Friday, August 30, 2013

ಮಾಹಿತಿ ತಂತ್ರಜ್ಞಾನ; ರಾಜ್ಯದಲ್ಲಿ 40 ಲಕ್ಷ ಉದ್ಯೋಗ ಸೃಷ್ಠಿ -ಎಸ್.ಆರ್.ಪಾಟೀಲ್

ಮಂಗಳೂರು,ಆಗಸ್ಟ್. 30: ಮುಂದಿನ ದಿನಗಳಲ್ಲಿ ಕರ್ನಾಟಕ ರಾಜ್ಯದಲ್ಲಿ ಮಾಹಿತಿ ತಂತ್ರಜ್ಞಾನದ  ಕ್ಷೇತ್ರದಲ್ಲಿ ಅಪಾರ0 ಬಂಡವಾಳ ಹೂಡಿಕೆಯಾಗಲಿದ್ದು, ಈ ಮೂಲಕ ಮಂಗಳೂರು,ಮೈಸೂರು,ಹುಬ್ಬಳ್ಳಿ-ಧಾರಾವಾಡ, ಗುಲ್ಬರ್ಗಾ, ಬೆಳಗಾವಿ, ತುಮುಕೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ನೇರವಾಗಿ 12 ಲಕ್ಷ ಜನರಿಗೆ ಹಾಗೂ ಪರೋಕ್ಷವಾಗಿ 28 ಲಕ್ಷ ಜನರಿಗೆ ಉದ್ಯೋಗ ಭಾಗ್ಯ ಒದಗಲಿದೆ ಎಂದು  ರಾಜ್ಯ ಮಾಹಿತಿ ತಂತ್ರಜ್ಞಾನ,ಜೈವಿಕ ತಂತ್ರಜ್ಞಾನ,ಯೋಜನೆ ಹಾಗೂ ಅಂಕಿ ಸಂಖ್ಯೆಗಳ ಖಾತೆ ಸಚಿವರಾದ  ಎಸ್. ಆರ್.ಪಾಟೀಲ್ ತಿಳಿಸಿದ್ದಾರೆ.
ಅವರು ಇಂದು ಮಂಗಳೂರಿನಲ್ಲಿ ಕರ್ನಾಟಕ ಸರ್ಕಾರ ,ಬೆಂಗಳೂರಿನ ಇನ್ ಫರ್ಮೇಷನ್ ಟೆಕ್ನಾಲಜಿ ಬಿಜ್ ವತಿಯಿಂದ ಆಯೋಜಿಸಿದ್ದ ಹೊಸ ಪ್ರದೇಶಗಳಿಗೆ ಮಾಹಿತಿ ತಂತ್ರಜ್ಞಾನ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕ ರಾಜ್ಯದ ಮಾಹಿತಿ ತಂತ್ರಜ್ಞಾನ ರಫ್ತಿನಿಂದ 2012-13 ನೇ ಸಾಲಿನಲ್ಲಿ ರೂ.1.35 ಲಕ್ಷ ಕೋಟಿವಿದೇಶಿ ವಿನಿಮಯ ಗಳಿಸಿದ್ದು, ಎರಡನೇ ಪಂಕ್ತಿ ನಗರಗಳಾದ ಮೈಸೂರು,ಮಂಗಳೂರು ಮತ್ತು ಹುಬ್ಬಳ್ಳಿ,ಧಾರವಾಡ ನಗರಗಳ ಪಾಲು ರೂ.2,680 ಕೋಟಿಗಳಾಗಿದೆ. ಎರಡನೇ ಪಂಕ್ತಿ ನಗರಗಳು ಮುಂದಿನ ದಿನಗಳಲ್ಲಿ ಮಾಹಿತಿ ತಂತ್ರಜ್ಞಾನ ರಫ್ತಿನಿಂದ ಸುಮಾರು ರೂ.4,000 ಕೋಟಿ ಆದಾಯ ಗಳಿಸುವ ವಿಶ್ವಾಸ ಹೊಂದಿರುವುದಾಗಿ ಸಚಿವರು ಆಶಾಭಾವ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ಉಪಸ್ಥಿತರಿದ್ದ ಅರಣ್ಯ,ಪರಿಸರ,ಜೀವಿಶಾಸ್ತ್ರ ಹಾಗೂ ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ರಮಾನಾಥ ರೈ ಅವರು ಮಾತನಾಡಿ, ಜಿಲ್ಲೆಯ ಜನ ಅತ್ಯಂತ ಉದ್ಯಮಶೀಲರಾಗಿದ್ದು,ದೇಶದಲ್ಲೇ ಅಲ್ಲದೆ ವಿದೇಶಗಳಲ್ಲಿ ಕೈಗಾರಿಕೆ ಬ್ಯಾಂಕುಗಳನ್ನು ಸ್ಥಾಪಿಸಿದ್ದಾರೆ. ಆದ್ದರಿಂದ ಈ ಜಿಲ್ಲೆ ಮಾಹಿತಿ ತಂತ್ರಜ್ಞಾನ ಪಾರ್ಕ್  ಆಗುವುದರಿಂದ ಜಿಲ್ಲೆಯ ಜನತೆಗೆ ಹೆಚ್ಚಿನ ಉದ್ಯೋಗಾವಕಾಶಗಳು ಲಭಿಸಲಿವೆ ಎಂದರು.
