Tuesday, August 13, 2013

20 ದಿನದೊಳಗೆ ಬೆಳೆ ಹಾನಿ ವರದಿ ನೀಡಿ: ಕೊರಗಪ್ಪ ನಾಯ್ಕ

ಮಂಗಳೂರು,ಆಗಸ್ಟ್.13:- ಕಳೆದ ಮೂರು ತಿಂಗಳಿಂದ ಎಡೆಬಿಡದೆ ಸುರಿದ ಮಳೆಯಿಂದ ಜಿಲ್ಲೆಯಲ್ಲಿ ಅಡಿಕೆ ಬೆಳೆ ಸಂಪೂರ್ಣ ಕೊಳೆರೋಗಕ್ಕೆ ತುತ್ತಾಗಿದ್ದು, ಅಡಿಕೆ ಮತ್ತು ಭತ್ತದ ಬೆಳೆ ಹಾನಿಗೆ ಸಂಬಂಧಿಸಿದಂತೆ ಸಮಗ್ರ ವರದಿಯನ್ನು 20 ದಿನಗಳೊಳಗಾಗಿ ನೀಡುವಂತೆ ಕೃಷಿ ಮತ್ತು ತೋಟಗಾರಿಕೆ ಇಲಾಖಾ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ  ಕೆ .ಕೊರಗಪ್ಪ ನಾಯ್ಕ್ ಅವರು ಸೂಚಿಸಿದರು.
ದ.ಕ. ಜಿಲ್ಲಾ ಪಂಚಾಯತ್  ನೇತ್ರಾವತಿ ಸಭಾಂಗಣದಲ್ಲಿ ಇಂದು ಅಧ್ಯಕ್ಷ ಕೊರಗಪ್ಪ ನಾಯ್ಕ್ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಪಂಚಾಯತ್ನ 13ನೆ ಸಾಮಾನ್ಯ ಸಭೆಯಲ್ಲಿ ಅಡಿಕೆ ಕೊಳೆರೋಗದಿಂದ ಜಿಲ್ಲೆಯ ರೈತರು ಕಂಗೆಟ್ಟಿರುವ ಬಗ್ಗೆ ಸದಸ್ಯರು ಸಭಾಧ್ಯಕ್ಷರ ಗಮನ ಸೆಳೆದರು. ಅಡಿಕೆಯ ಫಸಲು ಮರದ ಮೇಲಿರದೆ ಅಡಿಕೆ ಗಿಡದ ಬುಡದಲ್ಲಿ ಹೆಕ್ಕುವ ಪರಿಸ್ಥಿತಿ ಬಂದಿದೆ. ಪರಿಹಾರ ನೀಡಲು ಕೇಂದ್ರ ಹಾಗೂ ರಾಜ್ಯ ಸಕರ್ಾರಕ್ಕೆ ಸಮೀಕ್ಷೆ ನಡೆಸಿ ಸಮಗ್ರ ವರದಿ ಸಲ್ಲಿಸಬೇಕು ಎಂದು ಸದಸ್ಯರು ಒತ್ತಾಯಿಸಿದರು.
ಕೃಷಿ ಸಂಶೋಧನಾ ಕೇಂದ್ರಗಳ ತಜ್ಞರ ಸಲಹೆ ರೈತರಿಗೆ ಈ ವೇಳೆಯಲ್ಲಿ ಅಗತ್ಯವಿದೆ. ಈ ನಡುವೆ ಬಯೋಫೈಟ್/ಬಯೊಪಾಟ್/ ಬಯೋಫಿಟ್ಟ್/ ಬಯೋಕ್ಯೂರ್ ಬಳಕೆಯ ಬಗ್ಗೆಯೂ ಹಲವು ಗೊಂದಲಗಳಿವೆ. ಈ ಬಗ್ಗೆ ತನಿಖೆ ನಡೆಸಿ ವರದಿ ನೀಡಲು ಕೃಷಿ ಹಾಗೂ ತೋಟಗಾರಿಕಾ ಇಲಾಖಾಧಿಕಾರಿಗಳಿಗೆ ಅಧ್ಯಕ್ಷರು ಸೂಚಿಸಿದರು.      ಕೃಷಿಕರಿಗೆ ನೆರವು ಹಾಗೂ ಸಮಗ್ರ ಮಾಹಿತಿ ಬೇಕಿದೆ. ಈಗಾಗಲೇ ಸಹಕಾರ ಸಂಘಗಳಿಂದ ರೈತರು ಸಾಲ ಪಡೆದಿದ್ದು, ಬಡ್ಡಿ ಮನ್ನಾ ಹಾಗೂ ಸಾಲ ಪಾವತಿಸಲು ರೈತರಿಗೆ ಕಾಲಾವಕಾಶ ಕೋರಿ ಜಿಲ್ಲಾ ಪಂಚಾಯತ್ನಲ್ಲಿ ನಿರ್ಣಯ ಮಾಡಿ ಸರ್ಕಾರಕ್ಕೆ, ಸಚಿವರುಗಳಿಗೆ ವರದಿ ನೀಡುವ ಬಗ್ಗೆ ಜಿಲ್ಲ ಪಂಚಾಯತ್ನಲ್ಲಿ ನಿರ್ಧರಿಸಲಾಯಿತು.
