Monday, August 12, 2013

ಅಡಿಕೆ ಕೊಳೆರೋಗ ಪರಿಹಾರಕ್ಕೆ ಕ್ರಮ: ರಮಾನಾಥ ರೈ

ಮಂಗಳೂರು, ಆಗಸ್ಟ್ 12:-ಕೃಷಿ ಪ್ರದಾನ ದೇಶ ನಮ್ಮದು. ಕೃಷಿ ಅಭಿವೃದ್ಧಿಯಿಂದ ರೈತರ ಅಭಿವೃದ್ಧಿ ಹಾಗೂ ದೇಶದ ಅಭಿವೃದ್ಧಿ. ಪ್ರಸಕ್ತ ಸಾಲಿನಲ್ಲಿ ಕೃಷಿ ಚಟುವಟಿಕೆಗಳಿಗೆ ಪೂರಕವಾಗಿ ಉತ್ತಮ ಮಳೆಯಾಗಿದ್ದು, ಉತ್ತಮ ಬೆಳೆಯಾಗಲಿ ಎಂದು ರಾಜ್ಯ ಅರಣ್ಯ,ಪರಿಸರ ಮತ್ತು ಜೀವೀಶಾಸ್ತ್ರ ಸಚಿವರು ಹಾಗೂ ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ರಮಾನಾಥ ರೈ ಅವರು ಹೇಳಿದರು.
ಅವರಿಂದು ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್, ತೋಟಗಾರಿಕೆ ಇಲಾಖೆ ದಕ್ಷಿಣಕನ್ನಡ ಜಿಲ್ಲೆ ವತಿಯಿಂದ ತೋಟಗಾರಿಕೆ ಪಿತಾಮಹ ಡಾ.ಎಂ.ಹೆಚ್.ಮರಿಗೌಡರ ಜನ್ಮ ದಿನಾಚರಣೆ ಪ್ರಯುಕ್ತ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿಯಲ್ಲಿ ಹಮ್ಮಿಕೊಂಡ ಗೇರು ಬೆಳೆ ಪುನಶ್ಚೇತನ ಹಾಗೂ ಜೇನು ಕೃಷಿ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ಕರಾವಳಿ ಜಿಲ್ಲೆಯಲ್ಲಿ ಭತ್ತ ಪ್ರಮುಖ ಬೆಳೆಯಾಗಿತ್ತು. ಆದರೆ ವಾಣಿಜ್ಯ ಬೆಳೆಗಳು ಜನಪ್ರಿಯವಾದ ಹಿನ್ನಲೆಯಲ್ಲಿ ರೈತರು ಭತ್ತ ಬೆಳೆಯುವುದನ್ನು ನಿಲ್ಲಿಸಿ, ಅಡಿಕೆ, ಗೇರು, ತೆಂಗು ರಬ್ಬರ್, ಏಲಕ್ಕಿ, ಕೊಕ್ಕೋ ವೆನಿಲಾದಂತಹ ಬೆಳೆಗಳನ್ನು ಬೆಳೆಯಲಾರಂಭಿಸಿದರು. ವಿವಿಧ ಕಾರಣಗಳಿಂದ ರೈತರಿಗೆ ಇದು ಅನಿವಾರ್ಯವಾಗಿತ್ತು ಎಂದು ಸಚಿವರು ಹೇಳಿದರು.
ಆದರೆ ಇಂದು ಕೊಳೆರೋಗ ಅಡಿಕೆ ಬೆಳೆಗಾರರನ್ನು ಕಾಡುತ್ತಿದ್ದು, ಈ ನಿಟ್ಟಿನಲ್ಲಿ ರೈತರಿಗೆ ಪರಿಹಾರ ನೀಡಲು ತಮ್ಮ ಸರ್ಕಾರ ಕಾರ್ಯೋನ್ಮುಖವಾಗಿದೆ ಎಂದು ಸಚಿವರು ಭರವಸೆ ನೀಡಿದರು. ಅಡಿಕೆಗೆ ಧಾರಣೆ ಉತ್ತಮವಿದೆ, ಆದರೆ ರೋಗಬಾಧೆಯಿಂದ ರೈತರು ಕಂಗೆಟ್ಟಿರುವುದು ತಮ್ಮ ಗಮನಕ್ಕೆ ಬಂದಿದೆ. ರೈತರು ತಮ್ಮ ಸಮಸ್ಯೆಗಳ ಪರಿಹಾರಕ್ಕೆ ಇತರರನ್ನು ಆಶ್ರಯಿಸದೆ ತಾವೇ ಪರಿಹಾರ ಕಂಡುಕೊಳ್ಳಲು ಸಮರ್ಥರಾಗಬೇಕೆಂದು ಅವರು ನುಡಿದರು.
