Friday, September 14, 2012

'ಸೈಬರ್ ಅಪರಾಧದ ವ್ಯಾಪ್ತಿ ಅಗಾಧ'

ಮಂಗಳೂರು, ಸೆಪ್ಟೆಂಬರ್.14: ಕಾನೂನು ಪಾಲನೆ ಪೊಲೀಸ್ ಇಲಾಖೆಯ ಕರ್ತವ್ಯ; ಈ ಸಂದರ್ಭದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ದಮನ ಎಂಬ ಕೂಗುಗಳು ಕೇಳಿಬರುವುದು ಸಾಮಾನ್ಯ. ಮಾತು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಸಂವಿಧಾನಾತ್ಮಕ ಹಕ್ಕು 19 ಎ ಜೊತೆ ಮಾಹಿತಿ ತಂತ್ರಜ್ಞಾನ ಅಧಿನಿಯಮ 66 ಎ ಯನ್ನು ಓದಿದರೆ ಸೈಬರ್ ಕಾನೂನು ಪಾಲನೆ ಸುಲಭ ಎಂದು ಸಿಐಡಿಯ ಅಪರಾಧ ಪತ್ತೆ ವಿಭಾಗದ ಇನ್ಸ್ ಪೆಕ್ಟರ್ಎಂ ಡಿ ಶರತ್ ಹೇಳಿದರು.
ಇಂದು ನಗರದ ರೋಶನಿ ನಿಲಯದ ಸ್ಕೂಲ್ ಆಫ್ ಸೋಶಿಯಲ್ ವರ್ಕ್ಸ್ ನ ಅಪರಾಧ ಶಾಸ್ತ್ರ ಮತ್ತು ವಿಧಿ ವಿಜ್ಞಾನ ವಿಭಾಗವು ಪಶ್ಚಿಮ ವಲಯ ಪೊಲೀಸ್ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಸೈಬರ್ ಕ್ರೈಮ್ ಅಪರಾಧದ ಕುರಿತು ಸವಿವರ ಮಾಹಿತಿ ಹಾಗೂ ತಮ್ಮ ಅನುಭವಗಳನ್ನು ಕಾರ್ಯಾಗಾರದಲ್ಲಿ ಹಂಚಿಕೊಂಡ ಅವರು, ಮಾಹಿತಿ ಸೋರಿಕೆ ಹಾಗೂ ಮಾಹಿತಿ ಸಂಗ್ರಹ ಇಂದು ಅತಿ ಸುಲಭ. ಎಲ್ಲವೂ ಇಂದು ಇಂಟರ್ನೆಟ್ ನಲ್ಲಿ ಲಭ್ಯ ಎಂದು ಪ್ರಕರಣಗಳ ಸಹಿತ ವಿವರಿಸಿದರು.ಸೈಬರ್ ಕ್ರೈಮ್ ಸವಾಲುಗಳು ಮತ್ತು ಕಾನೂನಿನ ಕುರಿತು ಶಿವಮೊಗ್ಗದ ವಕೀಲರಾದ ಡಾ ಮನ್ ಮೋಹನ್ ಅವರು ವಿವರಿಸಿದರು.ಇದಕ್ಕೂ ಮುಂಚೆ ನಡೆದ ಉದ್ಘಾಟನಾ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಪಶ್ಚಿಮ ವಲಯ ಐಜಿಪಿ ಪ್ರತಾಪ್ ರೆಡ್ಡಿ, ಸೈಬರ್ ಅಪರಾಧದಿಂದ ಸಂಸ್ಥೆಗಳು, ಸಾರ್ವಜನಿಕವಾಗಿ ತೊಂದರೆಗೆ ಒಳಗಾಗುವುದಕ್ಕಿಂತಲೂ ವ್ಯಕ್ತಿಗತ ಅಪಾಯವೇ ಅಧಿಕವಾಗಿರುತ್ತದೆ ಎಂದು ಅಭಿಪ್ರಾಯಪಟ್ಟರು.
