Thursday, August 1, 2013

ಜಿಲ್ಲಾ ಉಸ್ತುವಾರಿ ಸಚಿವರಿಂದ ಕ್ಷೀರಭಾಗ್ಯಕ್ಕೆ ಚಾಲನೆ

ಮಂಗಳೂರು,ಆಗಸ್ಟ್.01 :- ಮಗುವಿನ ಸಮಗ್ರ ಬೆಳವಣಿಗೆಗೆ ಹಾಲು ಪೂರಕ. ಸಾಮಾಜಿಕ ನ್ಯಾಯ ಹಾಗೂ ಕುಪೋಷಣೆ ವಿರುದ್ಧ ನಮ್ಮ ಸರ್ಕಾರ ಸಮರ ಸಾರಿದ್ದು, ಸಮಗ್ರ ಪೌಷ್ಠಿಕಾಂಶಗಳನ್ನೊಳಗೊಂಡ ಹಾಲನ್ನು ಅಂಗನವಾಡಿ ಮತ್ತು ಶಾಲಾ ಮಕ್ಕಳಿಗೆ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇದಕ್ಕೆ ಪೂರಕ ಪ್ರೇರಣೆ ನೀಡಿದವರಿಗೆ ತಾನು ಕೃತಜ್ಞ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಸಚಿವರಾದ  ಬಿ. ರಮಾನಾಥ ರೈ ಅವರು ಹೇಳಿದರು.
      ಅವರಿಂದು ನಗರದ ಗಾಂಧಿ ನಗರ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ, ಅಕ್ಷರ ದಾಸೋಹ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಸಹಯೋಗದೊಂದಿಗೆ ಅಂಗನವಾಡಿ ಮತ್ತು ಶಾಲಾ ಮಕ್ಕಳಿಗೆ ಹಾಲು ವಿತರಣೆ ಸಮಾರಂಭ ಉದ್ಘಾಟಿಸಿ ಮಾತನಾಡುತ್ತಿದ್ದರು.
   ಅಪೌಷ್ಟಿಕತೆ ನಿವಾರಣೆ ಹಾಗೂ ದುರ್ಬಲವರ್ಗದವರಿಗೆ ಸಾಮಾಜಿಕ ನ್ಯಾಯ ಒದಗಿಸಿಕೊಡುವ ದೃಷ್ಟಿಯಿಂದ ಆರಂಭಿಸಲಾದ ಕಾರ್ಯಕ್ರಮದಿಂದ ಬಡ ಮಕ್ಕಳು ಬುದ್ದಿವಂತರಾಗಿ, ಶಕ್ತಿವಂತರಾಗಿ ಅರಳಲು ಸಾಧ್ಯ ಎಂದರು. ಅನ್ನ ದಾಸೋಹದೊಂದಿಗೆ ಕ್ಷೀರ ದಾಸೋಹ ಮಕ್ಕಳ ಬಲವರ್ಧನೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ದೃಢ ಸಂಕಲ್ಪ ಎಂದರು.
ಯೋಜನೆಗಳು ಆರಂಭದ ಅನುಷ್ಠಾನ ಹಂತದಲ್ಲಿ ಕೆಲವೊಂದು ಸಮಸ್ಯೆಗಳು ಉದ್ಬವವಾಗುವುದು ಸಹಜ; ಆದರೆ ನಮ್ಮ ಇಲಾಖೆಗಳಿಗೆ ಈ ಎಲ್ಲ ಸಮಸ್ಯೆಗಳನ್ನು ನಿವಾರಿಸಿ ನಿಲ್ಲಲು ಸಾಧ್ಯವಿದೆ ಎಂದರು. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು. ಯೋಜನೆಗಳ ಸಾಧಕಗಳನ್ನು ಚಿಂತಿಸಲಿ ಎಂದ ಅವರು, ಸಮಾಜ ನಿರ್ಮಾಣದಲ್ಲಿ ಶಿಕ್ಷಕರ, ಅಂಗನವಾಡಿ ಕಾರ್ಯಕರ್ತೆಯರ ಹೊಣೆ ಹಾಗೂ ಪಾತ್ರವನ್ನು ವಿಶ್ಲೇಷಿಸಿದರು.
ಸಮಾಜದಲ್ಲಿ ಅರ್ಹರಿಗೆ ಹಾಲು, ಅನ್ನ ನೀಡುವುದು ಒಂದು ಸದವಕಾಶ. ನಮ್ಮ ಜಿಲ್ಲೆಯು ಶೈಕ್ಷಣಿಕ ಪ್ರಗತಿಯನ್ನು ದಾಖಲಿಸಿದ್ದು, ಬುದ್ದಿವಂತರ ಜಿಲ್ಲೆಯೆಂಬ ಹೆಗ್ಗಳಿಕೆ ಪಡೆದಿದೆ. ಅಂಗನವಾಡಿ ಕಾರ್ಯಕತರ್ೆಯರು ನೀಡುವ ಸಾಮಾಜಿಕ ಕೊಡುಗೆಯ ಬಗ್ಗೆ ನಮಗೆ ಹೆಮ್ಮೆಯಿದೆ ಎಂದು ಸಚಿವರು ಪ್ರಶಂಸಿಸಿದರು. ಮಕ್ಕಳ ಸಮಗ್ರ ಬೆಳವಣಿಗೆಯಲ್ಲಿ ಶಿಕ್ಷಣ ಸಂಸ್ಥೆಗಳ ಕೊಡುಗೆ ಅಪಾರ ಎಂದರು.