ಕೃಷಿಯ ಜೊತೆ ಅರಣ್ಯ ಸಂರಕ್ಷಣೆ, ಕಾಡು ಉಳಿಸುವುದು ನಮ್ಮ ಆದ್ಯ ಕರ್ತವ್ಯಗಳಲ್ಲೊಂದಾಗಬೇಕು; ಅಳಿದ ಸಸ್ಯ ಸಂಕುಲಗಳು, ಪ್ರಾಣಿ ಸಂಕುಲಗಳಿಂದ ಪ್ರಾಕೃತಿಕ ಸಮತೋಲನ ತಾಳತಪ್ಪಲಿದೆ. ಹಾಗಾಗಿ ಪರಿಸರವಿದ್ದರೆ ನಾವು ಎಂಬುದನ್ನು ಮನಗಂಡು ಪರಿಸರಸ್ನೇಹಿ ಬದುಕು ಬದುಕಿ ಎಂದು ಉಸ್ತುವಾರಿ ಸಚಿವರು ಸಲಹೆ ಮಾಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ತುಳಸಿ ಮದ್ದಿನೇನಿ, ಈ ವರ್ಷ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಉದ್ಯೋಗ ಚೀಟಿ ಹೊಂದಿರುವ 15ರಿಂದ 20 ಮಂದಿಯ `ಕಾಯಕ ಸಂಘ' ರಚಿಸಿ ಗ್ರಾಮ ಸಭೆಗಳಲ್ಲಿ ಅನುಮೋದನೆ ಪಡೆದು ಕೃಷಿ ಕಾರ್ಯಗಳಿಗೆ ಒತ್ತು ನೀಡಲು ಕಾರ್ಯಕ್ರಮ ರೂಪಿಸಲಾಗಿದೆ ಎಂದು ಹೇಳಿದರು.
ತೋಟಗಾರಿಕಾ ಇಲಾಖೆಯಡಿ ಅಡಿಕೆ, ತೆಂಗು, ಮಲ್ಲಿಗೆ, ಹೂವಿನ ಕೃಷಿಗೆ ಹೆಚ್ಚಿನ ಒತ್ತು ನೀಡಲಾಗುವುದು. ಮಾತ್ರವಲ್ಲದೆ, ಶಾಲೆ ಹಾಗೂ ಅಂಗನವಾಡಿ ವಠಾರಗಳಲ್ಲಿ ಹಣ್ಣಿನ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
              ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ  ಜೆ.ಆರ್.ಲೋಬೋ ಮಾತನಾಡಿ ಗೇರು ಕೃಷಿಯ ಬಗ್ಗೆ ಜಿಲ್ಲೆಯಲ್ಲಿ ಕಳೆದ ಸುಮಾರು 70 ವರ್ಷಗಳಿಂದ ಉತ್ತೇಜನ ನೀಡುವ ಕೆಲಸ ಮಾಡಲಾಗುತ್ತಿದೆ. ಕಡಿಮೆ ಜನರನ್ನು ಬಳಸಿ ಅಧಿಕ ಇಳುವರಿ ಪಡೆಯುವುದು ಗೇರು ಕೃಷಿಯಿಂದ ಸಾಧ್ಯ. ಈ ಬಗ್ಗೆ ಸೂಕ್ತ ಮಾಹಿತಿ ನೀಡಿ ಕೃಷಿಕರನ್ನು ಉತ್ತೇಜಿಸುವ ಕೆಲಸ ಆಗಬೇಕು ಎಂದರು.
ಇದೇ ಸಂದರ್ಭದಲ್ಲಿ ಹಾರ್ಟಿ ಕ್ಲಿನಿಕ್- ತೋಟದ ಸೊಗಡು ಕೃಷಿ ಸಂಬಂಧಿತ ಪ್ರಕಟಣೆಗಳನ್ನು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾಧ ರಿತೇಶ್ ಕುಮಾರ್ ಶೆಟ್ಟಿ ಬಿಡುಗಡೆ ಮಾಡಿದರು. ಕೃಷಿ ಮತ್ತುಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀಮತಿ ಜಯಶ್ರೀ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀಮತಿ ಆಶಾ ತಿಮ್ಮಪ್ಪಗೌಡ ಇಲಾಖಾ ಕೈಪಿಡಿ, ತೋಟಗಾರಿಕಾ ಮಿಷನರ್, ಸಾವಯವ ತೋಟಗಾರಿಕೆ ಅಭಿವೃದ್ಧಿ ಕುರಿತ ಪ್ರಕಟಣೆಗಳನ್ನು ಬಿಡುಗಡೆ ಮಾಡಿದರು. ಸಂಪನ್ಮೂಲ ವ್ಯಕ್ತಿಗಳಾದ ಡಾ ಗಂಗಾಧರ ನಾಯಕ್ ಉಪಸ್ಥಿತರಿದ್ದರು.
ತೋಟಗಾರಿಕೆ ಇಲಾಖೆ ಉಪನಿರ್ದೇಶಕರಾದ ಯೋಗೇಶ ಹೆಚ್ ಆರ್ ಸ್ವಾಗತಿಸಿದರು. ಸಹಾಯಕ ನಿರ್ದೇಶಕರಾದ ಸಂಜೀವ್ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು.