Wednesday, August 14, 2013

ಕೃಷಿಕರಿಗೆ ಸೌಲಭ್ಯ ತಲುಪಿಸಿ: ಕೊರಗಪ್ಪ ನಾಯಕ್

ಮಂಗಳೂರು ಆಗಸ್ಟ್ 14 :- ಜಿಲ್ಲೆಯಲ್ಲಿ ಒಟ್ಟು 813 ಕಿಂಡಿ ಅಣೆಕಟ್ಟುಗಳಿದ್ದು 230 ಕಿಂಡಿ ಅಣೆಕಟ್ಟುಗಳು ದುರಸ್ತಿಯಾಗಬೇಕಿವೆ ಎಂದು ಜಿಲ್ಲಾ ಜಲಾನಯನ ಅಧಿಕಾರಿಗಳು ಮಾಹಿತಿ ನೀಡಿದರು.
ಕೃಷಿ ಪ್ರದಾನ ದೇಶ ನಮ್ಮದು. ನಮ್ಮ ಜಿಲ್ಲೆಯಲ್ಲೂ ಕೃಷಿಗೆ ಆದ್ಯತೆ ನೀಡಲಾಗುತ್ತಿದ್ದು, ಕೃಷಿ ಸೌಲಭ್ಯಗಳನ್ನು ಕೃಷಿಕರಿಗೆ ಒದಗಿಸುವ ಬಗ್ಗೆ ಉದಾಸೀನ ಮಾಡದೆ ತಲುಪಿಸುವ ಕೆಲಸಗಳನ್ನು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಮಾಡಬೇಕೆಂದು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಕೊರಗಪ್ಪ ನಾಯ್ಕ್ ಅವರು ಆದೇಶಿಸಿದರು.
ಇಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ನಲ್ಲಿ ಜರುಗಿದ ಕೆಡಿಪಿ ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅವರು, ಜಲಾನಯನ ಇಲಾಖೆಗಳ ಕಿಂಡಿ ಅಣೆಕಟ್ಟು/ ಚೆಕ್ ಡ್ಯಾಂಗಳು ನಿರ್ವಹಣೆಯಿಲ್ಲದೆ ದುಸ್ತಿತಿಯಲ್ಲಿದ್ದು, ಈ ಯೋಜನೆಗಳ ಸಮರ್ಪಕ ನಿರ್ವಹಣೆಯಿಂದ ನೂರಾರು ಕೃಷಿಕರಿಗೆ ನೆರವಾಗಲಿದೆ. ಹೊಸ ಯೋಜನೆಗಳ ಬದಲು ನಿರ್ವಹಣೆಗೆ ಆದ್ಯತೆ ನೀಡಿ ಎಂದು ಅಧ್ಯಕ್ಷರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಕ್ಕೆ ಸಂಬಂಧಿಸಿದಂತೆ ಗಂಗಾ ಕಲ್ಯಾಣ ಯೋಜನೆಯಡಿ 11-12 ನೇ ಸಾಲಿನಲ್ಲಿ 66 ಕೊಳವೆ ಬಾವಿಗಳನ್ನು ಕೊರೆಯಲು ಬಾಕಿ ಇದ್ದು, ಇವುಗಳನ್ನು ಅಕ್ಟೋಬರ್ ಅಂತ್ಯದ ವೇಳೆಗೆ ಸಂಪೂರ್ಣಗೊಳಿಸಲಾಗುವುದು. 12-13ನೇ ಸಾಲಿಗೆ ಕೊಳವೆ ಬಾವಿ ಕೊರೆಯಲು ಗುತ್ತಿಗೆದಾರರ ನೇಮಕವಾಗಿದ್ದು, ಶೀಘ್ರವೇ ಕಾಮಗಾರಿ ಆರಂಭವಾಗಲಿದೆ ಎಂದು ಅಧಿಕಾರಿಗಳು ಅಧ್ಯಕ್ಷರಿಗೆ ಮಾಹಿತಿ ನೀಡಿದರು.
