Saturday, September 1, 2012

ಆದೇಶದ ಮಾರ್ಗಸೂಚಿಗಳಲ್ಲೇ ಸಮಸ್ಯೆಗಳಿಗೆ ಪರಿಹಾರವಿದೆ: ಭರತ್ ಲಾಲ್ ಮೀನ

ಮಂಗಳೂರು, ಸೆಪ್ಟೆಂಬರ್.01 :ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಡಿತರ ಕಾರ್ಡ್ ವಿತರಣೆ ವ್ಯವಸ್ಥೆಯನ್ನು ಸುಗಮವಾಗಿಸಲು ತಾಂತ್ರಿಕ ಪರಿಣತಿ ಹೊಂದಿರುವ ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಯೊಬ್ಬರನ್ನು ನೇಮಿಸಿದರೆ ಅನುಕೂಲವಾಗಲಿದೆ ಎಂದು ಜಿಲ್ಲಾಧಿಕಾರಿ ಡಾ.ಎನ್.ಎಸ್.ಚನ್ನಪ್ಪ ಗೌಡ ಅವರು ಹೇಳಿದರು.

ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲೆಯ ಪ್ರಗತಿ ಪರಿಶೀಲನೆ ನಡೆಸಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಭರತ್ ಲಾಲ್ ಮೀನಾರವರು ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳಿಂದ ಅಭಿವೃದ್ಧಿ ಕಾರ್ಯಕ್ರಮ ಅನುಷ್ಠಾನ ಸಂಬಂಧ ತೊಡರುಗಳ ಮಾಹಿತಿ ಪಡೆದುಕೊಂಡ ಸಂದರ್ಭ ಜಿಲ್ಲಾಧಿಕಾರಿಗಳು ಮಾಹಿತಿ ನೀಡಿ ಮಾತನಾಡುತ್ತಿದ್ದರು.

ಜಿಲ್ಲೆಯ ಪಡಿತರ ವ್ಯವಸ್ಥೆ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕರು, ಆನ್ ಲೈನ್ ಮೂಲಕ ಈಗಾಗಲೇ 46,000 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಇವುಗಳಲ್ಲಿ 13,000 ಬಿಪಿಎಲ್ ಕಾರ್ಡುಗಳಿಗೆ ಅರ್ಜಿ ಸ್ವೀಕರಿಸಲಾಗಿದ್ದು, ಅರ್ಜಿಗಳ ಪರಿಶೀಲನೆಯ ಬಳಿಕ 6,972 ಬಿಪಿಎಲ್ ಕಾರ್ಡುಗಳನ್ನು ನೀಡಲಾಗಿದೆ. ನಗರ ಪ್ರದೇಶದಲ್ಲಿ ಆನ್ ಲೈನ್ ವ್ಯವಸ್ಥೆ ಸುಗಮವಾಗಿದ್ದು, ಗ್ರಾಮೀಣ ಪ್ರದೇಶದಲ್ಲಿ ಶೇಕಡಾ 80 ಪ್ರಗತಿಯಾಗಿದೆ. ಸರ್ವರ್ ಸಮಸ್ಯೆಯಿಂದ ಪಡಿತರ ಕಾರ್ಡು ಪ್ರಕ್ರೀಯೆಗೆ ಇಲಾಖೆಗೆ ಸಮಸ್ಯೆಯಾಗಿದೆಯೆಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಗಮನ ಸೆಳೆದರು. ಸರ್ವರ್ ಸಮಸ್ಯೆಯನ್ನು ಪರಿಹರಿಸಲು ಇಲಾಖೆ ಎನ್ ಐ ಸಿ ಯ ನೆರವನ್ನು ಕೋರಿದ್ದು, ಸಮಸ್ಯೆ ಪರಿಹರಿಸುವಲ್ಲಿ ನಿರತವಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕರು ಸಭೆಗೆ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಮಳೆ ಹಾನಿಗೆ ಸಂಬಂಧಿಸಿದಂತೆ ಪರಿಹಾರ ವಿತರಿಸಲಾಗಿದ್ದು, ಬೆಳೆ ಹಾನಿಗೂ ಪರಿಹಾರ ನೀಡಲಾಗಿದೆ. ಆದರೆ ಬೆಳೆ ಹಾನಿ ವಿತರಣೆ ಬಗ್ಗೆ ರೈತರಲ್ಲಿ ಅಸಮಾಧಾನವಿದ್ದು, ತಾಂತ್ರಿಕ ಕಾರಣಗಳಿಂದ ಅವರಿಗೆ ಪೂರಕವಾಗಿ ಕ್ರಮಕೈಗೊಳ್ಳಲಾಗಿಲ್ಲ. ಈ ಬಗ್ಗೆ ರೈತರ ಸಮಸ್ಯೆಗೆ ಸ್ಪಂದಿಸಲು ಬೆಳೆ ಹಾನಿ ಬಗ್ಗೆ ವಿಶೇಷ ಸಮೀಕ್ಷೆ ನಡೆಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಜಿಲ್ಲೆಯಲ್ಲಿ ಬಿತ್ತನೆ ಸುಗಮವಾಗಿದ್ದು, ಸಾಕಷ್ಟು ರಸಗೊಬ್ಬರದ ದಾಸ್ತಾನಿದೆ ಆದರೆ ಸುಫಲಾ ಗೊಬ್ಬರದ ಅಗತ್ಯವಿದೆ. ಪ್ರತೀ ತಿಂಗಳಿಗೆ 1000 ಟನ್ ಗೊಬ್ಬರ ಅಗತ್ಯವಿದೆಯೆಂದು ಕೃಷಿ ಇಲಾಖೆ ಅಧಿಕಾರಿಗಳು ಹೇಳಿದರು. ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಭರತ್ ಲಾಲ್ ಮೀನಾ ಅವರು ನೀಡಿದರು. ಜಿಲ್ಲೆಯಲ್ಲಿ 122 ಕೆರೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, 75 ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ. 42 ಕಾಮಗಾರಿಗೆ ಪ್ರತಿಕ್ರಿಯೆ ಲಭ್ಯವಾಗಿಲ್ಲ ಎಂದು ಜಿಲ್ಲಾ ಪಂಚಾಯತ್ ಎಕ್ಸಿಕ್ಯುಟಿವ್ ಇಂಜಿನಿಯರ್ ಮಾಹಿತಿ ನೀಡಿದರು. ಕೆರೆ ಅಭಿವೃದ್ಧಿ ಪ್ರಕಿಯೆಯನ್ನು ಅಭಿವೃದ್ಧಿ ಪಡಿಸಲು ಹಾಗೂ ಟೆಂಡರ್ ಬಾರದೆ ಇರುವ ಕಾಮಗಾರಿಗಳನ್ನು ಪ್ಯಾಕೇಜ್ ರೂಪದಲ್ಲಿ ಆರಂಭಿಸಿ ಎಂಬ ಸಲಹೆಯನ್ನು ಕಾರ್ಯದರ್ಶಿಗಳು ನೀಡಿದರು.
ಕೇರಳ ಮಾದರಿ ಭತ್ತದಕೃಷಿಯನ್ನು ದಕ್ಷಿಣಕನ್ನಡ ಜಿಲ್ಲೆಯಲ್ಲಿ ಅಳವಡಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಮಹಾತ್ಮಗಾಂಧಿ ಗ್ರಾಮೀಣ ಖಾತರಿ ಯೋಜನೆಯಡಿ ಹಲವು ಕಾಮಗಾರಿಗಳನ್ನು ಅಳವಡಿಸಲು ಸೂಚಿಸಲಾಗಿದ್ದು,ಸದ್ಬಳಕೆ ಮಾಡಿ ಎಂದು ಸಲಹೆ ಮಾಡಿದರು.
ನಗರದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಪ್ರತ್ಯೇಕ ನಿವೇಶನ ನೀಡುವ ಬದಲು ಮೂಡಾದ ಬಳಿ ಇರುವ ಜಮೀನಿನಲ್ಲಿ ಪ್ರಥಮ ಹಂತದಲ್ಲಿ 10 ಎಕರೆ ಜಮೀನಿನಲ್ಲಿ ಬಹುಮಹಡಿ ಮನೆಗಳನ್ನು ಕಟ್ಟಿ ಉತ್ತಮ ಗುಣಮಟ್ಟದ ಅಗ್ಗದ ಮನೆಗಳನ್ನು ಆರ್ಥಿಕವಾಗಿ ಹಿಂದುಳಿದ ಜನಸಾಮಾನ್ಯರಿಗೆ ನೀಡಲು ಕ್ರಮಕೈಗೊಳ್ಳಿ ಎಂದು ಮೂಡಾ ಆಯುಕ್ತರಿಗೆ ಸಲಹೆ ಮಾಡಿದರು. ಈಗಾಗಲೇ ಇಂತಹ ಮಾದರಿಗಳನ್ನು ಬೆಂಗಳೂರಿನಲ್ಲಿ ಅನುಷ್ಠಾನಕ್ಕೆ ತರಲಾಗಿದೆ ಎಂದರು. ಎಲ್ಲಾ ಯೋಜನೆಗಳನ್ನು ಪ್ಯಾಕೇಜ್ ಮೂಲಕ ಸರ್ಕಾರವೇ ಮಾಡದೆ. ಆಸಕ್ತ ವ್ಯಕ್ತಿಗಳನ್ನು ಆರಿಸಿ ಎಂದ ಅವರು, ಹಸಿ ತ್ಯಾಜ್ಯ ವಿಲೇವಾರಿಯಂತಹ ಸಮಸ್ಯೆಗಳನ್ನು ನಿಭಾಯಿಸಲು ವೈಯಕ್ತಿಕ ಗುರಿ ನಿಗಧಿಪಡಿಸಿ ತರಕಾರಿ ಹಣ್ಣು ಮಾರುಕಟ್ಟೆಗಳಲ್ಲಿರುವ ಆಸಕ್ತ ವ್ಯಾಪಾರಿಗಳಿಗೆ ಕಸದಿಂದ ರಸ ಉತ್ಪಾದಿಸಲು ಪ್ರೋತ್ಸಾಹ ನೀಡಿ ಗೊಬ್ಬರ ತಯಾರಿಸಲು ಮಾಹಿತಿ ನೀಡಿ. ಸಣ್ಣ ಸಣ್ಣ ಇಂತಹ ಘಟಕಗಳು ತ್ಯಾಜ್ಯ ವಿಲೇಯಂತಹ ಗಂಭೀರ ಸಮಸ್ಯೆಯನ್ನು ಸರಳ ಗೊಳಿಸಲಿದೆ ಎಂದರು. ಬೆಂಗಳೂರಿನ ಮಲ್ಲೇಶ್ವರಂನ ಹೂವಿನ ಮಾರುಕಟ್ಟೆಯಲ್ಲಿ ಇಂತಹ ವೈಯಕ್ತಿಕ ಉತ್ತಮ ಮಾದರಿಗಳಿವೆ ಎಂದರು.

