಗೆ ಸೋಲಾರ್ ಲೈಟ್ ಒದಗಿಸಲಾಗಿದೆ ಎಂದು ಐಟಿಡಿಪಿ ಅಧಿಕಾರಿಗಳು ಮಾಹಿತಿ ನೀಡಿದರು. ಈ ತಿಂಗಳಾಂತ್ಯದೊಳಗೆ ಇಲ್ಲಿನ 50 ಮನೆಗಳ ಸೋಲಾರ್ ಲೈಟ್ ರಿಪೇರಿ ಮಾಡಿಸಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಎಳನೀರಿನಲ್ಲಿ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪಿಸಿ, ಹೊರಗುತ್ತಿಗೆಯಲ್ಲಿ ವೈದ್ಯರನ್ನು ನೇಮಿಸಿ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಆದೇಶಿಸಿದ ಜಿಲ್ಲಾಧಿಕಾರಿಗಳು, ಮೊಬೈಲ್ ಯುನಿಟ್ ಈ ಪ್ರದೇಶಗಳಿಗೆ 15 ದಿವಸಕ್ಕೊಮ್ಮೆ ಕನಿಷ್ಠ ಭೇಟಿ ನೀಡಿ ಸ್ಥಳೀಯರ ಆರೋಗ್ಯ ಪರಿಶೀಲಿಸಬೇಕೆಂದರು. ಈ ಬಗ್ಗೆ ವಿಶೇಷ ವಾಹನ ಪಡೆಯುವ ಅವಕಾಶಕ್ಕೂ ಜಿಲ್ಲಾಧಿಕಾರಿಗಳು ಅನುಮತಿ ನೀಡಿದರು.
ನಾವೂರಿನ ಕುಂಡಡ್ಕ ಎಂಬಲಲಿ ಕುಸಿದು ಬಿದ್ದ ಸೇತುವೆ ಪುನರ್ ನಿರ್ಮಾಣಕ್ಕೆ 45 ಲಕ್ಷ ರೂ ಅಂದಾಜುಪಟ್ಟಿ ತಯಾರಿಸಲಾಗಿದ್ದು ನವೆಂಬರ್ ನಲ್ಲಿ ಕಾಮಗಾರಿ ಆರಂಭಿಸಲು ಇಂಜಿನಿಯರ್ ಗೆ ಸೂಚಿಸಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ ಕೆ ಎನ್ ವಿಜಯಪ್ರಕಾಶ್ ಅವರು, ಈ ಪ್ರದೇಶಗಳ ಅಭಿವೃದ್ಧಿಗೆ ಸಂಬಂಧಪಟ್ಟ ಪಿಡಿಒ ಹಾಗೂ ಎನ್ ಜಿ ಒಗಳೊಂದಿಗೆ ಸಭೆ ನಡೆಸಿ 25.50 ಲಕ್ಷ ರೂ.ಗಳ ಅಭಿವೃದ್ಧಿ ಕಾಮಗಾರಿಗಳನ್ನುಕೈಗೊಳ್ಳಲಾಗಿದೆ. ಸರ್ವಶಿಕ್ಷಣ ಅಭಿಯಾನದಡಿ ಈ ಪ್ರದೇಶಗಳ ಮಕ್ಕಳಿಗೆ ಬ್ಯಾಗ್, ಹಾಗೂ ಕಲಿಕಾ ಕಿಟ್ ಗಳು,ಅಕ್ವಾಗಾಡ್ರ್ ಗಳು, ಹಾಗೂ ಪೂರಕ ಪಠ್ಯಗಳನ್ನು ಒಟ್ಟು 25,00,000ರೂ.ವೆಚ್ಚದಲ್ಲಿ ವಿತರಿಸಲಾಗುವುದು ಎಂದರು.
ಇದಲ್ಲದೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಯೋಜನೆಗಳಡಿ ಸೌಲಭ್ಯ ನೀಡಲಾಗುವುದು ಎಂದರು.
ಸಮಾಜಕಲ್ಯಾಣ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ತೋಟಗಾರಿಕೆ, ಪಶುವೈದ್ಯಕೀಯ, ಕೃಷಿ ಮುಂತಾದ ಜಿಲ್ಲಾ ಪಂಚಾಯತ್ ವ್ಯಾಪ್ತಿಯಡಿ ಬರುವ ಎಲ್ಲ ಇಲಾಖೆಗಳು ವೈಯಕ್ತಿಕ ಫಲಾನುಭವಿಗಳಿಗೆ ವಿತರಿಸುವ ಸೌಲಭ್ಯದ ಬಗ್ಗೆ ಸೆಪ್ಟೆಂಬರ್ 15ರೊಳಗೆ ಸಂಪೂರ್ಣ ಮಾಹಿತಿ ನೀಡಬೇಕೆಂದು ಸಿಇಒ ಹೇಳಿದರು.
ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಈವರೆಗೆ ಪರಿಶಿಷ್ಟ ಜಾತಿ ಮತ್ತು ಪಂಗಡದ ಉದ್ಯೋಗ ಚೀಟಿ ಪಡೆದ ಫಲಾನುಭವಿಗಳಿಗೆ ಉದ್ಯೋಗ ನೀಡಲೇಬೇಕೆಂದು ಜನಶಿಕ್ಷಣ ಟ್ರಸ್ಟ್ ನ ಕೃಷ್ಣ ಮೂಲ್ಯ ಅವರು ವಿನಂತಿಸಿದರು.
ಸಭೆಯಲ್ಲಿ ಪ್ರಭಾರ ಎಸ್ ಪಿ ಸುಭಾಷ್ ಗುಡಿಮನೆ, ಅಪರ ಜಿಲ್ಲಾಧಿಕಾರಿ ದಯಾನಂದ ಕೆ.ಎ , ಬೆಳ್ತಂಗಡಿ ತಹಸೀಲ್ದಾರ್ ಶ್ರೀಮತಿ ಕುಸುಮ ಕುಮಾರಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. ಮಲವಂತಿಗೆ ಗ್ರಾಮಪಂಚಾಯತ್ ಸದಸ್ಯರಾದ ಅರುಣ್ ಕುಮಾರ್ ಅವರು ಸ್ಥಳೀಯ ಬೇಡಿಕೆಗಳ ಬಗ್ಗೆ ಹಾಗೂ ಸಹಕಾರ ನೀಡುವ ಬಗ್ಗೆ ಜಿಲ್ಲಾಧಿಕಾರಿಗಳ ಗಮನ ಸೆಳೆದರು.