ದೇಶದಲ್ಲಿಂದು 100 ಕೋಟಿ ಮೊಬೈಲ್ ಸಂಪರ್ಕಗಳಿದ್ದು, ಇದರಲ್ಲಿ ಶೇ. 40ರಷ್ಟು ಮಂದಿ ಇಂಟರ್ನೆಟ್, ಎಸ್ಎಂಎಸ್ ಸೇರಿದಂತೆ ಮೌಲ್ಯಾಧಾರಿತ ಸೇವೆಗಳ ಬಳಕೆದಾರರು. ಈ ಸೇವೆಗಳು ಹಲವು ಸಂದರ್ಭಗಳಲ್ಲಿ ವ್ಯಕ್ತಿಯ ವಿಳಾಸದೊಂದಿಗೆ ಸಂಪೂರ್ಣ ಮಾಹಿತಿಯನ್ನು ಒಳಗೊಂಡಿರುತ್ತದೆ. ಇದು ಹಲವು ರೀತಿಯಲ್ಲಿ ವ್ಯಕ್ತಿಯಿಂದ ದುಷ್ಕಮರ್ಿಯ ಕೈ ಸೇರಿದ್ದಲ್ಲಿ ಯೋಜಿತ ಅಪರಾಧಕ್ಕೆ ಕಾರಣವಾಗುತ್ತದೆ. ವ್ಯಕ್ತಿಗತ ದಾಖಲೆಗಳು, ವಿಳಾಸ, ದೂ.ಸಂ. ಮೊದಲಾದ ಮಾಹಿತಿಗಳನ್ನು ಬಳಸಿಕೊಂಡು ಅಪರಾಧ ಎಸಗಲಾಗುತ್ತದೆ. ತಂತ್ರಜ್ಞಾನಗಳ ಅತಿಯಾದ ಹಾಗೂ ಅಜಾಗರೂಕ ಬಳಕೆಯು ಸೈಬರ್ ಅಪರಾಧಕ್ಕೆ ಕಾರಣವಾಗುತ್ತದೆ. ಈ ಕಾರಣದಿಂದ ತಂತ್ರಜ್ಞಾನಗಳ ಬಳಕೆಯ ಸಂದರ್ಭ ಅತ್ಯಂತ ಎಚ್ಚರಿಕೆ ವಹಿಸಬೇಕು ಎಂದವರು ಸಲಹೆ ಮಾಡಿದರು.
ಕೊಲೆ, ಸುಲಿಗೆ, ಕಳ್ಳತನದಂತಹ ಅಪರಾಧದ ಸಂದರ್ಭ ಅಪರಾಧಿಯನ್ನು ಪತ್ತೆಹಚ್ಚಲು ಕೆಲವೊಂದು ಕುರುಹುಗಳ ಮೂಲಕ ಸಾಧ್ಯವಾಗುತ್ತದೆ. ಆದರೆ ಸೈಬರ್ ಅಪರಾಧದ ಸಂದರ್ಭ ಸಾಕ್ಷಗಳ ಅಲಭ್ಯತೆಯಿಂದಾಗಿ ತನಿಖೆಗೆ ತೊಡಕಾಗುತ್ತದೆ. ಸೈಬರ್ ಅಪರಾಧಕ್ಕೆ ಸಂಬಂಧಿಸಿ ತಂತ್ರಜ್ಞರ ಸಹಾಯವನ್ನು ಪಡೆಯಬೇಕಾಗುತ್ತದೆ ಎಂದು ಐಜಿಪಿ ಪ್ರತಾಪ್ ರೆಡ್ಡಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೋಶನಿ ನಿಲಯ ಕಾಲೇಜಿನ ಪ್ರಾಂಶುಪಾಲರಾದ ಡಾ. ಸೋಫಿಯ ಎನ್. ಫೆರ್ನಾಂಡಿಸ್ ಮಾತನಾಡಿ, ತಂತ್ರಜ್ಞಾನ ಬಳಕೆ ಅನಿವಾರ್ಯವಾಗುತ್ತಿರುವ ಸಂದರ್ಭದಲ್ಲಿ ಸೈಬರ್ ಅಪರಾಧ ಕೂಡಾ ಗಣನೀಯ ಹಾಗೂ ಗಂಭೀರ ಪ್ರಮಾಣದಲ್ಲಿ ನಡೆಯುತ್ತಿರುವುದರಿಂದ ಇದನ್ನು ತಡೆಗಟ್ಟುವುದು ಅಗತ್ಯವಾಗಿದೆ ಎಂದರು.
ಕಾಲೇಜಿನ ನಿಕಟಪೂರ್ವ ಪ್ರಾಂಶುಪಾಲರಾದ ಡಾ. ಜೆಸಿಂತಾ ಡಿಸೋಜಾ, ರಿಜಿಸ್ಟ್ರಾರ್ ಡಾ.ಎಲ್.ಎನ್. ಭಟ್ ಉಪಸ್ಥಿತರಿದ್ದರು. ಅಪರಾಧ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಬಿ. ಅಶೋಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕಿ ಸರಿತಾ ಡಿಸೋಜಾ ಸ್ವಾಗತಿಸಿದರು.