ನಗರಗಳಲ್ಲಿ ರಸ್ತೆಗಳನ್ನು ನೀಡುವಾಗ ವಾರ್ಡುವಾರು ರಸ್ತೆ ನಿರ್ಮಿಸದೆ ಹೊಸ ಸಂಪರ್ಕ ಕಲ್ಪಿಸುವಂತಹ ಸಮಗ್ರ ರಸ್ತೆಗಳನ್ನು ನಿರ್ಮಿಸಿ ಎಂದು ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಘನ ತ್ಯಾಜ್ಯ ವಿಲೇವಾರಿಗೆ ಮಹಾನಗರಪಾಲಿಕೆ ಕ್ರಮ ಕೈಗೊಂಡಿದೆ. ಶೀಘ್ರವೇ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು.ನಗರದಲ್ಲಿ ಮೀನು ಮಾರ್ಕೆಟ್, ವಧಾಗೃಹಗಳಿಗೆ ಜಾಗ ಲಭ್ಯವಿದ್ದು ಯೋಜನೆ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಪಾಲಿಕೆ ಜಂಟಿ ಆಯುಕ್ತರು ಸಭೆಗೆ ಮಾಹಿತಿ ನೀಡಿದರು. ನಗರದ ಪ್ರಮುಖ ಬೇಡಿಕೆಗಳಾದ ರೈಲ್ವೇ ಅಂಡರ್ ಪಾಸ್ ನಿರ್ಮಾಣ, ತುಂಬೆ ವೆಂಟೆಡ್ ಡ್ಯಾಮ್, ನಿವೇಶನ ರಹಿತರಿಗೆ ಮನೆ ನೀಡುವ ಬಗ್ಗೆ, ಎಂಡೋಸಲ್ಫಾನ್ ಪೀಡಿತರಿಗೆ ನೆರವು ನೀಡುವ, ಪಾಲನಾ ಕೇಂದ್ರ ನಿರ್ಮಾಣದ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಜಿಲ್ಲಾ ರಂಗಮಂದಿರ, ಅಂಬೇಡ್ಕರ್ ಭವನ ನಿರ್ಮಾಣ, ಕೊಯಿಲಾದಲ್ಲಿ ಪಶುವೈದ್ಯಕೀಯ ಕಾಲೇಜು ಸ್ಥಾಪನೆಯ ಬಗ್ಗೆಯೂ ಚರ್ಚೆಯಾಯಿತು. 08-09ನೇ ಸಾಲಿನಲ್ಲಿ ಬಾಕಿ ಇರುವ ಭಾಗ್ಯಲಕ್ಷ್ಮಿ ಬಾಂಡ್ ವಿತರಣೆಗೂ ಕ್ರಮಕೈಗೊಳ್ಳಲಾಗುವುದು ಎಂದು ಮೀನಾ ತಿಳಿಸಿದರು.
ಮಂಗಳೂರು ಮಲೇರಿಯಾ ತಡೆಗೆ ಸಮಗ್ರ ಹಾಗೂ ನಿರಂತರವಾಗಿರುವ ಯೋಜನೆಯನ್ನು ರೂಪಿಸಲು ಹಾಗೂ ಅದಕ್ಕೆ ಅಗತ್ಯ ಮಾನವಸಂಪನ್ಮೂಲ ಒದಗಿಸಲು ಸಭೆಗೆ ಉಸ್ತುವಾರಿ ಕಾರ್ಯದರ್ಶಿಗಳು ಮಾರ್ಗದರ್ಶನ ನೀಡಿದರು.
ತೋಟಗಾರಿಕಾ ಇಲಾಖೆಯ ಸಮಸ್ಯೆಗಳನ್ನು ಇಲಾಖಾಧಿಕಾರಿಗಳು ಉಸ್ತುವಾರಿ ಕಾರ್ಯದರ್ಶಿಗಳ ಗಮನಕ್ಕೆ ತಂದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ ಕೆ ಎನ್ ವಿಜಯಪ್ರಕಾಶ್ ಅವರನ್ನೊಳಗೊಂಡಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.