Wednesday, September 12, 2012

ಶಿಕ್ಷಣಕ್ಕೆ 12 ಕೋಟಿ ರೂ. ಬಿಡುಗಡೆ:ಸಿ.ಟಿ.ರವಿ

ಮಂಗಳೂರು, ಸೆಪ್ಟೆಂಬರ್.12: ದಕ್ಷಿಣಕನ್ನಡ ಜಿಲ್ಲೆಗೆ ಉನ್ನತ ಶಿಕಕ್ಷಣ ಇಲಾಖೆ ವತಿಯಿಂದ ಶಿಕ್ಷಣಕ್ಕಾಗಿ 12 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆಯೆಂದು ಉನ್ನತ ಶಿಕ್ಷಣ ಮತ್ತು ಉಸ್ತುವಾರಿ ಸಚಿವರಾದ ಸಿ.ಟಿ ರವಿಯವರು ತಿಳಿಸಿದರು.
ಅವರು ಇಂದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.
ಬಂಟ್ವಾಳ ತಾಲೂಕಿನ ಸಿದ್ದಕಟ್ಟೆ, ಮಂಗಳೂರಿನ ಕಾರ್ ಸ್ಟ್ರೀಟ್, ಬೆಳ್ತಂ ಗಡಿಯ ಪುಂಜಾಲ್ ಕಟ್ಟೆ, ಶಾಲೆ ಗಳಿಗೆ ತಲಾ 2ಕೋಟಿ ರೂಪಾಯಿ ಗಳಂತೆ ಒಟ್ಟು 6 ಕೋಟಿ ರೂ.ಗಳ ಅನುದಾನ ಬಿಡುಗಡೆ ಮಾಡ ಲಾಗಿದೆ. ಉಪ್ಪಿನಂಗಡಿ ಶಾಲೆಯ ಪ್ರಯೋಗಾಲಯಕ್ಕೆ ರೂ.30 ಲಕ್ಷ ಬಿಡುಗಡೆ ಮಾಡಲಾಗಿದೆ ಬಂಟ್ವಾಳ ,ಪುತ್ತೂರು ಮತ್ತು ವಿಟ್ಲದ ಶಾಲೆಗಳ ಹೆಚ್ಚುವರಿ ಕೊಠಡಿಗಳ ನಿರ್ಮಾಣಕ್ಕೆ ತಲಾ 1 ಕೋಟಿಯಂತೆ ಒಟ್ಟು 3ಕೋಟಿ ರೂ., ಸುಳ್ಯಕ್ಕೆ 1.50 ಲಕ್ಷ ,ಕಾವೂರಿಗೆ 50 ಲಕ್ಷ ಸೇರಿದಂತೆ ಒಟ್ಟು 5 ಕೋಟಿ ರೂ., ಬೆಟ್ಟಂಪಾಡಿ ,ಬೆಳ್ತಂಗಡಿ, ಹಳೆಯಂಗಡಿ, ಕಾವೂರು, ಬೆಳ್ಳಾರೆ, ಬಂಟ್ವಾಳ, ಸುಳ್ಯ , ವಾಮದಪದವು, ಪುತ್ತೂರು, ವಿಟ್ಲ, ಉಪ್ಪಿನಂಗಡಿಯ ಹೆಣ್ಮಕ್ಕಳ ಶೌಚಾಲಯಕ್ಕೆ ಒಟ್ಟು 70ಲಕ್ಷ ಬಿಡುಗಡೆ ಮಾಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
ರಾಜ್ಯ ಸರ್ಕಾರ ಅಡಿಕೆ ಕೊಳೆ ರೋಗಕ್ಕೆ ಪರಿಹಾರ ನೀಡಲು ಸಂಪೂರ್ಣವಾಗಿ ಯತ್ನಿಸಿದ್ದು, ಗೋರಕ್ ಸಿಂಗ್ ವರದಿಯನ್ನು ಸಲ್ಲಿಸಲಾಗಿದೆ. ರೋಗ ಪರಿಹಾರದ ಸಂಶೋಧನೆಗೆ ನೆರವು ನೀಡಿದ್ದು, ಕೇಂದ್ರದಿಂದಲೂ ನೆರವು ಕೋರಿದೆ. ರೈತಪರ ಕೃಷಿ ಬಜೆಟ್ ನ್ನು ಮಂಡಿಸಲಾಗಿದ್ದು, ರೈತರ ಸಮಸ್ಯೆಗಳಿಗೆ ಸ್ಪಂದಿಸಿದೆ, ಎಂಡೋ ಸಲ್ಫಾನ್ ಸಂತ್ರಸ್ತರಿಗೆ ಕೇರಳ ಮಾದರಿಯ ಪರಿಹಾರಕ್ಕೆ ಚಿಂತನೆ ನಡೆಸಲಾಗುತ್ತಿದೆ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.
ಇದಕ್ಕೂ ಮುಂಚೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪ್ರಗತಿಯನ್ನು ಪರಿಶೀಲಿಸಿದ ಸಚಿವರು ಕಾಲಮಿತಿಯೊಳಗೆ ಅಧಿಕಾರಿಗಳು ಪ್ರಗತಿ ಗುರಿ ಸಾಧಿಸಲು ಕ್ರಮ ಕೈಗೊಳ್ಳಲು ತಿಳಿಸಿದರು. ಕೆಆರ್ ಡಿ ಸಿಎಲ್ ನವರಿಗೆ ಸರಿಯಾಗಿ ಕೆಲಸ ಮಾಡಲು ಕಾಲಮಿತಿ ನಿಗದಿಪಡಿಸಿದರು.
ಸಂಸದ ನಳಿನ್ ಕುಮಾರ್ ಕಟೀಲ್ ರವರು ಸಭೆಯಲ್ಲಿ ಮಾತನಾಡಿ ಅಡಿಕೆ ಕೊಳೆ ರೋಗದಿಂದ 67 ಕೋಟಿ 83 ಲಕ್ಷ ರೂ.ಗಳ ನಷ್ಟವಾಗಿದ್ದು, ಈ ನಷ್ಟ ದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ತಿಳಿಸಿದರು. ಸ್ಥಳೀಯ ಅಡಿಕೆ ಬೆಳೆಗಾರರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ಜಿಲ್ಲಾಧಿಕಾರಿಗಳಾದ ಡಾ. ಎನ್.ಎಸ್ ಚನ್ನಪ್ಪ ಗೌಡ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ಎನ್.ವಿಜಯಪ್ರಕಾಶ್, ಪುತ್ತೂರು ವಿಧಾನಸಭಾ ಸದಸ್ಯರಾದ ಶ್ರೀಮತಿ ಮಲ್ಲಿಕಾ ಪ್ರಸಾದ್, ವಿಧಾನ ಪರಿಷತ್ ಸದಸ್ಯರಾದ ಮೋನಪ್ಪ ಭಂಡಾರಿ,ತಾಲೂಕು ಪಂಚಾಯತ್ ಅಧ್ಯಕ್ಷರಾದ ಶಂಭುಭಟ್, ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಪುಲಸ್ತ್ಯ ರೈ ಮುಂತಾದವರು ಉಪಸ್ಥಿತರಿದ್ದರು.