Wednesday, September 5, 2012

ಶಿಕ್ಷಕಿಯಾಗಬೇಕೆಂಬ ಅದಮ್ಯ ಹಂಬಲದಿಂದ ಶಿಕ್ಷಕಿಯಾದೆ: ಮುಕ್ತ ಪ್ರಭು

ಮಂಗಳೂರು,ಸೆಪ್ಟೆಂಬರ್.05 : ಸ್ವತಂತ್ರ ಭಾರತದಲ್ಲಿ ಸ್ವತಂತ್ರ ಪ್ರಜೆಗಳಾದ ನಾವು ಬಯಸಿದಂತೆ, ಹಂಬಲಿಸಿದಂತೆ ಆಗುವುದು ಬಹಳ ಕಡಿಮೆ. ಕಲಿಯುತ್ತಾ ಬೆಳೆಯುವಾಗ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಬದುಕು ರೂಪಿಸುವುದೇ ಅಧಿಕ. ಆದರೆ ಶಿಕ್ಷಕಿಯಾಗಬೇಕೆಂದೇ ಬಯಸಿ ಬಯಸಿ ಗುರಿ ಸಾಧಿಸಲು ಅವಿರತ ಶ್ರಮಿಸಿ, ಕಲಿತು ಶಿಕ್ಷಕಿಯಾಗಿ 34ವರ್ಷಗಳ ಸಾರ್ಥಕ ಶಿಕ್ಷಕ ಜೀವನವನ್ನು ನಿತ್ಯ ನೂತನವಾಗಿ ಅನುಭವಿಸಿ ನಿವೃತ್ತಿಯಾದ ಮುಕ್ತ ಪ್ರಭು ಜನಮೆಚ್ಚಿದ ಶಿಕ್ಷಕಿ ಪ್ರಶಸ್ತಿ ಗಳಿಸಿದವರು.
ಇಂದು ನಿವೃತ್ತ ಶಿಕ್ಷಕರಿಗೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ, ಮಂಗಳೂರು ಉತ್ತರ ವಲಯ ಶಿಕ್ಷಕರ ದಿನಾಚರಣೆ ಸಮಿತಿ ಮತ್ತು ಶಿಕ್ಷಕರ ಕಲ್ಯಾಣ ನಿಧಿ ಸಹಯೋಗದಲ್ಲಿ ಡಾ ಸರ್ವಪಲ್ಲಿ ರಾಧಾಕೃಷ್ಣನ್ ಅವರ 124ನೇ ಜನ್ಮದಿನೋತ್ಸವ ಹಾಗೂ ಶಿಕ್ಷಕರ ದಿನಾಚರಣೆಯ ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಲಾಗಿತ್ತು. ಶಿಕ್ಷಕರಿಗೆ ಸನ್ಮಾನ, ಕಳೆದ ಸಾಲಿನಲ್ಲಿ ನಿವೃತ್ತಿ ಹೊಂದಿದ ಶಿಕ್ಷಕರಿಗೆ ಗೌರವ ಸಲ್ಲಿಸುವ ಕಾರ್ಯಕ್ರಮ ನಡೆಯಿತು.
'ಸಂಪತ್ತು ಅಥವಾ ಖ್ಯಾತಿಯ ಭರವಸೆ ಇಲ್ಲದಿದ್ದರೂ, ಸಮಾಜಕ್ಕೆ ತನ್ನದೇ ಆದ ಕೊಡುಗೆ ನೀಡುವ ಶಿಕ್ಷಕ ವೃತ್ತಿ ಬಹುಸಂಖ್ಯಾತರಿಗೆ ಪ್ರಿಯ. ಇವರು ಮನುಕುಲದ ಗೌರವಕ್ಕೆ ಪಾತ್ರರಾಗುತ್ತಾರೆ. ನಾನು ಈ ಅಜ್ಞಾತ ಶಿಕ್ಷಕನ ಗುಣಗಾನ ಮಾಡುತ್ತೇನೆ. ದೊಡ್ಡ ಸೇನಾನಿಗಳು ಹೆಸರು ಗಳಿಸುತ್ತಾರೆ. ಆದರೆ ಅಜ್ಞಾತ ಸೈನಿಕ ಯುದ್ಧ ಗೆಲ್ಲುತ್ತಾನೆ ಎಂಬುದು ಹೆನ್ರಿ ವ್ಯಾನ್ ಡೈಕ್ ವ್ಯಾಖ್ಯಾನ.
ಇಂದು ನಗರದ ಎ ಬಿ ಶೆಟ್ಟಿ ಸಭಾಂಗಣ ಬಂಟ್ಸ್ ಹಾಸ್ಟೆಲ್ ನಲ್ಲಿ ನಡೆದ ಸಮಾರಂಭದಲ್ಲಿ 49 ಶಿಕ್ಷಕರನ್ನು ಗೌರವಿಸಲಾಯಿತು. ಇವರಲ್ಲೊಬ್ಬರು ಜೋಕಟ್ಟೆ ಸರಕಾರಿ ಪ್ರೌಢ ಶಾಲೆಯಿಂದ ನಿವೃತ್ತರಾದ ಶಿಕ್ಷಕಿ ಮುಕ್ತ ಪ್ರಭು. ಕುಂದಾಪುರ ತಾಲೂಕಿನ ಶಿರೂರು ಗ್ರಾಮದಲ್ಲಿ ಬಡ ಕುಟಂಬದಲ್ಲಿ ಶ್ರೀ ಕೃಷ್ಣದೇವರಾಯ ಪ್ರಭು ಹಾಗೂ ಶ್ರೀಮತಿ ಸತ್ಯಭಾಮ ಪ್ರಭು ಇವರ ಐದನೇ ಮಗಳಾಗಿ ಜನಿಸಿದ ಮುಕ್ತಾ ಪ್ರಭು ತಮ್ಮ ಪ್ರಾಥಮಿಕ ಹಾಗೂ ಪ್ರೌಢಶಾಲೆ ವಿದ್ಯಾಭ್ಯಾಸವನ್ನು ಶಿರೂರಿನಲ್ಲೇ ಮುಗಿಸಿದರು.
ಉತ್ತರ ಕನ್ನಡ ಜಿಲ್ಲೆಯ ಬಾಂಗೂರು ಸರಕಾರಿ ಪದವಿಪೂರ್ವ ಕಾಲೇಜಿನಿಂದ ಬಿಎ ಪದವಿ ಹಾಗೂ ಕರ್ನಾಟಕ ವಿಶ್ವವಿದ್ಯಾಲಯದ ಎಂ ಎ ಪದವಿ ಮತ್ತು ಕರ್ನಾಟಕ ಶಿಕ್ಷಣ ಮಹಾವಿದ್ಯಾಲಯದಿಂದ ಬಿ ಎಡ್ ಪದವಿ ಪಡೆದು ದಿನಾಂಕ 4.8.77ರಿಂದ 11.11.90ರ ತನಕ ಬಾಂಗೂರು ನಗರ ಪದವಿಪೂರ್ವ ಕಾಲೇಜಿನಲ್ಲಿ ಸೇವೆ ಸಲ್ಲಿಸಿದ್ದಾರೆ.