ನಮ್ಮ ಬಂಟ್ವಾಳ ತಾಲೂಕಿನಲ್ಲಿ ಸಮಗ್ರ ಬಾಲವಿಕಾಸ ಯೋಜನೆಯಡಿ ಹೆಚ್ಚಿನ ಸಂಖ್ಯೆಯ ಅಂಗನ ವಾಡಿಗಳು ಅಸ್ತಿತ್ವದಲ್ಲಿವೆ. ದೇಶದಲ್ಲೆ ಎರಡನೇ ಸ್ಥಾನ ಬಂಟ್ವಾಳಕ್ಕೆ ಎಂದರು. ಶಿಶು ಮರಣ ಸಂಖ್ಯೆ, ತಾಯಿ ಮರಣ ಸಂಖ್ಯೆ ಜಿಲ್ಲೆಯಲ್ಲಿ ಕಡಿಮೆಯಿದೆ.
ರಾಜ್ಯದ ಅಂಗನವಾಡಿ ಮತ್ತು ಶಾಲಾ ಮಕ್ಕಳ ಹಾಲು ವಿತರಣಾ ಕಾರ್ಯಕ್ರಮ ಎಲ್ಲ ಅಂಗನವಾಡಿ, ಸಕರ್ಾರಿ, ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮಕ್ಕಳಿಗೆ ವಾರಕ್ಕೆ ಮೂರು ದಿನ ಉಚಿತ ಹಾಲು ನೀಡುವ ಯೋಜನೆ ಹಮ್ಮಿಕೊಂಡಿದೆ.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ ಅವರು ಮಾತನಾಡಿ, ಸರ್ಕಾರದ ಯೋಜನೆಗೆ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಸಂಪೂರ್ಣ ಸಹಕಾರ ನೀಡಲಿದ್ದು, ಹಾಲಿನ ಪುಡಿ ವಿತರಣಾ ಜವಾಬ್ದಾರಿಯನ್ನು ಹೊಂದಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2488 ಶಾಲೆಗಳ 316845 ಮಕ್ಕಳಿಗೆ 47,526 ಲೀಟರ್ ಹಾಲು ಸರಬರಾಜು ಮಾಡಲು ಪ್ರತಿನಿತ್ಯ 5,795 ಕೆ ಜಿ ಕೆನೆಭರಿತ ಹಾಲಿನ ಪುಡಿ ನೀಡುತ್ತಿದೆ. ಅಲ್ಲದೆ 3,248 ಅಂಗನವಾಡಿ ಕೇಂದ್ರಗಳಲ್ಲಿರುವ 1,42,981 ಮಕ್ಕಳಿಗೆ 21,447 ಲೀಟರ್ ಹಾಲು ತಯಾರಿಸಲು ಪ್ರತಿನಿತ್ಯ 2041 ಕೆ ಜಿ ಕೆನೆರಹಿತ ಹಾಲಿನ ಪುಡಿಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ (ಸಿಡಿಪಿಒ) ಕಚೇರಿಗೆ ತಲುಪಿಸುತ್ತಿದೆ.
ಹಾಲಿನ ಪುಡಿಯಿಂದ ಹಾಲನ್ನು ತಯಾರಿಸುವ ಕ್ರಮ ತಿಳಿಸಲು ಪ್ರಚಾರ ಸಾಮಗ್ರಿಗಳನ್ನು ಉಚಿತವಾಗಿ ಎಲ್ಲ ಅಂಗನವಾಡಿ ಮತ್ತು ಶಾಲೆಗಳಿಗೆ ನೀಡುತ್ತಿದೆ ಎಂದು ಹೇಳಿದರು. ಒಂದು ಕಾಲದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಾಲು ಪೂರೈಸಲು ಮಹಾರಾಷ್ಟ್ರದಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು. ಆದರೆ ಇಂದು ಜಿಲ್ಲೆಯ ಸ್ವಾವಲಂಬಿಯಾಗಿದೆ.
ಸಮಾರಂಭದಲ್ಲಿ ಜಿಲ್ಲಾಧಿಕಾರಿ ಎನ್ ಪ್ರಕಾಶ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಟಿ.ಎನ್. ಶಶಿಧರ, ಕಾರ್ಪೋರೇಟರ್ ಶಶಿಧರ್ ಹೆಗ್ಡೆ ಮತ್ತಿತರು  ಉಪಸ್ಥಿತರಿದ್ದರು.