              ರಾಜ್ಯ ಮೀನುಗಾರಿಕೆ ಹಾಗೂ ಯುವಜನ ಸೇವಾ ಮತ್ತು ಕ್ರೀಡಾ ಸಚಿವರಾದ ಕೆ.ಅಭಯಚಂದ್ರ ಜೈನ್ ಅವರು ಮಾತನಾಡಿ ಬೆಂಗಳೂರು ನಂತರ ಅತ್ಯಂತ ಹೆಚ್ಚಿನ ಇಂಜಿನಿಯರ್ ಗಳು ಅವಿಭಾಜಿತ ದಕ್ಷಿಣ ಕನ್ನಡ ಜಿಲ್ಲೆಯ  ಕಾಲೇಜುಗಳಲ್ಲಿ ಪದವಿ ಪಡೆದು ಹೊರಬರುತ್ತಿದ್ದಾರೆ. ಆದ್ದರಿಂದ ಇಂತಹ ವಿದ್ಯಾವಂತ ನಿರದ್ಯೋಗಿಗಳಿಗೆ ಮಾಹಿತಿ ತಂತ್ರಜ್ಞಾನ ಕಂಪೆನಿಗಳು ಉದ್ಯೋಗ ಒದಗಿಸುವ ತಾಣಗಳಾಗಬೇಕೆಂದರು.
 ಆರೋಗ್ಯ ಸಚಿವ ಯು.ಟಿ,ಖಾದರ್ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಮಾಹಿತಿ ತಂತ್ರಜ್ಞಾನ ಪಾರ್ಕಿಗೆ ವಿಪುಲ ಅವಕಾಶಗಳಿದ್ದು, ಕೈಗಾರಿಕೆ ಸ್ಥಾಪಿಸಲು ಭೂಮಿಯನ್ನು ಪಡೆದು ಹಲವಾರು ವರ್ಷಗಳ ವರೆಗೂ ಜಮೀನನ್ನು ಹಾಗೇ ಬಿಡುತ್ತಿರುವುದು ಉದ್ಯಮಿಗಳಿಂದ ನಡೆಯುತ್ತಿದೆ. ಇದು ತಪ್ಪಿ ಉದ್ಯಮಪತಿಗಳು ತಮ್ಮ ಉದ್ಯಮವನ್ನು ಅತೀ ಶೀಘ್ರವಾಗಿ ಆರಂಭಿಸುವ ಮೂಲಕ ಜಿಲ್ಲೆಯ ಜನರಿಗೆ ಉದ್ಯೋಗಾವಕಾಶಗಳನ್ನು ಸೃಷ್ಠಿ ಮಾಡಬೇಕೆಂದರು.
ಮಾಹಿತಿ ತಂತ್ರಜ್ಞಾನ ಹಾಗೂ ವಿಜ್ಞಾನ ತಂತ್ರಜ್ಞಾನ ಇಲಾಖೆ ಮುಖ್ಯಕಾರ್ಯದರ್ಶಿ ಎನ್.ಎಸ್.ಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಚಾರ ಸಂಕಿರಣದಲ್ಲಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಿ ಮಾತನಾಡಿದ ಇನ್ಫೋಸಿಸ್  ಉಪಾಧ್ಯಕ್ಷ  ಕ್ರಿಸ್ ಗೋಪಾಲಕೃಷ್ಣ ಅವರು ಮಾಹಿತಿ ತಂತ್ರಜ್ಞಾನ ಭವಿಷ್ಯದಲ್ಲಿ ದೇಶದ ಆರ್ಥಿಕತೆಗೆ ಬಹು ದೊಡ್ಡ ಪಾಲನ್ನು ನೀಡಲಿದ್ದು, ಸರ್ಕಾರವೂ ಇದಕ್ಕೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕೆಂದರು.ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎನ್. ಪ್ರಕಾಶ್, ಕೆನರ ವಾಣಿಜ್ಯ ಮತ್ತು ಕೈಗಾರಿಕ ಸಂಸ್ಥೆಯ ಅಧ್ಯಕ್ಷ ಮೊಹಮ್ಮದ್ ಅಮೀನ್ ಸಮಾರಂಭದಲ್ಲಿ ಉಪಸ್ಥಿತರಿದ್ದರು.ಬೆಂಗಳೂರಿನ  ಎಸ್ ಟಿಪಿಐ ಸಂಸ್ಥೆ ನಿರ್ದೇಶಕ ಪಿ.ಕೆ ದಾಸ್ ವಂದಿಸಿದರು. ವಿದ್ಯಾದಿನಾಕರ್ ಕಾರ್ಯಕ್ರಮ ನಿರೂಪಣೆ ಮಾಡಿದರು.