12.11.90ರಿಂದ 1994ರ ಕಾಲಘಟ್ಟದಲ್ಲಿ ಮಲೆನಾಡಿನ ಯಡೂರು ಹೊಸನಗರ ತಾಲೂಕಿನ ಶಾಲೆಯಲ್ಲಿ ಪದವೀಧರ ಸಹ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದು, 20.9,94ರಿಂದ 307.2010ರವರೆಗೆ ಮಂಗಳೂರಿನ ಚಿತ್ರಾಪುರ ಸರಕಾರಿ ಪ್ರೌಢಶಾಲೆಯಲ್ಲಿ ಸಲ್ಲಿಸಿದ ಸೇವೆ ಅವರನ್ನು ಜನಮೆಚ್ಚಿದ ಶಿಕ್ಷಕಿಯಾಗಿಸಿತು. ತಮ್ಮ ಸೇವಾವಧಿಯಲ್ಲಿ ಚಿತ್ರಾಪುರದ ಜನರ ಪ್ರೀತಿ, ಮಕ್ಕಳ ಪ್ರೀತಿಯನ್ನು ಮರೆಯಲು ಅಸಾಧ್ಯ ಎನ್ನುವ ಮುಕ್ತಾ ಅವರು, ಈ ಸಮಯದಲ್ಲಿ ಮನೆಯಲ್ಲಿ ಸೂಯರ್ಾಸ್ತವನ್ನು ಕಂಡದ್ದೇ ಇಲ್ಲವಂತೆ. ಬೆಳಗ್ಗೆ 8.30ಕ್ಕೆ ಶಾಲೆಗೆ ಆಗಮಿಸಿದರೆ ಸೂಯರ್ಾಸ್ತದ ಬಳಿಕವೇ ಮನೆಗೆ. ಸಮುದ್ರದ ಬದಿಯಲ್ಲೇ ಶಾಲೆ ಮತ್ತು ಮನೆಯಿದ್ದು ಈಗ ಮನೆಯಿಂದ ಸೂಯರ್ಾಸ್ತದ ಸವಿಯನ್ನು ಆನಂದಿಸುತ್ತಿದ್ದೇನೆ. ಶಿಕ್ಷಕಿಯಾಗಬೇಕೆಂಬ ತಮ್ಮ ಹಂಬಲ ಹಾಗೂ ಅದನ್ನು ಸಾಧಿಸಿದ ಹಾದಿಯನ್ನು ಅವರು ಹೇಳುವ ರೀತಿಯೇ ಕೇಳುಗರಲ್ಲಿ ರೋಮಾಂಚನ ಉಂಟು ಮಾಡುತ್ತದೆ. ಸಕರ್ಾರಿ ಶಾಲೆಗಳಲ್ಲಿ ಹಲವು ಇಲ್ಲಗಳ ನಡುವೆ ಮಕ್ಕಳ ಹಾಗೂ ಪೋಷಕರ ವಿಶ್ವಾಸದೊಂದಿಗೆ ಕರ್ತವ್ಯ ನಿರ್ವಹಿಸುವ ರೀತಿ ಅನುಭವಿಸಿದವರಿಗೇ ಗೊತ್ತು. ಆದರೆ ಇವರಿಗೆ ಆ 'ಇಲ್ಲ' ಗಳು ಕರ್ತವ್ಯ ವಿಮುಖರನಾಗಿಸಿಲ್ಲ. ಅತ್ಯಂತ ಪ್ರೀತಿಯಿಂದ ಎಲ್ಲರ ಸಹಕಾರದಿಂದ ಚಿತ್ರಾಪುರದಲ್ಲಿ ನಿರ್ವಹಿಸಿದ ಕೆಲಸವನ್ನು ಎದೆತಟ್ಟಿ ಹೇಳುತ್ತಾರೆ.
ಚಿತ್ರಾಪುರ ಶಾಲೆಗೆ ಸೇರಿದಾಗ ಕೇವಲ 56 ಮಕ್ಕಳಿದ್ದ ಪ್ರೌಢಶಾಲೆ ಅವರು ಶಾಲೆಯಿಂದ ವರ್ಗಾವಣೆ ಹೊಂದುವ ವೇಳೆಗೆ 130ಕ್ಕೆ ತಲುಪಿತ್ತು. ಒಂದು ಬಾರಿ ಶೇ. 