ರೈತರ ಹೆಸರು, ಎಕರೆ ಮತ್ತು ಎಷ್ಟು ಶೇಕಡ ಮಾದರಿ ವರದಿ ತಯಾರಿಸಿ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ತುಳಸಿ ಮದ್ದಿನೇನಿ ಅಧಿಕಾರಿಗಳಿಗೆ ಸೂಚಿಸಿದರು.
ಬಜಪೆ ಕಿನ್ನಿಗೋಳಿ ಸೊಸೈಟಿಗಳಲ್ಲಿ ರೈತರಿಗೆ ಅಗತ್ಯ ಗೊಬ್ಬರ ಲಭ್ಯವಿಲ್ಲ ಎಂಬ ದೂರಿಗೆ ಸ್ಪಂದಿಸಿದ ಸಿಇಒ ಅವರು, ರೈತರಿಗೆ ರಸಗೊಬ್ಬರ ಲಭ್ಯವಾಗಿಸಿ ಎಂದು ರಸ ಗೊಬ್ಬರ ಸರಬರಾಜು ಕಂಪೆನಿಗೆ ಹಾಗೂ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಕಾಮಗಾರಿಗಳನ್ನು ನಿರ್ಮಿತಿ ಕೇಂದ್ರಕ್ಕೆ ನೀಡುವ ಬಗ್ಗೆ ಸದಸ್ಯರ ಅಸಮಾಧಾನವನ್ನು ಗಮನಿಸಿದ ಸಿಇಒ ಅವರು 15 ದಿನಗಳೊಳಗೆ ನಿರ್ಮಿತಿ ಕೇಂದ್ರಕ್ಕೆ ನೀಡಿದ ಕಾಮಗಾರಿಗಳ ಪ್ರಗತಿಪರಿಶೀಲನೆ ನಡೆಸುವುದಾಗಿ ಹೇಳಿದರು. ಆದರೆ ಸದಸ್ಯರು ಅಂಗನವಾಡಿ ಕಾಮಗಾರಿಗಳನ್ನು ನಿರ್ಮಿತಿ ಕೇಂದ್ರದಿಂದ ಹಿಂಪಡೆದು ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗಕ್ಕೆ ನೀಡಬೇಕೆಂದು ಒತ್ತಾಯಿಸಿದರು.
ಬಜಪೆ ಗ್ರಾಮಪಂಚಾಯತ್ ವ್ಯಾಪ್ತಿಯ ತೊಟ್ಟಿಲಗುರಿಯಲ್ಲಿ ನಿರಾಶ್ರಿತರಾದವರಿಗೆ ನ್ಯಾಯಒದಗಿಸುವ ಬಗ್ಗೆಯೂ ಸಭೆ ನಿರ್ಧರಿಸಿತು.  
ಬಸವ ವಸತಿ ಯೋಜನೆ ಸಂಬಂಧ ನಡೆದ ಸವಿವರ ಚರ್ಚೆಗೆ ಉತ್ತರಿಸಿದ ಸಿಇಒ ಶ್ರೀಮತಿ ತುಳಸಿ ಮದ್ದಿನೇನಿ, ವಸತಿ ಯೋಜನೆಗೆ ಸಂಬಂಧಿಸಿ 2009-10ನೆ ಸಾಲಿನ ಬಾಕಿ ಪ್ರಕರಣಗಳನ್ನು ಪೂರ್ಣಗೊಳಿಸಲು ಅಥವಾ ಅಂತಿಮಗೊಳಿಸಲು ನಿದರ್ೇಶನ ನೀಡಲಾಗಿದೆ. ಈ ಬಗ್ಗೆ ಪ್ರತಿವಾರ ಪ್ರಗತಿ ಪರಿಶೀಲನೆಗೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಒಟ್ಟಿನಲ್ಲಿ ವಸತಿ ಯೋಜನೆಗೆ ಸಂಬಂಧಿಸಿದ ಎಲ್ಲಾ ರೀತಿಯ ಗೊಂದಲಗಳನ್ನು ಮುಂದಿನ ಎರಡು ಮೂರು ತಿಂಗಳಲ್ಲಿ ನಿವಾರಿಸುವುದಾಗಿ ಹೇಳಿದರು.