ಕಾರ್ಮಿಕ ಇಲಾಖೆ ಅಧಿಕಾರಿಗಳು ಗ್ರಾಮಪಂಚಾಯತ್ನ ಗ್ರಾಮಸಭೆಗೆ ಹಾಜರಾಗುತ್ತಿಲ್ಲ ಎಂಬ ದೂರಿನ ಬಗ್ಗೆ ಅಧ್ಯಕ್ಷರು ಮಾಹಿತಿ ಕೋರಿ, ನಗರದಲ್ಲಿ ಮಾತ್ರ ಇಲಾಖೆಯು ಕರ್ತವ್ಯ ನಿರ್ವಹಿಸದೆ ಗ್ರಾಮೀಣ ಪ್ರದೇಶದ ನಾಗರೀಕರ ಬಗ್ಗೆಯೂ ಇದೇ ಬಗೆಯ ಹಿತಾಸಕ್ತಿಯನ್ನು ವಹಿಸಿಕೊಂಡು ಕಾರ್ಯೋನ್ಮುಖವಾಗಬೇಕೆಂದರು.
ಕೆಳಹಂತದ ಅಧಿಕಾರಿಗಳು ಗ್ರಾಮಸಭೆಗೆ ಹಾಜರಾಗುವುದನ್ನು ಖಾತ್ರಿ ಪಡಿಸಿಕೊಳ್ಳಿ ಎಂದು ಅಧ್ಯಕ್ಷರು ಅಧಿಕಾರಿಗಳಿಗೆ ಹೇಳಿದರು. ಗುರುತು ಚೀಟಿ ಹೊಂದಿರುವ ಕಾರ್ಮಿಕರಿಗೆ ಎಲ್ಲರೂ ಕೆಲಸ ನೀಡುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕೆಂದರು. ಕಾರ್ಮಿಕರು ಗುರುತುಚೀಟಿ ಹೊಂದಿರುವುದರಿಂದ ಅವಘಡಗಳು ನಡೆದಾಗ ಪರಿಹಾರ ನೀಡುವುದು ಸುಲಭ ಎಂದರು.
ಕ್ಷಯರೋಗದವರಿಗೆ ವಿಶೇಷ 10 ಹಾಸಿಗೆಗಳ ಸೌಲಭ್ಯ ವೆನ್ ಲಾಕ್ ಆಸ್ಪತ್ರೆಯಲ್ಲಿದ್ದು ಕ್ಷಯರೋಗಿಗಳಿಗೆ ಇಲ್ಲಿ ಶುಶ್ರೂಷೆ ನೀಡಲಾಗುವುದು ಎಂದು ಡಿಎಚ್ ಒ ಶಿವಕುಮಾರ್ ಉತ್ತರಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಪೌಷ್ಠಿಕ ಮಕ್ಕಳ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಬೇಕು.  ಬಾಲಸಂಜೀವಿನಿ ಯೋಜನೆಯಡಿ ಮಕ್ಕಳಿಗೆ ಚಿಕಿತ್ಸೆ ನೀಡುವ ಬಗ್ಗೆ ಮಾಹಿತಿ ನೀಡಬೇಕು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಲ್ಲ ಅಂಗನವಾಡಿಗಳಲ್ಲಿ ಲೈಟ್ ಮತ್ತು ಫ್ಯಾನ್ ತಿರುಗಿದ ಬಳಿಕವೇ ವಿದ್ಯುತ್ ಸಂಪರ್ಕ ಸಂಪೂರ್ಣ ಎಂಬ ವರದಿ ನೀಡಬೇಕು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ತುಳಸಿ ಮದ್ದಿನೇನಿ ಸೂಚಿಸಿದರು.
ಎಲ್ಲ ಶಾಲೆಗಳಲ್ಲಿ ಮಳೆನೀರು ಕೊಯ್ಲು ಕಾಮಗಾರಿ ನಿರ್ವಹಣೆ ಹಾಗೂ ಉಪಯೋಗದ ಬಗ್ಗೆ ಶಿಕ್ಷಣ ಇಲಾಖೆ, ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗದವರು ಸಮೀಕ್ಷೆ ಮಾಡಿ ವರದಿ ನೀಡಬೇಕೆಂದು ಅಧಿಕಾರಿಗಳಿಗೆ ಅಧ್ಯಕ್ಷರು ಸೂಚಿಸಿದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಗ್ರಾಮೀಣ ಪ್ರದೇಶಗಳಾದ ಸುಬ್ರಹ್ಮಣ್ಯ-ಕಡಬ- ಚಾರ್ಮಡಿಗೆ ಶಾಲಾ ವೇಳೆಯಲ್ಲಿ ಹೆಚ್ಚಿಗೆ ಬಸ್ ಹಾಕಬೇಕೆಂದು ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿಸಮಿತಿ ಅಧ್ಯಕ್ಷರಾದ ಶ್ರೀಮತಿ ಆಶಾ ತಿಮ್ಮಪ್ಪ ಗೌಡ ಅವರು ಒತ್ತಾಯಿಸಿದರು. ಶೀಘ್ರದಲ್ಲೇ ಬಸ್ ಗಳನ್ನು ಹಾಕುವುದಾಗಿ ಸಂಸ್ಥೆಯ ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದರು.