100 ಮತ್ತು 85%ಕ್ಕಿಂತ ಕಡಿಮೆ ಫಲಿತಾಂಶ ಕಡಿಮೆ ಬರಲಿಲ್ಲ. ಮೊಗವೀರ ಮಕ್ಕಳು ಹೆಚ್ಚಿರುವ ಈ ಪ್ರದೇಶದಲ್ಲಿ ಅಲ್ಲಿನ ಮಕ್ಕಳು ನೀಡಿದ ಪ್ರೀತಿ, ಅಲ್ಲಿನ ಪೋಷಕರ ಬಳಿ ಯಾವುದೇ ಸಮಯಕ್ಕೆ ಹೋದರೂ 'ಟೀಚರ್ ಯಾಕೆ ಈ ಹೊತ್ತಿಗೆ ಬಂದಿರಿ ಎನ್ನದೆ ತನ್ನನ್ನು ಆದರಿಸುವ ರೀತಿ ಶಿಕ್ಷಕ ವೃತ್ತಿಯನ್ನು ನಾನು ಇನ್ನಷ್ಟು ಪ್ರೀತಿಸುವಂತೆ ಮಾಡಿತು ಎನ್ನುವುದನ್ನು ಅವರು ಮರೆಯಲಿಲ್ಲ, ಶಾಲಾ ಮಕ್ಕಳನ್ನು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವಿವಿಧೆಡೆಗಳಿಗೆ ಬಸ್ಸಿನಲ್ಲಿ ಕರೆದುಕೊಂಡು ಹೋಗುವಾಗ ಪ್ರಯಾಣಿಕರು ಮಕ್ಕಳ ಗಲಾಟೆ ತಾಳದೆ ಸಿಟ್ಟಿಗೆದ್ದಾಗ ಹಲವು ಬಾರಿ ತಾವೇ ಮಕ್ಕಳ ಪರವಾಗಿ ಕ್ಷಮೆ ಯಾಚಿಸಿದ್ದುಂಟು. ಆದರೆ ಮಕ್ಕಳ ಜೊತೆಗಿನ ಒಡನಾಟ ತನ್ನ ಜೀವನೋತ್ಸಾಹವನ್ನು ಹೆಚ್ಚಿಸಿತೇ ವಿನ: ಕಡಿಮೆ ಮಾಡಲಿಲ್ಲ. ಪ್ರತಿದಿನವೂ ತನಗೆ ಹೊಸದಿನವಾಗಿತ್ತು ಎನ್ನುತ್ತಾರೆ.
ಪ್ರೌಢಶಾಲಾ ಶಿಕ್ಷಣ ಮುಗಿಸಿ 10 ವರ್ಷ ಹೊಟ್ಟೆಪಾಡಿಗಾಗಿ ದುಡಿದ ಅವರಿಗೆ ಕಲಿಯಲು ಪ್ರೋತ್ಸಾಹವಿತ್ತವರು ಬೆಳಗಾವಿಯ ಒಬ್ಬರು ಮಹನೀಯರು. ಅವರಿಂದಾಗಿ ತನ್ನ ಶಿಕ್ಷಕಿಯಾಗುವ ಆಸೆ ಈಡೇರಿತು ಎನ್ನುತ್ತಾರೆ. ಇಂದಿನ ಕಾರ್ಯಕ್ರಮದಲ್ಲಿ ಇಂತಹ ಹಲವು ಶಿಕ್ಷಕರು ಸನ್ಮಾನಿಸಲ್ಪಟ್ಟರು.
ಅರ್ಥಪೂರ್ಣವಾಗಿ ನಡೆದ ಕಾರ್ಯಕ್ರಮವನ್ನು ವಿಧಾನ ಸಭಾ ಉಪಸಭಾಪತಿ ಎನ್ ಯೋಗೀಶ್ ಭಟ್ ಅವರು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಮೇಯರ್ ಗುಲ್ಜಾರ್ ಭಾನು, ವಿಶೇಷ ಅತಿಥಿಗಳಾಗಿ ಪಾಲಿಕೆ ಆಯುಕ್ತರಾದ ಡಾ ಹರೀಶ್ ಕುಮಾರ್. ಕೆ., ಪ್ರಧಾನ ಭಾಷಣಕಾರರಾಗಿ ಡಾ ವರದರಾಜ ಚಂದ್ರಗಿರಿ ಪಾಲ್ಗೊಂಡರು. ಅಧ್ಯಕ್ಷತೆಯನ್ನು ಶ್ರೀಮತಿ ಭವ್ಯ ಗಂಗಾಧರ್ ವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ವೈ ಶಿವರಾಮಯ್ಯ ಸ್ವಾಗತಿಸಿದರು. ಮಂಗಳೂರು ತಾಲೂಕು ಕಾರ್ಯನಿರ್ವಹಣಾಧಿಕಾರಿ ರೋಹಿದಾಸ್ ಅವರ ನೇತೃತ್ವದಲ್ಲಿ ಎಲ್ಲರ ಸಹಕಾರದೊಂದಿಗೆ ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಲ್ಪಟ್ಟಿತು.