ಡೆಂಗ್ಯು ಬಗ್ಗೆ ನಡೆದ ಚರ್ಚೆಗೆ ಉತ್ತರಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಶಿವಕುಮಾರ್, ದ.ಕ. ಜಿಲ್ಲೆಯಲ್ಲಿ ಡೆಂಗ್ಯುಗೆ ಐದು ಮಂದಿ ಬಲಿಯಾಗಿದ್ದು, 242 ಮಂದಿ ಶಂಕಿತ ಡೆಂಗ್ಯು ರೋಗಕ್ಕೆ ಒಳಗಾಗಿದ್ದರು ಎಂದು ತಿಳಿಸಿದರು. ಮೃತ ಕುಟುಂಬಗಳಿಗೆ ಪರಿಹಾರಕ್ಕಾಗಿ ಜುಲೈ 17ರಂದು ಮುಖ್ಯಮಂತ್ರಿ ಪರಿಹಾರ ನಿಧಿಗೆ ಪತ್ರ ಬರೆಯಲಾಗಿದೆ ಎಂದರು.
ಖಾಸಗಿ ಆಸ್ಪತ್ರೆಗಳಲ್ಲಿ ಡೆಂಗ್ಯುನಿಂದ ಮೃತಪಟ್ಟವರು ಹಾಗೂ ಚಿಕಿತ್ಸೆ ಪಡೆದವರ ಬಗ್ಗೆ ಜಿಲ್ಲಾ ಪಂಚಾಯತ್ನಲ್ಲಿ ಯಾವುದೇ ಮಾಹಿತಿ ಇಲ್ಲ ಎಂದು ಸದಸ್ಯರು ಸಭೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದರು. ಮಾತ್ರವಲ್ಲದೆ, ಪ್ರತಿ ತಾಲೂಕಿನ ಆರೋಗ್ಯ ಕೇಂದ್ರಗಳಲ್ಲೂ ಎಲಿಸಾ ಪರೀಕ್ಷಾ ವ್ಯವಸ್ಥೆಗೆ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಸಭೆಯಲ್ಲಿ ವ್ಯಕ್ತವಾಯಿತು.
ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ವಿಳಂಬವಾಗುತ್ತಿರುವ ಬಗ್ಗೆ ತೀವ್ರ ಅಸಮಾಧಾನ ಸಭೆಯಲ್ಲಿ ವ್ಯಕ್ತವಾದ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ 20 ಯೋಜನೆಗಳಲ್ಲಿ 14 ಕುಡಿಯುವ ನೀರಿನ ಯೋಜನೆಗಳು ಪ್ರಗತಿಯಲ್ಲಿವೆ. ಕಿನ್ನಿಗೋಳಿ ಕುಡಿಯುವ  ನೀರಿನ ಯೋಜನೆಯನ್ನು ತಾವು ಭೇಟಿ ನೀಡಿ ಪರಿಶೀಲಿಸಿರುವುದಾಗಿ ಹೇಳಿದರಲ್ಲದೆ, ಈ ಯೋಜನೆಯಡಿ ಡಿಸೆಂಬರ್ ನಿಂದ ನೀರು ಪೂರೈಕೆ ಮಾಡಲಾಗುವುದು ಎಂದು ಹೇಳಿದರು.
ವೆನ್ಲಾಕ್ ಆಸ್ಪತ್ರೆ ಸೇರಿದಂತೆ ಸರಕಾರಿ ಆಸ್ಪತ್ರೆಗಳಲ್ಲಿ ಇದಕ್ಕುತ್ತರಿಸಿದ ಡಾ. ಶಿವಕುಮಾರ್, ತುರ್ತು ಸಂದರ್ಭಕ್ಕೆ ಮುಖ್ಯವಾಗಿ ಹಾವು ಹಾಗೂ ಹುಚ್ಚುನಾಯಿ ಕಡಿತದ ಲಸಿಕೆಗಳು ಪ್ರಾಥಮಿಕ ಆರೋಗ್ಯ ಕೇಂದ್ರಗಳಲಿ ಲಸಿಕೆಗಳು ಸದಾ ಲಭ್ಯವಿರುವಂತೆ ಆದೇಶ ನೀಡಲಾಗಿದೆ. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ರಿತೇಶ್ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಆಶಾ ತಿಮ್ಮಪ್ಪ ಗೌಡ, ಜಯಶ್ರೀ, ಪಕೀರ ಉಪಸ್ಥಿತರಿದ್ದರು.