ಆಶ್ರಯ ನಿವೇಶನಗಳು, ಬಸವವಸತಿ ಯೋಜನೆ, ಅಂಬೇಡ್ಕರ್ ಯೋಜನೆಗಳನ್ನು ಮುಖ್ಯವಾಹಿನಿಗೆ ತರಲು ಒಂದು ತಿಂಗಳು ವಿಶೇಷ ಗಮನಹರಿಸಿ ಸಮಸ್ಯೆ ನಿವಾರಿಸಲು ಯತ್ನಿಸಲಾಗುವುದು ಎಂದು ಸಿಇಒ ಹೇಳಿದರು. 2009-10ನೇ ಸಾಲಿನವರೆಗಿನ ಯೋಜನೆಗಳ ಬಗ್ಗೆ ನಿರ್ದೇಶನಾಲಯದಿಂದ ಸ್ಷಷ್ಟ ಸುತ್ತೋಲೆ ಬಂದಿದ್ದು ಎಲ್ಲ ಯೋಜನೆಗಳನ್ನು ರದ್ದು ಪಡಿಸಲಾಗುವುದು. ನಂತರದ ಸಾಲಿನ ಮನೆಗಳ ಬಗ್ಗೆ ಪರಿಶೀಲನೆ ನಡೆಸಿ ಕ್ರಮಕೈಗೊಳ್ಳಲಾಗುವುದು ಎಂದು ಸಿಇಒ ಸ್ಪಷ್ಟಪಡಿಸಿದರು.
ಅನ್ನಭಾಗ್ಯ ಯೋಜನೆ ಬಗ್ಗೆ ಜಿಲ್ಲೆಯಲ್ಲಿ 1,87,000 ಫಲಾನುಭವಿಗಳಿದ್ದು, 5,100 ಟನ್ ಅಕ್ಕಿ ಎತ್ತುವರಿಯಾಗಿದೆ. 130ಟನ್ ಗೋಧಿ ವಿತರಣೆಯಾಗಿದೆ ಎಂದು ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಉಪನಿರ್ದೇಶಕರು ಮಾಹಿತಿ ನೀಡಿದರು.
8,000 ಎಪಿಎಲ್ ಮತ್ತು 8,000 ಬಿಪಿಎಲ್ ಪಡಿತರ ಚೀಟಿದಾರರ ಅರ್ಜಿ ಸ್ವೀಕರಿಸಲಾಗಿದೆ. ಬಿಪಿಎಲ್ ಗೆ ಅರ್ಹರಾಗಿರುವ ಪಡಿತರ ಚೀಟಿದಾರರು ಆನ್ ಲೈನ್ ನಲ್ಲಿ ಎಪಿಎಲ್ ಕಾಡ್ರ್  ಒಪ್ಪಿಸಿ ಅರ್ಜಿ ಹಾಕಬಹುದು ಎಂದು ಉಪನಿರ್ದೇಶಕರು ಸ್ಪಷ್ಟಪಡಿಸಿದರು.
ಕೃಷಿ ಇಲಾಖೆ, ಮೀನುಗಾರಿಕೆ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಕೃಷಿ ಕ್ಷೇತ್ರದಲ್ಲಿ ದುಡಿಯುವ ಕಾರ್ಮಿಕರು ಕೂಲಿ ಮಾಡುವಾಗ ಅವಘಡ ಸಂಭವಿಸಿದರೆ ಆ ಭೂಮಿಯ ಆರ್ ಟಿ ಸಿ ಹಾಗೂ ದೃಢೀಕರಣದ ಮೇಲೆ ಅವರಿಗೆ ಪರಿಹಾರ ನೀಡುವ ಬಗ್ಗೆ ಚರ್ಚಿಸಲಾಯಿತು.
ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಫಕೀರ, ಉಪಕಾರ್ಯದರ್ಶಿ ಉಮೇಶ್ ಎನ್ ಆರ್. ಉಪಸ್ಥಿತರಿದ್ದರು.