Monday, August 26, 2013

ಗ್ರಾಮೀಣ ಪ್ರದೇಶಗಳಲ್ಲಿ ಪಿಂಚಣಿ ಅದಾಲತ್ -ರಮಾನಾಥ ರೈ

ಮಂಗಳೂರು ಆಗಸ್ಟ್ 26:- ಸಾಮಾಜಿಕ ಭದ್ರತಾ ಯೊಜನೆಗಳಲ್ಲಿ ಮಾಸಾಶನ ಪಡೆಯುತ್ತಿರುವ ನಿರ್ಗತಿಕರು, ಬಡವರಿಗೆ ಕ್ರಮಬದ್ಧವಾಗಿ ಪ್ರತೀ ತಿಂಗಳು ಮಾಸಾಶನ-ಪಿಂಚಣಿ ದೊರಕಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಸರಕಾರ ಎಲ್ಲಾ ಹೋಬಳಿ ಮಟ್ಟದಲ್ಲಿ ಪಿಂಚಣಿ ಅದಾಲತ್ ಗಳನ್ನು ನಡೆಸಲು ಉಪ ವಿಭಾಗಾಧಿಕಾರಿಗಳಿಗೆ ಸೂಕ್ತ ನಿರ್ದೇಶನಗಳನ್ನು ನೀಡಲಾಗಿದೆ ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಬಿ.ರಮಾನಾಥ ರೈ ಅವರು ತಿಳಿಸಿದ್ದಾರೆ.
ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಿದ್ದ ಕರ್ನಾಟಕ ಸರಕಾರದ ಸಾಧನೆಗಳನ್ನು ಬಿಂಬಿಸುವ  ``ನೂರು ದಿನಗಳು ನೂರಾರು ನಿರ್ಣಯಗಳು'' ಹೊತ್ತಗೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಕರ್ನಾಟಕ ಸರಕಾರ ಜಾರಿಗೆ ತಂದಿರುವ ಅನ್ನಭಾಗ್ಯ ಯೋಜನೆಯಡಿ ದಕ್ಷಿಣಕನ್ನಡ ಜಿಲ್ಲೆಯಲ್ಲಿ  511 ನ್ಯಾಯಬೆಲೆ ಅಂಗಡಿಗಳ ಮೂಲಕ 1.79 ಲಕ್ಷ  ಬಿಪಿಎಲ್ ಕಾಡರ್್ದಾರರು ಹಾಗೂ 21079 ಅಂತ್ಯೋದಯ ಕಾರ್ಡ್ ದಾರರು ರೂ.1/-ರ ದರದಲ್ಲಿ ಒಂದು ಕೆಜಿ ಅಕ್ಕಿಯಂತೆ 30 ಕೆಜಿ ಅಕ್ಕಿ ಪಡೆಯುತ್ತಿದ್ದಾರೆ ಎಂದ ಸಚಿವರು, ಕಳೆದ ನೂರು ದಿನಗಳಲ್ಲಿ ಮಾನ್ಯ ಮುಖ್ಯ ಮಂತ್ರಿಗಳ ನೇತೃತ್ವದಲ್ಲಿ ಮಕ್ಕಳಿಗೆ ಪೌಷ್ಠಿಕ ಆಹಾರ ಒದಗಿಸುವ ಕ್ಷೀರಭಾಗ್ಯ, ಪರಿಶಿಷ್ಟರು ಹಿಂದುಳಿದ ವರ್ಗಗಳ ಹಾಗೂ ಅಲ್ಪ ಸಂಖ್ಯಾತರ ಸಾಲ ಮನ್ನಾ, ಭಾಗ್ಯಜ್ಯೋತಿ ಕುಟೀರಗಳು ಬಳಸಿದ್ದ ಹೆಚ್ಚುವರಿ ವಿದ್ಯುತ್ ಬಿಲ್ ಪಾವತಿಸದೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದವರ ಶುಲ್ಕ ಮನ್ನಾ ಮಾಡಿ ಮರುಸಂಪರ್ಕ ಕಲ್ಪಿಸಿದ್ದು, ಕೃಷಿ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ನಿಗಧಿಗೆ  ಕೃಷಿ ಆಯೋಗ ರಚನೆ, ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಆವರ್ತ ನಿಧಿಯನ್ನು ರೂ.5000/-ಗಳಿಂದ ರೂ.20,000ಗೆ ಏರಿಸಿದ್ದು, ಬಡವರಿಗೆ  ವಸತಿ ಯೋಜನೆಯಲ್ಲಿ  ನೀಡಲಾಗುತ್ತಿದ್ದ ರೂ.75,000/- ಅನುದಾನದ ಬದಲಾಗಿ ರೂ.1.20 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಹೀಗೆ ಸರಕಾರ ಜನತೆಗೆ ನೀಡಿದ್ದ 160 ಭರವಸೆಗಳಲ್ಲಿ ಕೇವಲ 100 ದಿನಗಳಲ್ಲೇ 60 ಭರವಸೆಗಳನ್ನು ಈಡೇರಿಸಿ ಜನಪರ ಸರಕಾರವಾಗಿದೆ ಎಂದು ಸಚಿವರು ತಿಳಿಸಿದರು. ಮನಸ್ವಿನಿ-40 ವರ್ಷ ಮೇಲ್ಪಟ್ಟ ವಿಚ್ಚೇದಿತ ಮಹಿಳೆ ಅಥವಾ ವಿಧವೆಯರಿಗೆ ರೂ.500/- ನೀಡುವ ಮಾಸಾಶನ ಹಾಗೂ (ಮಂಗಳಮುಖಿಯರು) ಲೈಂಗಿಕ ಅಲ್ಪಸಂಖ್ಯಾತರಿಗೆ ಮಾನವೀಯತೆಯಿಂದ ನೀಡುವ ಮಾಸಾಶನ ಮೈತ್ರಿ ಯೋಜನೆಗಳನ್ನು ಸರಕಾರ ಹೊಸದಾಗಿ ಜಾರಿಗೆ ತಂದಿದೆ ಎಂದು ಸಚಿವರು ತಿಳಿಸಿದರು.
ಸಮಾರಂಭದಲ್ಲಿ ಜಿಲ್ಲಾಧಿಕಾರಿ ಎನ್.ಪ್ರಕಾಶ್, ಮಂಗಳೂರು ಮಹಾನಗರಪಾಲಿಕೆ ಆಯುಕ್ತ ಅಜಿತ್ ಕುಮಾರ್ ಹೆಗ್ಡೆ ,ಅಪರ ಜಿಲ್ಲಾಧಿಕಾರಿ ದಯಾನಂದ ಹಾಜರಿದ್ದರು.